ನವದೆಹಲಿ: ‘ನನ್ನನ್ನು ಬಂಧಿಸಲು ಜಾರಿ ನಿರ್ದೇಶನಾಲಯ(ಇ.ಡಿ) ತಂಡ ನನ್ನ ಮನೆಗೆ ತಲುಪಿದೆ’ ಎಂದು ಎಎಪಿ ಹಿರಿಯ ನಾಯಕ ಅಮಾನತುಲ್ಲಾ ಖಾನ್ ಹೇಳಿದ್ದಾರೆ.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖಾನ್, ‘ಸರ್ವಾಧಿಕಾರಿಯ ಆಜ್ಞೆಯ ಮೇರೆಗೆ ಇಂದು ಮುಂಜಾನೆ ಅವರ ಕೈಗೊಂಬೆ ಇ.ಡಿ ನನ್ನ ಮನೆಗೆ ತಲುಪಿದೆ. ನನಗೆ ಮತ್ತು ಇತರ ಎಎಪಿ ನಾಯಕರಿಗೆ ಕಿರುಕುಳ ನೀಡುವ ಯಾವುದೇ ಅವಕಾಶವನ್ನು ಸರ್ವಾಧಿಕಾರಿ ಬಿಡುತ್ತಿಲ್ಲ’ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.
‘ತನಿಖಾ ಸಂಸ್ಥೆ ಕಳುಹಿಸಿದ ಎಲ್ಲ ನೋಟಿಸ್‌ಗಳಿಗೆ ನಾನು ಉತ್ತರಿಸುತ್ತಿದ್ದೇನೆ. ಆದರೂ ನನ್ನನ್ನು ಬಂಧಿಸಲು ಇಲ್ಲಿಗೆ ಬಂದಿದ್ದಾರೆ’ ಎಂದು ವಿಡಿಯೊ ಸಂದೇಶದಲ್ಲಿ ಖಾನ್ ಹೇಳಿದ್ದಾರೆ.
ಹಣ ಅಕ್ರಮ ವರ್ಗಾವಣೆಯ ತನಿಖೆಯ ಭಾಗವಾಗಿ ಇ.ಡಿ ತಂಡ ಓಖ್ಲಾದಲ್ಲಿರುವ ಖಾನ್ ಅವರ ಮನೆಗೆ ಮುಂಜಾನೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಖಾನ್ ಅವರ ನಿವಾಸದಲ್ಲಿ ದೆಹಲಿ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ತಂಡಗಳನ್ನು ನಿಯೋಜಿಸಲಾಗಿದೆ.