ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯುನಲ್ಲಿ ಎಡ– ಬಲ ಘರ್ಷಣೆ: ನಾಲ್ವರಿಗೆ ಗಾಯ

ಚುನಾವಣಾ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ಹಿಂಸಾಚಾರ -ಪರಸ್ಪರರ ವಿರುದ್ಧ ದೂರು ದಾಖಲು
Published 1 ಮಾರ್ಚ್ 2024, 13:50 IST
Last Updated 1 ಮಾರ್ಚ್ 2024, 13:50 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ಎಬಿವಿಪಿ ಮತ್ತು ಎಡ ಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರನ್ನು ಸಫ್ಚರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. 

ವಿಶ್ವವಿದ್ಯಾಲಯದ ಭಾಷಾ ವಿಷಯಗಳ ಕಟ್ಟಡದಲ್ಲಿ ಗುರುವಾರ ತಡರಾತ್ರಿ ಘರ್ಷಣೆ ನಡೆದಿದೆ. ಈ ಸಂಬಂಧ ಎರಡೂ ಗುಂಪುಗಳು ಪರಸ್ಪರರ ವಿರುದ್ಧ ವಸಂತ್‌ ಕುಂಜ್‌ ನಾರ್ಥ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿವೆ.

‘ವಿ.ವಿ ಆವರಣದಲ್ಲಿ ನಡೆದ ಘರ್ಷಣೆ ಕುರಿತು ತಡರಾತ್ರಿ 1.15ರ ಸುಮಾರಿಗೆ ನಮಗೆ ಮಾಹಿತಿ ಬಂದಿತು. ಘರ್ಷಣೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಸಂಬಂಧ ಎರಡೂ ಕಡೆಯಿಂದ ದೂರುಗಳು ಬಂದಿದ್ದು, ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವಿಡಿಯೊ ತುಣುಕುಗಳು ಬಹಿರಂಗ:

ಈ ಘಟನೆಗೆ ಸಂಬಂಧಿಸಿದ ಕೆಲ ವಿಡಿಯೊ ತುಣುಕುಗಳು ಬಹಿರಂಗವಾಗಿವೆ. ಒಂದರಲ್ಲಿ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳನ್ನು ಕೋಲಿನಿಂದ ಥಳಿಸುತ್ತಿರುವುದು ದಾಖಲಾಗಿದ್ದರೆ, ಮತ್ತೊಂದರಲ್ಲಿ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಬೈಸಿಕಲ್‌ ಎಸೆದಿರುವುದು ಕಂಡು ಬರುತ್ತದೆ. ಅಲ್ಲದೆ ಒಬ್ಬೊಬ್ಬರನ್ನು ಗುಂಪು ಗುಂಪಾಗಿ ಥಳಿಸುತ್ತಿರುವುದು ಹಾಗೂ ಅವರನ್ನು ರಕ್ಷಿಸಲು ವಿ.ವಿಯ ಭದ್ರತಾ ಸಿಬ್ಬಂದಿ ಪ್ರಯತ್ನಿಸುತ್ತಿರುವುದು ದಾಖಲಾಗಿದೆ.

‘ವಿಡಿಯೊದಲ್ಲಿ ಕಾಣುವ, ಕೋಲಿನಿಂದ ಹೊಡೆದ ಹಾಗೂ ಬೈಸಿಕಲ್‌ ಎಸೆದ ವ್ಯಕ್ತಿಯು ತನ್ನ ಜೆಎನ್‌ಯು ಘಟಕದ ಸದಸ್ಯರಾಗಿದ್ದು, ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಮೂಲಕ ಪ್ರಯತ್ನಿಸಿದ್ದಾರೆ’ ಎಂದು ಎಬಿವಿಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ. 

ಮತ್ತೊಂದೆಡೆ, ಚುನಾವಣಾ ಸಮಿತಿ ಸದಸ್ಯರ ಆಯ್ಕೆಯಿಂದ ಅಸಮಾಧಾನಗೊಂಡ ಎಬಿವಿಪಿ ಸದಸ್ಯರು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ (ಜೆಎನ್‌ಯುಎಸ್‌ಯು) ಪದಾಧಿಕಾರಿಗಳು ಮತ್ತು ಇತರ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಡ ಪಕ್ಷಗಳ ಬೆಂಬಲಿತ ಗುಂಪುಗಳು ಆರೋಪಿಸಿವೆ. 

ಜೆಎನ್‌ಯುಎಸ್‌ಯು ಅಧ್ಯಕ್ಷರಾದ ಐಶೆ ಘೋಷ್‌ ಜತೆಗೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆಎನ್‌ಯುಎಸ್‌ಯು ಜಂಟಿ ಕಾರ್ಯದರ್ಶಿ ಮೊಹಮ್ಮದ್‌ ದಾನಿಶ್‌ ಅವರು, ತನ್ನ ಧಾರ್ಮಿಕ ಗುರುತಿನ ಕಾರಣದಿಂದಾಗಿ ಎಬಿವಿಪಿ ಸದಸ್ಯರಿಂದ ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ. ಸಭೆಯ ವೇಳೆ ತನ್ನನ್ನು ಒತ್ತೆಯಾಳಾಗಿ ಇರಿಸಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ. 

ಎಐಎಸ್‌ಎ ಹೇಳುವುದೇನು?:

‘ಸಭೆಯ ಕೊನೆಯಲ್ಲಿ ಎಬಿವಿಪಿ ಚುನಾವಣಾ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಅಡ್ಡಿಪಡಿಸಲು ಪ್ರಯತ್ನಿಸಿ, ವಿದ್ಯಾರ್ಥಿಗಳ ಮೇಲೆ ಹಿಂಸಾಚಾರ ನಡೆಸಿತು’ ಎಂದು ಎಡ ಪಕ್ಷಗಳ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) ಪ್ರಕಟಣೆಯಲ್ಲಿ ತಿಳಿಸಿದೆ. 

‘ಎಬಿವಿಪಿ ಗೂಂಡಾಗಳು ರಾಡ್‌ ಹಿಡಿದು ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದರು. ಅವರು ಚುನಾವಣಾ ಸಮಿತಿಗೆ ಮುಸ್ಲಿಂ ವಿದ್ಯಾರ್ಥಿಗಳ ಹೆಸರನ್ನು ಆಕ್ಷೇಪಿಸಿದರು’ ಎಂದು ಅದು ಆರೋಪಿಸಿದೆ. 

‘ಪಿಎಚ್‌.ಡಿ ವ್ಯಾಸಂಗ ಮಾಡುತ್ತಿರುವ ತಮ್ಮ ಸದಸ್ಯರಾದ ಶೌರ್ಯ, ಮಧುರಿಮಾ ಕುಂದು ಮತ್ತು ಎಂ.ಎ ಭಾಷಾಶಾಸ್ತ್ರ ವಿದ್ಯಾರ್ಥಿಗಳಾದ ಪ್ರಿಯಂ ಮತ್ತು ಅನ್ವೇಷಾ ಅವರನ್ನು ಎಬಿವಿಪಿ ಸದಸ್ಯರು ಬೆನ್ನಟ್ಟಿ ಥಳಿಸಿದ್ದಾರೆ. ಜೆಎನ್‌ಯು ಆಡಳಿತವು ಆರ್‌ಎಸ್‌ಎಸ್‌– ಸಂಯೋಜಿತ ವಿದ್ಯಾರ್ಥಿ ಗುಂಪನ್ನು ರಕ್ಷಿಸುತ್ತಿದೆ’ ಎಂದು ದೂರಿದೆ.

ಎಬಿವಿಪಿ ಪ್ರತಿಕ್ರಿಯೆ:

ಇದಕ್ಕೆ ಪ್ರತಿಕ್ರಿಯಿಸಿರುವ ಎಬಿವಿಪಿ, ‘ಚುನಾವಣಾ ಸಮಿತಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಎಡಪಕ್ಷಗಳು ಹಲವು ತ‍ಪ್ಪುಗಳನ್ನು ಮಾಡಿವೆ. ಅಲ್ಲದೆ ಸಾಮಾನ್ಯ ಸಭೆಯಲ್ಲಿ ಪಾಲಿಟ್‌ಬ್ಯೂರೊ ಮುಖ್ಯಸ್ಥರು ಎಸ್‌ಎಫ್‌ಐ ಅಭ್ಯರ್ಥಿಗಳಿಗೆ ಅನಗತ್ಯವಾಗಿ ಲಾಭ ಮಾಡಿಕೊಡಲು ಪ್ರಯತ್ನಿಸಿದ್ದಾರೆ’ ಎಂದು ಆರೋಪಿಸಿದೆ.

ಚುನಾವಣಾ ಸಮಿತಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಾಲಿಟ್‌ಬ್ಯೂರೊ ಮುಖ್ಯಸ್ಥರು ಏಕಪಕ್ಷೀಯವಾಗಿ ಕೆಲ ನಿರ್ಧಾರಗಳನ್ನು ತೆಗೆದುಕೊಂಡು, ಮತ ಎಣಿಕೆಯಲ್ಲಿ ವಂಚಿಸಿದ್ದಾರೆ ಎಂದು ಎಬಿವಿಪಿ ದೂರಿದೆ. ಅಲ್ಲದೆ ಎಡಪಕ್ಷಗಳ ಬೆಂಬಲಿತ ಗುಂಪಿನವರ ದಾಳಿಯಲ್ಲಿ ತನ್ನ ಸದಸ್ಯರೂ ಗಾಯಗೊಂಡಿದ್ದಾರೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT