ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿಯ ನಾಲ್ವರನ್ನು ಇ.ಡಿ ಮೂಲಕ ಬಂಧಿಸಲು ಬಿಜೆಪಿ ಸಿದ್ಧತೆ: ಸಚಿವೆ ಆತಿಶಿ ಆರೋಪ

Published 2 ಏಪ್ರಿಲ್ 2024, 15:50 IST
Last Updated 2 ಏಪ್ರಿಲ್ 2024, 15:50 IST
ಅಕ್ಷರ ಗಾತ್ರ

ನವದೆಹಲಿ: ‘ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಬಿಜೆಪಿ ಸೇರಿ. ಇಲ್ಲವೇ ಒಂದೆರಡು ತಿಂಗಳಲ್ಲಿ ನಿಮ್ಮನ್ನೂ ಸೇರಿ ಎಎಪಿಯ ನಾಲ್ವರು ನಾಯಕರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಮೂಲಕ ಬಂಧಿಸಲಾಗುತ್ತದೆ ಎಂದು ನನಗೆ ಹತ್ತಿರವಿರುವ ವ್ಯಕ್ತಿಯ ಮೂಲಕ ಬಿಜೆಪಿ ಸಂದೇಶ ಕಳಿಸಿದೆ’ ಎಂದು ದೆಹಲಿ ಸಚಿವೆ ಆತಿಶಿ ಮಂಗಳವಾರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಎಎಪಿಯನ್ನು ನಾಶ ಮಾಡಲು ನಿರ್ಧರಿಸಿದ್ದಾರೆ. ದೆಹಲಿ ಸಚಿವ ಸೌರಭ್‌ ಭಾರದ್ವಾಜ್‌, ಶಾಸಕ ದುರ್ಗೇಶ್‌ ಪಾಠಕ್‌ ಮತ್ತು ರಾಜ್ಯಸಭಾ ಸದಸ್ಯ ರಾಘವ್‌ ಚಡ್ಡ ಅವರನ್ನು ಬಂಧಿಸಲಾಗುವುದು ಎಂಬುದಾಗಿ ಅವರು ತಿಳಿಸಿದ್ದಾರೆ’ ಎಂದರು.

‘ಮುಂದಿನ ದಿನಗಳಲ್ಲಿ ಇ.ಡಿ ತನ್ನ ನಿವಾಸ ಮತ್ತು ಸಂಬಂಧಿಕರ ಮನೆಗಳ ಮೇಲೆ ಶೋಧ ನಡೆಸಲಿದೆ ಎಂಬುದಾಗಿಯೂ ತಿಳಿಸಲಾಗಿದೆ. ಮೊದಲು ಸಮನ್ಸ್‌ ನೀಡಿ, ನಂತರ ಬಂಧಿಸುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ಈ ಆರೋಪಗಳನ್ನು ಅಲ್ಲಗಳೆದಿರುವ ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, ‘ಆತಿಶಿ ಸುಳ್ಳು ಹೇಳುತ್ತಿದ್ದಾರೆ, ಇಡೀ ಎಎಪಿ ಪಕ್ಷವು ಅಬಕಾರಿ ಹಗರಣದಲ್ಲಿ ಭಾಗಿಯಾಗಿದೆ’ ಎಂದು ದೂರಿದರು.

‘ಕೇಜ್ರಿವಾಲ್‌ ರಾಜೀನಾಮೆ ಅಗತ್ಯವಿಲ್ಲ’:

ಅಬಕಾರಿ ನೀತಿ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಅಥವಾ ಶಿಕ್ಷೆಯೂ ಆಗಿಲ್ಲ. ಹೀಗಾಗಿ ಅರವಿಂದ ಕೇಜ್ರಿವಾಲ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಯಾವುದೇ ಕಾರಣಗಳಿಲ್ಲ. ಅಲ್ಲದೆ ಅವರು ದೆಹಲಿ ವಿಧಾನಸಭೆಯಲ್ಲಿ ಬಹುಮತ ಹೊಂದಿದ್ದಾರೆ ಎಂದು ಆತಿಶಿ ಪ್ರತಿಕ್ರಿಯಿಸಿದರು.

ಒಂದು ವೇಳೆ ಅವರು ರಾಜೀನಾಮೆ ನೀಡಿದರೆ, ಸುಳ್ಳು ಪ್ರಕರಣಗಳಲ್ಲಿ ಮುಖ್ಯಮಂತ್ರಿಗಳನ್ನು ಬಂಧಿಸಿ, ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಗೆ ಸುಲಭ ಮತ್ತು ಸರಳವಾಗಿ ಬಿಡುತ್ತದೆ ಎಂದು ಅವರು ಪ್ರತಿಪಾದಿಸಿದರು.

‘ಕೇಜ್ರಿವಾಲ್‌ ಬಂಧನದಿಂದ ಎಎಪಿಯನ್ನು ವಿಭಜಿಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡ ಬಳಿಕ ಬಿಜೆಪಿ, ಈಗ ಎಎಪಿಯ ಎರಡನೇ ಸಾಲಿನ ನಾಲ್ವರು ನಾಯಕರನ್ನು ಬಂಧಿಸುವ ಗುರಿ ಹೊಂದಿದೆ’ ಎಂದು ಅವರು ದೂರಿದರು. ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ಮೈತ್ರಿಕೂಟದ ರ್‍ಯಾಲಿಯ ಯಶಸ್ಸಿನ ಬಳಿಕ ಬಿಜೆಪಿ ವಿಚಲಿತವಾಗಿದೆ ಎಂದು ಅವರು ಹೇಳಿದರು.

‘ನಾವು ಕೇಜ್ರಿವಾಲ್‌ ಸೈನಿಕರು, ಹೆದರಲ್ಲ’: 

‘ನಿಮ್ಮ ಬೆದರಿಕೆಗಳಿಗೆಲ್ಲ ಹೆದರುವುದಿಲ್ಲ. ನಾವು ಕೇಜ್ರಿವಾಲ್‌ ಸೈನಿಕರು ಮತ್ತು ಭಗತ್‌ ಸಿಂಗ್ ಅವರ ಶಿಷ್ಯರು. ದೇಶ, ಸಂವಿಧಾನವನ್ನು ಉಳಿಸಲು ಮತ್ತು ಜನರ ಒಳಿತಿಗಾಗಿ ಎಎಪಿಯ ಕೊನೆಯ ಸ್ವಯಂ ಸೇವಕರಿರುವರೆಗೂ ಹೋರಾಡುತ್ತೇವೆ’ ಎಂದು ಅವರು ಪ್ರತಿಪಾದಿಸಿದರು. 

ಬಿಜೆಪಿಯು ತನ್ನ ಶಾಸಕರನ್ನು ಖರೀದಿಸಲು ಯತ್ನಿಸುವ ಮೂಲಕ ಎಎಪಿಯನ್ನು ಒಡೆಯಲು ನೋಡುತ್ತಿದೆ. ಈ ಮೂಲಕ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲೂ ಅದು ಬಯಸಿದೆ ಎಂದು ಅವರು ಆರೋಪಿಸಿದರು.

ಎಎಪಿ ಶಾಸಕ ರಿತುರಾಜ್‌ ಝಾ ಅವರನ್ನು ಕೇಸರಿ ಪಕ್ಷಕ್ಕೆ ಸೆಳೆಯಲು ₹ 25 ಕೋಟಿ ಆಮಿಷವೊಡ್ಡಲಾಗಿದೆ ಎಂಬ ಆರೋಪ ಕೇಳಿಬಂದ ಮರುದಿನ ಆತಿಶಿ ಅವರು ಈ ಕುರಿತು ಆರೋಪಗಳನ್ನು ಮಾಡಿದ್ದಾರೆ.

ತಮ್ಮನ್ನು ಸಂಪರ್ಕಿಸಲು ಬಿಜೆಪಿಯ ಯಾರು ಯತ್ನಿಸಿದರು ಎನ್ನುವುದಕ್ಕೆ ಸಾಕ್ಷ್ಯವನ್ನು ನೀಡದೇ ಇದ್ದರೆ ಆತಿಶಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ

-ವೀರೇಂದ್ರ ಸಚ್‌ದೇವ ಬಿಜೆಪಿ ದೆಹಲಿ ಘಟಕದ ಮುಖ್ಯಸ್ಥ

‘ಜೈಲಿನಿಂದಲೇ ಸರ್ಕಾರ ಮುಂದುವರಿಸಲಿ’

ನವದೆಹಲಿ: ದೆಹಲಿಯ ಎಎಪಿ ಶಾಸಕರು ಅರವಿಂದ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಅವರನ್ನು ಮಂಗಳವಾರ ಭೇಟಿಯಾಗಿ ಕೇಜ್ರಿವಾಲ್‌ ಅವರು ರಾಜೀನಾಮೆ ನೀಡಬಾರದು ಮತ್ತು ಜೈಲಿನಿಂದಲೇ ಸರ್ಕಾರವನ್ನು ಮುಂದುವರಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ದೆಹಲಿಯ ಎರಡು ಕೋಟಿ ಜನರು ಕೇಜ್ರಿವಾಲ್‌ ಪರ ಇದ್ದಾರೆ. ಹೀಗಾಗಿ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಈ ಸಂದೇಶವನ್ನು ಕೇಜ್ರಿವಾಲ್‌ ಅವರಿಗೆ ಮುಟ್ಟಿಸಿ ಎಂದು ಅವರು ಕೋರಿದ್ದಾರೆ. ದೆಹಲಿಯಲ್ಲಿ ಇರುವ ಎಎಪಿಯ 62 ಶಾಸಕರ ಪೈಕಿ 55 ಮಂದಿ ಈ ವೇಳೆ ಹಾಜರಿದ್ದರು. ನಾಲ್ವರು ಶಾಸಕರು ದೆಹಲಿಯಲ್ಲಿ ಇರಲಿಲ್ಲ. ಉಳಿದಂತೆ ಕೇಜ್ರಿವಾಲ್‌ ಮನೀಶ್‌ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್‌ ಜೈಲಿನಲ್ಲಿದ್ದಾರೆ ಎಂದು ಎಎಪಿ ನಾಯಕರು ತಿಳಿಸಿದ್ದಾರೆ.

ಕೇಜ್ರಿವಾಲ್‌ ಸಕ್ಕರೆ ಪ್ರಮಾಣ ಇಳಿಕೆ

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಇದೇ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ತಿಹಾರ್‌ ಜೈಲಿನ 14X8 ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ಇರಿಸಲಾಗಿದೆ. ಸೋಮವಾರ ರಾತ್ರಿ ಸ್ವಲ್ಪ ಸಮಯ ಮಾತ್ರ ಅವರು ನಿದ್ದೆ ಮಾಡಿದ್ದಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ಹೇಳಿದರು. ಕೇಜ್ರಿವಾಲ್‌ ಅವರನ್ನು ಸೋಮವಾರ ಸಂಜೆ 4 ಗಂಟೆಗೆ ತಿಹಾರ್‌ ಜೈಲಿಗೆ ಕರೆತರಲಾಯಿತು. ಅವರನ್ನು ಕೊಠಡಿಗೆ ಕಳುಹಿಸುವ ಮುನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರ ಸಕ್ಕರೆ ಪ್ರಮಾಣ 50ಕ್ಕಿಂತ ಕಡಿಮೆ ಇತ್ತು. ಮಂಗಳವಾರ ಬೆಳಿಗ್ಗೆ ಅದು ಇನ್ನಷ್ಟು ಕಡಿಮೆಯಾಗಿತ್ತು. ವೈದ್ಯರ ಸಲಹೆ ಮೇರೆಗೆ ಅವರಿಗೆ ಔಷಧ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಅವರ ಸಕ್ಕರೆ ಮಟ್ಟ ಸಮರ್ಪಕ ಸ್ಥಿತಿಗೆ ಬರುವವರೆಗೂ ಮಧ್ಯಾಹ್ನ ಮತ್ತು ರಾತ್ರಿ ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಲು ಅನುಮತಿ ನೀಡಲಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT