ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಉನ್ನಾವ್‌ ಪ್ರಕರಣ: ಸಂತ್ರಸ್ತೆಗೆ ಗ್ರಾಮಸ್ಥರ ಕಂಬನಿಯ ವಿದಾಯ

ಅಧಿಕಾರಿಗಳ ಮನವೊಲಿಕೆ ಬಳಿಕ ಅಂತ್ಯಕ್ರಿಯೆ ನಡೆಸಿದ ಕುಟುಂಬದ ಸದಸ್ಯರು
Last Updated 8 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಉನ್ನಾವ್‌: ಸುಟ್ಟ ಗಾಯಗಳಿಂದಾಗಿ ಮೃತಪಟ್ಟ ಉನ್ನಾವ್‌ನ 23 ವರ್ಷದ ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಭಾನುವಾರ ನಡೆಯಿತು. ಅಂತ್ಯಕ್ರಿಯೆಗೆ ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಸ್ಥಳೀಯರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಅಧಿಕಾರಿಗಳೂ ಹಾಜರಿದ್ದರು.

ಮುಖ್ಯಮಂತ್ರಿಯು ಗ್ರಾಮಕ್ಕೆ ಬಂದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ಕೊಡುವವರೆಗೆ ಸಂತ್ರಸ್ತೆಯ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಕುಟುಂಬದ ಸದಸ್ಯರು ಮೊದಲಿಗೆ ಪಟ್ಟು ಹಿಡಿದಿದ್ದರು. ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ಕೊಡಬೇಕು ಮತ್ತು ಆರೋಪಿಗಳಿಗೆ ತಕ್ಷಣವೇ ಗಲ್ಲು ಶಿಕ್ಷೆಯಾಗಬೇಕು ಎಂದು ಸಂತ್ರಸ್ತೆಯ ಸಹೋದರಿ ಒತ್ತಾಯಿಸಿದ್ದರು.

ಲಖನೌ ವಿಭಾಗಾಧಿಕಾರಿಮುಕೇಶ್‌ ಮೆಶ್ರಮ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಕುಟುಂಬದ ಸದಸ್ಯರ ಜತೆ ಮಾತುಕತೆ ನಡೆಸಿ ಅಂತ್ಯಕ್ರಿಯೆ ನಡೆಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.

ಕುಟುಂಬದ ಸದಸ್ಯರಿಗೆ ಭದ್ರತೆ ಒದಗಿಸಲಾಗುವುದು ಮತ್ತು ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮೆಶ್ರಮ್‌ ಮಾಹಿತಿ ನೀಡಿದರು.

ಸಂತ್ರಸ್ತೆಯ ಸಹೋದರಿಯು ಪ್ರಕರಣದ ಸಾಕ್ಷಿಯಾಗುವ ಸಾಧ್ಯತೆಯೂ ಇದೆ. ಹಾಗಾಗಿ, ಅವರಿಗೆ ಪ್ರತ್ಯೇಕ ಭದ್ರತೆಯ ವ್ಯವಸ್ಥೆ ಮಾಡಲಾಗುವುದು. ಕುಟುಂಬವು ಆಯ್ಕೆ ಮಾಡಿದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಸ್ವರಕ್ಷಣೆಗಾಗಿ ಕುಟುಂಬವು ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಿದರೆ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ ಅನುಮತಿ ನೀಡಲಾಗುವುದು ಎಂದೂ ಹೇಳಿದ್ದಾರೆ.

ಆರೋಪಿಗಳ ಮನೆಯವರಿಗೆ ಎನ್‌ಕೌಂಟರ್‌ ಭೀತಿ

ಉನ್ನಾವ್‌ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಆರೋಪ ಹೊತ್ತಿರುವ ಐವರನ್ನು ಹೈದರಾಬಾದ್‌ ಎನ್‌ಕೌಂಟರ್‌ ಮಾದರಿಯಲ್ಲಿ ಹತ್ಯೆ ಮಾಡುವ ಅಪಾಯ ಇದೆ ಎಂದು ಆರೋಪಿಗಳ ಕುಟುಂಬದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪೊಲೀಸರ ಮೇಲೆ ವಿಶ್ವಾಸವಿಲ್ಲ, ಹಾಗಾಗಿ ಪ್ರಕರಣದ ಸಿಬಿಐ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಉನ್ನಾವ್‌ ಸಂತ್ರಸ್ತೆಯ ಮನೆಗೆ ಶನಿವಾರ ಭೇಟಿ ಕೊಟ್ಟಿದ್ದ ಉತ್ತರ ಪ್ರದೇಶದ ಇಬ್ಬರು ಸಚಿವರು ಮತ್ತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲು ಐವರು ಆರೋಪಿಗಳ ಕುಟುಂಬದವರು ಮತ್ತು ಅವರ ಬೆಂಬಲಿಗರು ಎಂದು ಹೇಳಲಾದ ಹಲವರು ಪ್ರಯತ್ನಿಸಿದ್ದಾರೆ.

ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿ ಹಿಂದಿರುಗುತ್ತಿದ್ದ ಪ್ರಿಯಾಂಕಾ ಅವರನ್ನು ತಡೆಯಲು ದೊಡ್ಡ ಸಂಖ್ಯೆಯಲ್ಲಿದ್ದ ಮಹಿಳೆಯರ ಗುಂಪು ಯತ್ನಿಸಿದೆ. ತಮ್ಮ ಮಾತನ್ನೂ ಆಲಿಸಬೇಕು ಎಂದು ಇವರು ಒತ್ತಾಯಿಸಿದ್ದರು. ಆದರೆ, ಪ್ರಿಯಾಂಕಾ ಅವರು ತಮ್ಮ ವಾಹನದಿಂದ ಹೊರಗೆ ಬರಲಿಲ್ಲ.‘ಅವರೆಲ್ಲರೂ (ಐವರು ಆರೋಪಿಗಳು) ಹೈದರಾಬಾದ್‌ ಎನ್‌ಕೌಂಟರ್‌ ಮಾದರಿಯಲ್ಲಿ ಹತ್ಯೆಯಾಗುವ ಸಾಧ್ಯತೆ ಇದೆ’ ಎಂದು ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಒಬ್ಬನಾದ ಶುಭಂ ತ್ರಿವೇದಿಯ ಸಂಬಂಧಿಯೊಬ್ಬರು ಹೇಳಿದ್ದಾರೆ.

ಆರೋಪಿಗಳ ಕುಟುಂಬದ ಸದಸ್ಯರು ಸಕ್ರಿಯ ರಾಜಕಾರಣದಲ್ಲಿದ್ದಾರೆ ಮತ್ತು ಭಾರಿ ಪ್ರಭಾವಿಗಳು ಎಂದು ಹೇಳಲಾಗುತ್ತಿದೆ. ಶುಭಂನ ತಾಯಿ ಗ್ರಾಮ ಪಂಚಾಯಿತಿಯ ಮುಖ್ಯಸ್ಥೆಯಾಗಿದ್ದಾರೆ.

ಶುಭಂನ ಸಂಬಂಧಿ ಶಿವಂ ತ್ರಿವೇದಿ ವಿರುದ್ಧ ಸಂತ್ರಸ್ತೆಯು ದೂರು ನೀಡಿದಾಗ ಪೊಲೀಸರು ದೂರನ್ನೇ ಸ್ವೀಕರಿಸಿರಲಿಲ್ಲ. ಇದು ಆ ಕುಟುಂಬವು ಹೊಂದಿರುವ ಪ್ರಭಾವವನ್ನು ತೋರಿಸುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

ಎರಡನೇ ದಿನವೂ ಎನ್‌ಎಚ್‌ಆರ್‌ಸಿ ತನಿಖೆ

ತೆಲಂಗಾಣದ ಎನ್‌ಕೌಂಟರ್‌ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ತಂಡವು ಎರಡನೇ ದಿನವಾದ ಭಾನುವಾರವೂ ತನಿಖೆ ನಡೆಸಿದೆ.

ಎನ್‌ಕೌಂಟರ್‌ಗೆ ಬಲಿಯಾದ ನಾಲ್ವರು ಆರೋಪಿಗಳ ಕುಟುಂಬದ ಸದಸ್ಯರನ್ನು ನಾರಾಯಣಪೇಟೆಯಿಂದ ಹೈದರಾಬಾದ್‌ಗೆ ಕರೆತರಲಾಗಿದೆ. ಅವರ ಹೇಳಿಕೆಗಳನ್ನು ಎನ್‌ಎಚ್‌ಆರ್‌ಸಿ ತಂಡವು ದಾಖಲಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ವೈದ್ಯ ವಿಧಿವಿಜ್ಞಾನ ಪರಿಣತರೂ ಇರುವ ಎನ್‌ಎಚ್‌ಆರ್‌ಸಿ ತಂಡವು ಆರೋಪಿಗಳ ಮೃತದೇಹಗಳನ್ನು ಪರಿಶೀಲಿಸಿದೆ. ಎನ್‌ಕೌಂಟರ್‌ ನಡೆದ ಚತನ್‌ಪಲ್ಲಿ ಗ್ರಾಮಕ್ಕೂ ಭೇಟಿ ನೀಡಿದೆ.

ಸೋನಿಯಾ ಹುಟ್ಟುಹಬ್ಬ ಇಲ್ಲ

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೇಶದ ವಿವಿಧೆಡೆ ನಡೆದಿರುವ ಅತ್ಯಾಚಾರ ಮತ್ತು ದೌರ್ಜನ್ಯ ಘಟನೆಗಳಿಂದ ಬೇಸರಗೊಂಡಿದ್ದು, ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಸೋನಿಯಾ ಅವರು ಸೋಮವಾರ 73ನೇ ವರ್ಷಕ್ಕೆ ಕಾಲಿಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT