ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡಾನ್‌ ಯೋಜನೆಯಡಿಯ ವಿಮಾನ ನಿಲ್ದಾಣಗಳಿಗೆ ಸಿಐಎಸ್‌ಎಫ್‌ ಭದ್ರತೆ

Last Updated 15 ಜನವರಿ 2023, 14:42 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್‌ ಯೋಜನೆಯಡಿ ದೇಶದ ಎರಡನೇ ಹಾಗೂ ಮೂರನೇ ದರ್ಜೆಯ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 60ಕ್ಕೂ ಅಧಿಕ ವಿಮಾನ ನಿಲ್ದಾಣಗಳಿಗೆ ಶೀಘ್ರವೇ ಶಸ್ತ್ರಾಸ್ತ್ರ ಪಡೆಗಳ ಭದ್ರತೆ ಒದಗಿಸಲು ತೀರ್ಮಾನಿಸಲಾಗಿದೆ’ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

‘ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ವಿಮಾನ ನಿಲ್ದಾಣಗಳನ್ನು ‘ಆ್ಯಂಟಿ ಟೆರರ್ ಸೆಕ್ಯೂರಿಟಿ ಕವರ್‌’ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆಯು (ಬಿಸಿಎಎಸ್) ಕೇಂದ್ರ ವಿಮಾನಯಾನ ಸಚಿವಾಲಯ ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯೊಂದಿಗೆ (ಸಿಐಎಸ್‌ಎಫ್‌) ಸಮಾಲೋಚನೆ ನಡೆಸಿ ಈ ಸಂಬಂಧ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿದೆ. ಅದಕ್ಕೆ ಕೇಂದ್ರ ಗೃಹ ಸಚಿವಾಲಯದ ಅನುಮೋದನೆ ದೊರೆಯಬೇಕಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಪ್ರತಿಯೊಂದು ನಿಲ್ದಾಣದಲ್ಲಿ ತಲಾ 57 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಸಿಐಎಸ್‌ಎಫ್‌ನ 27 ಸಿಬ್ಬಂದಿ ಇರಲಿದ್ದಾರೆ. ಉಳಿದವರನ್ನು ಮಾನ್ಯತೆ ಹೊಂದಿರುವ ಖಾಸಗಿ ಭದ್ರತಾ ಏಜೆನ್ಸಿಗಳಿಂದ ನೇಮಿಸಿಕೊಳ್ಳಲಾಗುತ್ತದೆ’ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

‘ವಿಮಾನ ನಿಲ್ದಾಣ ಭದ್ರತಾ ಕಾರ್ಯಕ್ಕಾಗಿ ಸಿಐಎಸ್‌ಎಫ್‌ಗೆ ಇನ್ನಷ್ಟು ಸಿಬ್ಬಂದಿ ನೇಮಿಸಿಕೊಳ್ಳಲಾಗುತ್ತದೆ. ಹೊರಗುತ್ತಿಗೆ ಆಧಾರದಲ್ಲಿ ಖಾಸಗಿ ಭದ್ರತಾ ಏಜೆನ್ಸಿಗಳಿಂದ ಒಟ್ಟು 1,924 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ’ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಹಾಗೂ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ನಿಲ್ದಾಣದ ಭದ್ರತೆಗೆ ನಿಯೋಜಿಸಲಾಗುವ ಸಿಬ್ಬಂದಿಗೆ ವಸತಿ ಸೌಕರ್ಯ ಕಲ್ಪಿಸಲಿವೆ. ವಿಮಾನ ನಿಲ್ದಾಣಗಳ ಸನಿಹದಲ್ಲಿರುವ ಸರ್ಕಾರಿ ಬ್ಯಾರೆಕ್‌ ಅಥವಾ ವಸತಿ ಸಂಕೀರ್ಣಗಳಲ್ಲಿ ಇವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಉಡಾನ್‌ ಯೋಜನೆಯಡಿ ಅತಿ ಕಡಿಮೆ ವಿಮಾನ ಪ್ರಯಾಣ ದರ ನಿಗದಿ ಮಾಡಲಾಗಿದೆ. ಇದನ್ನು ಪರಿಷ್ಕರಿಸುವಂತೆಯೂ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT