ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿ ನಂತರ ಯೋಗಿ ಭದ್ರಕೋಟೆಗೆ ನುಗ್ಗಲು ಸಜ್ಜಾದ ಪ್ರಿಯಾಂಕಾ ಗಾಂಧಿ

Last Updated 22 ಅಕ್ಟೋಬರ್ 2021, 11:39 IST
ಅಕ್ಷರ ಗಾತ್ರ

ಲಖನೌ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯಿಂದ ತಮ್ಮ ಪಕ್ಷದ ಚುನಾವಣಾ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈಗ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿನಿಧಿಸುವ ಗೋರಖ್‌ಪುರದ ಭದ್ರಕೋಟೆಯ ಮೇಲೆ ದಾಂಗುಡಿ ಇಡಲು ಸಜ್ಜಾಗಿದ್ದಾರೆ.

ರಾಜ್ಯದಾದ್ಯಂತ ಪಕ್ಷದ ‘ಪ್ರತಿಜ್ಞಾ ಯಾತ್ರೆ’ ಶನಿವಾರದಿಂದ ಆರಂಭವಾಗಲಿದೆ. ಪ್ರಿಯಾಂಕಾ ಗಾಂಧಿ ಶನಿವಾರ ಬಾರಾಬಂಕಿ ಜಿಲ್ಲೆಯಿಂದ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಅವರು ಪಕ್ಷದ ಇತರ ಪ್ರತಿಜ್ಞೆಗಳ ಬಗ್ಗೆಯೂ ಜನರಿಗೆ ತಿಳಿಸಲಿದ್ದಾರೆ ಎಂದು ಉತ್ತರಪ್ರದೇಶ ವಿಧಾನಸಭೆಯಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರಾ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಏಕಕಾಲದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮೂರು ‘ಪ್ರತಿಜ್ಞಾ ಯಾತ್ರೆ’ಗಳು ಆರಂಭವಾಗಲಿವೆ. ಮೊದಲ ಹಂತದಲ್ಲಿ ಈ ಯಾತ್ರೆಗಳನ್ನು ವಾರಾಣಸಿ, ಬಾರಾಬಂಕಿ ಮತ್ತು ಸಹರಾನ್‌ಪುರದಿಂದ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಭವಿಷ್ಯ ಪುನರುಜ್ಜೀವನಗೊಳಿಸಲು ಶ್ರಮಿಸುತ್ತಿರುವ ಪ್ರಿಯಾಂಕಾ, ಈ ತಿಂಗಳ ಕೊನೆಯಲ್ಲಿ ಇಲ್ಲಿಂದ 300 ಕಿ.ಮೀ ದೂರದಲ್ಲಿರುವ ಗೋರಖ್‌ಪುರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನುತ್ತಾರೆ ಪಕ್ಷದ ರಾಜ್ಯ ನಾಯಕರೊಬ್ಬರು.

‘ರ್‍ಯಾಲಿ ಯಶಸ್ವಿಯಾಗುವಂತೆ ನೋಡಿಕೊಳ್ಳಲುಗೋರಖ್‌ಪುರ ಮತ್ತು ಪಕ್ಕದ ಜಿಲ್ಲೆಗಳ ಹಿರಿಯ ನಾಯಕರಿಗೆ ಸೂಚಿಸಲಾಗಿದೆ. ಗೋರಖ್‌ಪುರವು ಆದಿತ್ಯನಾಥ್ ಅವರ ತವರು ಪಟ್ಟಣ. ಅಲ್ಲಿ ಆಯೋಜಿಸಿರುವ ಬೃಹತ್‌ ರ‍್ಯಾಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಖಂಡಿತವಾಗಿಯೂ ಹುರಿದುಂಬಿಸುತ್ತದೆ’ ಪಕ್ಷದ ಹಿರಿಯ ಮುಖಂಡರೊಬ್ಬರು ಶುಕ್ರವಾರ ಇಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ತಿಂಗಳ ಆರಂಭದಲ್ಲಿ ವಾರಾಣಸಿಯ ಜಗತ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಮಾತನಾಡಿದ್ದರು. ಆ ಸಭೆಯಲ್ಲಿ ಲಖಿಂಪುರ್– ಖೇರಿ ಜಿಲ್ಲೆಯಲ್ಲಿ ನಾಲ್ವರು ರೈತರ ಹತ್ಯೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಮತ್ತು ಎಲ್‌ಪಿಜಿ ಬೆಲೆಗಳ ಬಗ್ಗೆ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT