ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ರಾಜ್ಯಗಳ ವಿಧಾನಸಭೆ ಚುನಾವಣೆ: ಅಕ್ಟೋಬರ್‌ ಮೊದಲ ವಾರದಲ್ಲಿ ವೇಳಾಪಟ್ಟಿ?

ಛತ್ತೀಸ್‌ಗಢ, ಮಧ್ಯಪ್ರದೇಶ ಸೇರಿ 5 ರಾಜ್ಯಗಳ ವಿಧಾನಸಭೆ ಚುನಾವಣೆ
Published 28 ಸೆಪ್ಟೆಂಬರ್ 2023, 13:36 IST
Last Updated 28 ಸೆಪ್ಟೆಂಬರ್ 2023, 13:36 IST
ಅಕ್ಷರ ಗಾತ್ರ

ನವದೆಹಲಿ :  ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗವು ಅಕ್ಟೋಬರ್‌ ಮೊದಲ ವಾರದಲ್ಲಿ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂ ಮತ್ತು ರಾಜಸ್ಥಾನದಲ್ಲಿ ನವೆಂಬರ್‌– ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ.

ರಾಜಸ್ಥಾನದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಲು ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ ಅಲ್ಲಿಗೆ ಭೇಟಿ ನೀಡಲಿದ್ದಾರೆ. ಮೂರು ದಿನಗಳವರೆಗೆ ಅವರು ಪರಿಶೀಲನೆ ನಡೆಸುವರು. ಅ. 3ರಿಂದ ತೆಲಂಗಾಣಕ್ಕೆ ತೆರಳುವ ಅಧಿಕಾರಿಗಳ ತಂಡವು ಅಲ್ಲಿ ಮೂರು ದಿನಗಳವರೆಗೆ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಶುಕ್ರವಾರ ಜೈಪುರದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್, ಚುನಾವಣಾ ಆಯುಕ್ತರುಗಳಾದ ಅನೂಪ್‌ ಚಂದ್ರ ಪಾಂಡೆ ಮತ್ತು ಅರುಣ್‌ ಗೋಯಲ್‌ ಅವರು ವಿವಿಧ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವರು ಎಂದು ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್‌ ಗುಪ್ತ ತಿಳಿಸಿದ್ದಾರೆ.

ಆ ಬಳಿಕ ರಾಜಸ್ಥಾನದ ಪೊಲೀಸ್‌ ಇಲಾಖೆ, ಆದಾಯ ತೆರಿಗೆ, ಸಾರಿಗೆ, ವಾಣಿಜ್ಯ ತೆರಿಗೆ, ರೈಲ್ವೆ ಇತ್ಯಾದಿ ಇಲಾಖೆಗಳ ನೋಡಲ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸುವರು. ಆ. 30ರಂದು ಚುನಾವಣಾ ಸಿದ್ಧತೆ ಕುರಿತು ಮುಖ್ಯ ಚುನಾವಣಾ ಅಧಿಕಾರಿ, ರಾಜ್ಯ ಪೊಲೀಸ್‌ ಮತ್ತು ಕೇಂದ್ರೀಯ ಪೊಲೀಸ್‌ ಪಡೆಯ ನೋಡಲ್‌ ಅಧಿಕಾರಿಗಳು ಮಾಹಿತಿ ನೀಡುವರು.

ರಾಜ್ಯದ ನಾಯಕರ ಜತೆ  ಶಾ– ನಡ್ಡಾ ಚರ್ಚೆ

(ಜೈಪುರ ವರದಿ): ಗೃಹಸಚಿವ ಅಮಿತ್‌ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಗುರುವಾರ ಬೆಳಿಗ್ಗೆ ರಾಜಸ್ಥಾನ ಭೇಟಿಯನ್ನು ಪೂರ್ಣಗೊಳಿಸಿದ್ದಾರೆ. ಪಕ್ಷದ ರಾಜ್ಯ ನಾಯಕರ ಜತೆ ಅವರು ಚುನಾವಣಾ ತಂತ್ರದ ಬಗ್ಗೆ ಬುಧವಾರ ಸಂಜೆಯಿಂದ ಗುರುವಾರ ನಸುಕಿನವರೆಗೂ  ಚರ್ಚಿಸಿದ್ದಾರೆ.

ಗುರುವಾರ ಬೆಳಿಗ್ಗೆ ಇಬ್ಬರು ನಾಯಕರೂ ದೆಹಲಿಗೆ ತೆರಳಿದರು. ಸ್ಥಳೀಯ ಆರ್‌ಎಸ್‌ಎಸ್‌ ನಾಯಕರ ಜತೆ ಸಭೆ ನಡೆಸಲು ಸಾಧ್ಯವಾಗಿಲ್ಲ ಎಂದು ಎಂದು ಪಕ್ಷದ ಮೂಲಗಳು ಹೇಳಿವೆ.

ರಾಜಸ್ಥಾನ ವಿಧಾನಸಭೆಗೆ ಸ್ಪರ್ಧಿಸುವಂತೆ ಕೇಂದ್ರದ ಇಬ್ಬರು ಸಚಿವರಿಗೆ ಹೇಳಬಹುದು ಎಂಬ ವದಂತಿ ಮಧ್ಯೆಯೇ ಚರ್ಚೆಗಳು ನಡೆದಿವೆ.

ಬುಧವಾರ ಇಲ್ಲಿಗೆ ಆಗಮಿಸಿದ್ದ ಶಾ ಮತ್ತು ನಡ್ಡಾ ಅವರು  ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಜತೆ ಮೊದಲು ಮಾತುಕತೆ ನಡೆಸಿದರು. ನಂತರ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಚುನಾವಣಾ ತಂತ್ರದ ಬಗ್ಗೆ ಚರ್ಚಿಸಿದರು. ಬಿಜೆಪಿ ಈಚೆಗೆ ನಡೆಸಿದ ‘ಪರಿವರ್ತನ ಯಾತ್ರೆಗಳ‘ ಕುರಿತ ಪ್ರತಿಕ್ರಿಯೆಗಳನ್ನೂ ಸಭೆಯಲ್ಲಿ ಪಡೆದುಕೊಳ್ಳಲಾಗಿದೆ.

ಕೇಂದ್ರ ಸಚಿವ ಮತ್ತು ರಾಜಸ್ಥಾನಕ್ಕೆ ಪಕ್ಷದ ಚುನಾವಣಾ ಉಸ್ತುವಾರಿ ಆಗಿರುವ ಪ್ರಲ್ಹಾದ ಜೋಶಿ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿದ್ದರು.

‘ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಎಲ್ಲರೂ ಒಗ್ಗಡಿ ಕೆಲಸ ಮಾಡಬೇಕು’ ಎಂಬ ಸಂದೇಶವನ್ನು ನೀಡಲಾಗಿದೆ. ಟಿಕೆಟ್‌ ವಿತರಣೆ ಮತ್ತು ಚುನಾವಣಾ ಸಂಬಂಧಿತ ಇತರ ವಿಷಯಗಳನ್ನೂ ಚರ್ಚಿಸಲಾಯಿತು ಎಂದು ಕೆಲವು ನಾಯಕರು ಹೇಳಿದ್ದಾರೆ.

ಕೆಲವು ಸಂಸದರಲ್ಲದೆ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಮತ್ತು ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರನ್ನು ಕಣಕ್ಕಿಳಿಸಬಹುದು ಎಂದು ಪಕ್ಷದ ರಾಜ್ಯ ಘಟಕದ ಮೂಲಗಳು ತಿಳಿಸಿವೆ.

ಆದರೆ ಪಕ್ಷದ ನಾಯಕರು ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ನೀಡಲಿಲ್ಲ. ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ ಪ್ರಕಾಶ್‌ ಚಂದ್‌ ಅವರಿಗೆ ಚುನಾವಣೆಯಲ್ಲಿ ಕೆಲವು ಹೊಣೆಗಾರಿಕೆಗಳನ್ನು ನೀಡುವ ಸಂಭವ ಇದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT