ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ರಕ್ಷಣೆಗೆ ಕಾನೂನು ಕವಚ

ಪರಿಶಿಷ್ಟ ಜಾತಿ/ಪಂಗಡ ಕಾಯ್ದೆ ತಿದ್ದುಪಡಿ ಮಸೂದೆಗೆ ಈ ಅಧಿವೇಶನದಲ್ಲೇ ಅಂಗೀಕಾರ?
Last Updated 1 ಆಗಸ್ಟ್ 2018, 19:21 IST
ಅಕ್ಷರ ಗಾತ್ರ

ನವದೆಹಲಿ: ಯಾವುದೇ ರೀತಿಯ ದೌರ್ಜನ್ಯದಿಂದ ದಲಿತ ಸಮುದಾಯವನ್ನು ರಕ್ಷಿಸುವ ನಿಯಮಗಳನ್ನು ಮರು ಸ್ಥಾಪಿಸುವುದಕ್ಕಾಗಿ ತಿದ್ದುಪಡಿ ಮಸೂದೆ ಮಂಡಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ. ಈಗ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿಯೇ ಮಸೂದೆಯನ್ನು ಅಂಗೀಕರಿಸಲು ನಿರ್ಧರಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಲ್ಲಿ (ಎಸ್‌ಸಿ/ಎಸ್‌ಟಿ ಕಾಯ್ದೆ) ಇರುವ ಮೂಲ ಅಂಶಗಳನ್ನೇ ಉಳಿಸಿಕೊಳ್ಳುವುದು ತಿದ್ದುಪಡಿ ಮಸೂದೆಯ ಉದ್ದೇಶ.

ಸುಪ್ರೀಂ ಕೋರ್ಟ್‌ ಮಾರ್ಚ್‌ 30ರಂದು ನೀಡಿದ್ದ ತೀರ್ಪಿನಲ್ಲಿ ಈ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿದ್ದವು. ಮಸೂದೆಯ ಮೂಲ ನಿಯಮಗಳನ್ನು ಉಳಿಸಿಕೊಳ್ಳದೇ ಇದ್ದರೆ ಇದೇ 9ರಂದು ‘ಭಾರತ ಬಂದ್‌’ ನಡೆಸುವುದಾಗಿ ಘೋಷಿಸಿದ್ದವು. ಹಾಗಾಗಿ, ಈ ಗಡುವಿನೊಳಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ನ್ಯಾಯಾಲಯದ ಆದೇಶವನ್ನು ರದ್ದು ಮಾಡುವುದಕ್ಕಾಗಿ ಹೊಸ ಕಾನೂನು ತರಬೇಕು ಎಂದು ಬಿಜೆಪಿಯ ಮಿತ್ರಪಕ್ಷ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್‌ ವಿಲಾಸ್‌ ಪಾಸ್ವಾನ್‌ ಒತ್ತಾಯಿಸಿದ್ದರು. ದಲಿತ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ಬಿಜೆಪಿಯ ಹಲವು ಸಂಸದರು ಕೂಡ ಪಾಸ್ವಾನ್‌ ಬೇಡಿಕೆಗೆದನಿಗೂಡಿಸಿದ್ದರು.

ತಿದ್ದುಪಡಿ ಸುತ್ತ ಮುತ್ತ

ಕಾಯ್ದೆಯಲ್ಲಿ ಏನಿದೆ?

* ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ 1989ಕ್ಕೆ ಸೆಕ್ಷನ್‌ 18 (ಎ) ಸೇರ್ಪಡೆ

* ಯಾವುದೇ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲು ಪ್ರಾಥಮಿಕ ತನಿಖೆಯ ಅಗತ್ಯ ಇಲ್ಲ

* ಈ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದಾದ ಅಪರಾಧ ಎಸಗಿದ ಆರೋಪಿಯನ್ನು ಬಂಧಿಸಲು ಯಾವುದೇ ಪೂರ್ವಾನುಮತಿ ಬೇಕಿಲ್ಲ; ಈ ಕಾಯ್ದೆ ಅಥವಾ ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ (ಸಿಆರ್‌ಪಿಸಿ) ಇರುವುದನ್ನು ಬಿಟ್ಟು ಬೇರೆ ಯಾವುದೇ ನಿಯಮಗಳು ಅನ್ವಯ ಆಗುವುದಿಲ್ಲ

* ಈ ಕಾಯ್ದೆಯ ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಿಆರ್‌ಪಿಸಿಯ ಸೆಕ್ಷನ್‌ 348 ಅನ್ವಯ ಆಗುವುದಿಲ್ಲ. ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅನ್ವಯಿಸುವುದಿಲ್ಲ

ತರ್ಕ ಏನು?

* ಆರೋಪಿಯು ಅಪರಾಧ ಎಸಗಿದ್ದಾನೆ ಎಂದು ತನಿಖಾಧಿಕಾರಿ ಭಾವಿಸಲು ಕಾರಣಗಳಿದ್ದರೆ ಆರೋಪಿಯನ್ನು ಬಂಧಿಸಬಹುದು ಎಂದು ಸಿಆರ್‌ಪಿಸಿಯ 41ನೇ ಸೆಕ್ಷನ್‌ ಹೇಳುತ್ತದೆ. ಹಾಗಾಗಿ ಬಂಧಿಸುವ ಅಥವಾ ಬಂಧಿಸದಿರುವ ತನಿಖಾಧಿಕಾರಿಯ ಅಧಿಕಾರವನ್ನು ಮೊಟಕುಗೊಳಿಸಲಾಗದು

ಕಾರಣ ಏನು?

* ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯನ್ನು ಬಂಧಿಸಬೇಕಾದರೆ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಬೇಕು. ನಾಗರಿಕರನ್ನು ಬಂಧಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ಅನುಮತಿ ಪಡೆಯಬೇಕು. ಬಂಧಿಸುವ ಮೊದಲು ಪೂರ್ವಭಾವಿ ತನಿಖೆ ನಡೆಸಬೇಕು ಎಂದು ಮಾರ್ಚ್‌ 20
ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

* ಇದರ ವಿರುದ್ಧ ದಲಿತ ಸಮುದಾಯದ ಜನರು ಭಾರಿ ಪ್ರತಿಭಟನೆ ನಡೆಸಿದ್ದರು. ಏಪ್ರಿಲ್‌ 2ರಂದು ದೇಶದಾದ್ಯಂತ ನಡೆದ ಬಂದ್‌ನಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು

*ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ದಲಿತ ಹೋರಾಟಕ್ಕೆ ಬೆಂಬಲ ನೀಡಿದ್ದವು. ಸುಪ್ರೀಂ ಕೋರ್ಟ್‌ ತೀರ್ಪು ರದ್ದುಪಡಿಸಲು ಸುಗ್ರೀವಾಜ್ಞೆ ತರುವ ಬಗ್ಗೆ ಕೇಂದ್ರ ಸರ್ಕಾರ ಮೊದಲು ಯೋಚಿಸಿತ್ತು

*ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ

ಬಡ್ತಿ ಮೀಸಲು ತೀರ್ಪು ಮರುಪರಿಶೀಲನೆ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ಯೋಗಿಗಳ ಬಡ್ತಿ ಮೀಸಲಾತಿಗೆ ಸಂಬಂಧಿಸಿ 2006ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಸಂವಿಧಾನ ಪೀಠವು ಮರುಪರಿಶೀಲನೆಗೆ ಒಳಪಡಿಸಲಿದೆ. ಶುಕ್ರವಾರದಿಂದ ವಿಚಾರಣೆ ಆರಂಭವಾಗಲಿದೆ.

ಈ ಸಮುದಾಯಗಳ ಉದ್ಯೋಗಿಗಳಿಗೆ ಬಡ್ತಿ ನೀಡುವಾಗ ಹಿಂದುಳಿದಿರುವಿಕೆ, ಪ್ರಾತಿನಿಧ್ಯ ಇಲ್ಲದಿರುವಿಕೆ ಮತ್ತು ಒಟ್ಟು ಕಾರ್ಯಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಕೆನೆಪದರ ನಿಯಮವು ಎಸ್‌ಸಿ, ಎಸ್‌ಟಿ ಉದ್ಯೋಗಿಗಳ ಬಡ್ತಿಗೆ ಅನ್ವಯ ಆಗುವುದಿಲ್ಲ ಎಂದು ಎಂ. ನಾಗರಾಜ್‌ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 2006ರಲ್ಲಿ ತೀರ್ಪು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT