ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಚುನಾವಣೆ: ಕೇಂದ್ರ ಸಚಿವ, ಸಂಸದರನ್ನು ಕಣಕ್ಕಿಳಿಸಲು ಬಿಜೆಪಿ ಚರ್ಚೆ

Published 28 ಸೆಪ್ಟೆಂಬರ್ 2023, 7:20 IST
Last Updated 28 ಸೆಪ್ಟೆಂಬರ್ 2023, 7:20 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯ ನಾಯಕತ್ವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬುಧವಾರ ತಡರಾತ್ರಿಯವರೆಗೂ ಸರಣಿ ಸಭೆಗಳನ್ನು ನಡೆಸಿದ್ದಾರೆ.

ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರು ಕೇಂದ್ರದ ಮಂತ್ರಿಗಳಿಗೆ ಸೂಚಿಸುವ ಕುರಿತು ಚರ್ಚೆಗಳು ನಡೆದವು ಎಂದೆನ್ನಲಾಗಿದೆ. ಆದರೆ ಪಟ್ಟಿಯಲ್ಲಿ ಮೂವರು ಕೇಂದ್ರ ಮಂತ್ರಿಗಳು ಹಾಗೂ ನಾಲ್ವರು ಸಂಸದರ ಹೆಸರುಗಳು ವಿಧಾನಸಭಾ ಚುನಾವಣೆಯ ಅಂತಿಮ ಪಟ್ಟಿಯಲ್ಲಿ ಇರಲಿವೆ ಎಂಬ ವದಂತಿಯೂ ಹರಡಿದೆ. ಇಲ್ಲಿನ ಖಾಸಗಿ ಹೋಟೆಲಿನಲ್ಲಿ ನಡೆಸಿದ ಸಭೆ ಮಧ್ಯರಾತ್ರಿ 2ರವರೆಗೂ ನಡೆಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಮಿತ್ ಶಾ ಮತ್ತು ನಡ್ಡಾ ಅವರು ವಿಶೇಷ ವಿಮಾನದಲ್ಲಿ ಬುಧವಾರ ಸಂಜೆ ಬಂದಿಳಿದರು. ಮೊದಲಿಗೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಸಿದರು. ನಂತರ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರೊಂದಿಗೆ 15 ನಿಮಿಷಗಳ ಮಾತುಕತೆ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಂತರ ಪಕ್ಷದ ಹಿರಿಯ ಮುಖಂಡರೊಂದಿಗೆ ಈ ಇಬ್ಬರು ನಾಯಕರು ಸಭೆ ನಡೆಸಿದರು. ಕ್ಷೇತ್ರವಾರು ಚುನಾವಣಾ ತಂತ್ರಗಳ ಕುರಿತು ಚರ್ಚಿಸಿದರು ಎಂದೆನ್ನಲಾಗಿದೆ. ಜತೆಗೆ ನಡೆದಿರುವ ನಾಲ್ಕು ಪರಿವರ್ತನ ಯಾತ್ರೆ ಕುರಿತ ಪ್ರತಿಕ್ರಿಯೆಯನ್ನೂ ಪಡೆದಿದ್ದಾರೆ.

ರಾಜ್ಯದ ಚುನಾವಣಾ ಉಸ್ತುವಾರಿ ಪ್ರಲ್ಹಾದ ಜೋಶಿ, ಸಹ ಉಸ್ತುವಾರಿ ನಿತಿನ್ ಪಟೇಲ್, ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ಸಿ.ಪಿ.ಜೋಶಿ, ಕೇಂದ್ರ ಸಚಿವ ಗಜೇಂದ್ರ ಸಿಂಗ್, ಅರುಣ್ ಮೇಘವಾಲ್, ಕೈಲಾಶ್ ಚೌಧರಿ, ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ವಿರೋಧ ಪಕ್ಷದ ಉಪಾಧ್ಯಕ್ಷ ಸತೀಶ್ ಪೂಂಜಾ ಸಭೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಸಭೆಯು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಮೊದಲ ಸುತ್ತಿನ ಮಾತುಕತೆ ನಂತರ ಪೂನಿಯಾ ಹಾಗೂ ಸಂಸದ ರಾಜ್ಯವರ್ಧನ್ ರಾಥೋಡ್ ಹೊರಬಂದರು. ಎರಡನೇ ಸುತ್ತಿನ ಸಭೆಯಲ್ಲಿ ಪಕ್ಷ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕುಲದೀಪ್‌ ವಿಷ್ಣೋಯ್, ವಿಜಯ ರಾಹಟ್ಕರ್ ಇದ್ದರು.

‘ಪ್ರಸಕ್ತ ಚುನಾವಣೆಯಲ್ಲಿ ಮೇವಾಡ್, ವಾಗಡ್, ಶೇಖಾವತಿ, ಹದೌತಿ ಹಾಗೂ ಮಾರ್ವಾಡ್‌ ಪ್ರಾಂತ್ಯ ಮತ್ತು ಪೂರ್ವ ರಾಜಸ್ಥಾನ ಭಾಗಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಹೂಡಬೇಕಾದ ತಂತ್ರಗಳ ಕುರಿತು ಮುಖಂಡರು ಚರ್ಚಿಸಿದರು. ಪಕ್ಷದ ಸಂಘಟನೆಗೆ ಪ್ರಥಮ ಆದ್ಯತೆ. ಎಲ್ಲರೂ ಜತೆಗೂಡಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂಬ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಆಂತರಿಕ ಮೂಲಗಳ ಪ್ರಕಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಕಾನೂನು ಸಚಿವ ಅರುಣ್ ರಾಮ್ ಮೇಘವಾಲ್ ಅವರನ್ನು ವಿಧಾನಸಭಾ ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿದೆ ಎಂದೆನ್ನಲಾಗಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಳೀಯ ಮುಖಂಡರನ್ನು ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರು ಗುರುವಾರ ಭೇಟಿ ಮಾಡಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ ಪ್ರಕಾಶ ಚಂದ್‌ ಅವರಿಗೂ ಪ್ರಮುಖ ಜವಾಬ್ದಾರಿಗಳನ್ನು ಪಕ್ಷ ವಹಿಸುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT