ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಥುರಾ: ಶಾಹಿ ಇದ್ಗಾ ಮಸೀದಿ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್‌ ಒಪ್ಪಿಗೆ

Published 14 ಡಿಸೆಂಬರ್ 2023, 14:21 IST
Last Updated 14 ಡಿಸೆಂಬರ್ 2023, 14:21 IST
ಅಕ್ಷರ ಗಾತ್ರ

ಪ್ರಯಾಗರಾಜ್‌: ಮಥುರಾದಲ್ಲಿ ಕೃಷ್ಣ ಜನ್ಮಭೂಮಿ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಶಾಹಿ ಈದ್ಗಾ ಆವರಣದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್‌ ಗುರುವಾರ ಅವಕಾಶ ನೀಡಿದೆ.

ಮಸೀದಿಯ ಸಮೀಕ್ಷಾ ಕಾರ್ಯದ ಮೇಲ್ವಿಚಾರಣೆ ನಡೆಸಲು ವಕೀಲರೊಬ್ಬರನ್ನು ಆಯುಕ್ತರನ್ನಾಗಿ ನೇಮಕ ಮಾಡಲು ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರಿರುವ ಏಕಸದಸ್ಯ ಪೀಠವು ಒಪ್ಪಿಗೆ ನೀಡಿದೆ. ಈ ಮಸೀದಿಯು ಹಿಂದೆ ಹಿಂದೂ ದೇವಸ್ಥಾನ ಆಗಿತ್ತು ಎಂದು ಹೇಳುವ ಕೆಲವು ಕುರುಹುಗಳು ಇವೆ ಎಂಬುದು ಅರ್ಜಿದಾರರ ವಾದ.

ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಸಮೀಕ್ಷಾ ಕಾರ್ಯವು ಹೇಗಿರಬೇಕು ಎಂಬುದನ್ನು ಅಂದು ಪರಿಶೀಲಿಸಬಹುದು ಎಂದು ಕೋರ್ಟ್‌ ಹೇಳಿದೆ.

ದೇವಸ್ಥಾನ–ಮಸೀದಿಗೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಸಮೀಕ್ಷೆ ನಡೆಸುವುದಕ್ಕೆ ಹೈಕೋರ್ಟ್‌ ಅನುಮತಿ ನೀಡಿರುವುದು ಈಚಿನ ತಿಂಗಳಲ್ಲಿ ಇದು ಎರಡನೆಯ ನಿದರ್ಶನ. ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿ ಇರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಇಲಾಖೆಯು (ಎಎಸ್‌ಐ) ಈಚೆಗೆ ಪೂರ್ಣಗೊಳಿಸಿದೆ. ಆದರೆ ಈ ಸಮೀಕ್ಷೆಯ ವರದಿ ಸಲ್ಲಿಸುವುದಕ್ಕೆ ಸ್ಥಳೀಯ ನ್ಯಾಯಾಲಯವೊಂದರಿಂದ ಹೆಚ್ಚಿನ ಕಾಲಾವಕಾಶ ಕೋರಿದೆ.

ಹಿಂದೂ ದೇವಸ್ಥಾನಗಳಲ್ಲಿನ ಕಂಬಗಳ ಲಕ್ಷಣವನ್ನು ಹೊಂದಿರುವ ಕಮಲ ಆಕಾರದ ಒಂದು ಕಂಬ ಹಾಗೂ ಶೇಷನಾಗನ ಚಿತ್ರವೊಂದು ಮಸೀದಿ ಆವರಣದಲ್ಲಿ ಇದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ ಎಂದು ವಕೀಲ ವಿಷ್ಣು ಶಂಕರ್ ಜೈನ್ ತಿಳಿಸಿದ್ದಾರೆ. ಕಂಬದ ಬುಡದಲ್ಲಿ ಹಿಂದೂ ಧಾರ್ಮಿಕ ಸಂಕೇತಗಳು ಹಾಗೂ ಕೆತ್ತನೆಗಳು ಇವೆ ಎಂದು ಕೂಡ ಹೇಳಲಾಗಿದೆ.

ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ದೊರೆ ಔರಂಗಜೇಬ ಶ್ರೀಕೃಷ್ಣ ಜನ್ಮಭೂಮಿಯ ಒಂದು ಭಾಗವನ್ನು ಧ್ವಂಸಗೊಳಿಸಿ ಕಟ್ಟಿದ್ದ ಎಂಬುದು ಅರ್ಜಿದಾರರ ವಾದ. ಶ್ರೀಕೃಷ್ಣ ಜನ್ಮಭೂಮಿ ವಿಚಾರವನ್ನು 2024ರಲ್ಲಿ ಕೈಗೆತ್ತಿಕೊಳ್ಳುವುದಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಈಗಾಗಲೇ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT