ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಸಂಘರ್ಷ ಹರಡಲು ಯತ್ನ: ಪ್ರತ್ಯೇಕತಾವಾದಿ ಬಂಧನಕ್ಕೆ ಕಸರತ್ತು

ಅಮೃತ್‌ಪಾಲ್ ಬೆಂಬಲಿಗರ ಬಂಧನ; ಇಂಟರ್‌ನೆಟ್ ಹಾಗೂ ಎಸ್‌ಎಂಎಸ್ ಸೇವೆ ಸ್ಥಗಿತ
Last Updated 18 ಮಾರ್ಚ್ 2023, 18:43 IST
ಅಕ್ಷರ ಗಾತ್ರ

ಚಂಡೀಗಡ: ರಾಜ್ಯದಲ್ಲಿ ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪದಲ್ಲಿ, ಖಾಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಶನಿವಾರ ಭಾರಿ ಕಾರ್ಯಾಚರಣೆ ನಡೆಸಿದ್ದಾರೆ.

ಅಮೃತ್‌ಪಾಲ್ ಬಂಧನಕ್ಕೆ ಹುಡುಕಾಟ ನಡೆದಿದ್ದು, ಅವರ 78 ಬೆಂಬಲಿಗರನ್ನು ಬಂಧಿಸಲಾಗಿದೆ. ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರೈಫಲ್, ರಿವಾಲ್ವರ್, ಸಜೀವ ಗುಂಡುಗಳನ್ನು ಜಪ್ತಿ ಮಾಡಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ ಭಾನುವಾರ ಮಧ್ಯಾಹ್ನ 12 ಗಂಟೆವರೆಗೆ ಇಂಟರ್‌ನೆಟ್ ಹಾಗೂ ಎಸ್‌ಎಂಎಸ್ ಸೇವೆ ಸ್ಥಗಿತಗೊಳಿಸಿ ರಾಜ್ಯ ಗೃಹ ಇಲಾಖೆ ಆದೇಶಿಸಿದೆ.

ಸಿಂಗ್ ಅವರನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಯುತ್ತಿದೆ. ಜಲಂಧರ್ ಜಿಲ್ಲೆಯ ಮೆಹತ್‌ಪುರ ಗ್ರಾಮದಲ್ಲಿ ಅಮೃತ್ ಪಾಲ್‌ ಹಾಗೂ ಅವರ ಬೆಂಬಲಿಗರು ಇರುವ ವಾಹನವನ್ನು ಪೊಲೀಸರು ಬೆನ್ನತ್ತಿದ್ದರು. ಪೊಲೀಸರ ಕೈಗೆ ಇನ್ನೇನು ಸಿಕ್ಕೇಬಿಟ್ಟರು ಎನ್ನುವಷ್ಟರಲ್ಲಿ ತಪ್ಪಿಸಿಕೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರು ತಮ್ಮ ಬೆನ್ನು ಹತ್ತಿದ್ದಾರೆ ಎಂದು ಸಿಂಗ್ ಅವರ ಬೆಂಬಲಿಗರು ಹೇಳುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ವಾಹನವೊಂದರಲ್ಲಿ ಸಿಂಗ್ ಹಾಗೂ ಅವರ ಬೆಂಬಲಿಗರು ಕುಳಿತು ಪ್ರಯಾಣಿಸುತ್ತಿದ್ದಾರೆ ಎನ್ನಲಾದ ವಿಡಿಯೊವನ್ನು ಅವರ ಬೆಂಬಲಿಗರು ಹಂಚಿಕೊಂಡಿದ್ದಾರೆ. ಪೊಲೀಸರು ಬೆನ್ನು ಹತ್ತಿರುವ ವಿಚಾರವನ್ನು ಬೆಂಬಲಿಗರೊಬ್ಬರು ಹೇಳುತ್ತಿರುವುದು ವಿಡಿಯೊದಲ್ಲಿ ಕೇಳಿಸುತ್ತದೆ.

ಅಮೃತ್‌ಪಾಲ್ ಹುಟ್ಟೂರು ಜಲ್ಲಪುರಖೇರದ ಸಮೀಪ ಭದ್ರತೆ ಪಡೆಗಳನ್ನು ನಿಯೋಜಿಸಲಾಗಿದೆ.

ಶಾಂತಿ ಕಾಪಾಡಲು ಮನವಿ: ಶಾಂತಿಯಿಂದ ಇರುವಂತೆ ಪಂಜಾಬ್ ಜನರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇಂಟರ್‌ನೆಟ್ ಬಂದ್ ಮಾಡಲಾಗಿದ್ದು, ಜನರು ಭೀತಿಗೆ ಒಳಗಾಗಬಾರದು ಎಂದು ಹೇಳಿದ್ದಾರೆ.

ಅಮೃತ್‌ಪಾಲ್ ವಿರುದ್ಧ ಹಲವು ಪ್ರಕರಣ
ಅಮೃತ್‌ಪಾಲ್ ಹಾಗೂ ಸಹಚರರ ವಿರುದ್ಧ ಪಂಜಾಬ್‌ನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಅಜನಾಲದಲ್ಲಿ ಪೊಲೀಸರು ಕಳೆದ ವಾರ ಪ್ರಕರಣ ದಾಖಲಿಸಿಕೊಂಡಿದ್ದರು.

ಅಮೃತ್‌ಪಾಲ್‌ ಹಾಗೂ ಬೆಂಬಲಿಗರು ತನ್ನನ್ನು ಅಪಹರಿಸಿ, ಥಳಿಸಿದ್ದಾರೆ ಎಂದು ಆರೋಪಿಸಿದ್ದ ವ್ಯಕ್ತಿಯೊಬ್ಬರು ಅಜನಾಲ ಪೊಲೀಸ್ ಠಾಣೆಗೆ ಕಳೆದ ತಿಂಗಳು ದೂರು ನೀಡಿದ್ದರು. ಈ ದೂರಿನನ್ವಯ, ಅಮೃತ್‌ಪಾಲ್ ಹಾಗೂ ಆರು ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಲವ್‌ಪ್ರೀತ್ ಸಿಂಗ್ ತೂಫಾನ್ ಎಂಬ ಬೆಂಬಲಿಗನನ್ನು ಬಂಧಿಸಿದ್ದರು.

ಇದರಿಂದ ಕೆರಳಿದ್ದ ಸಿಂಗ್‌ ಹಾಗೂ ಬೆಂಬಲಿಗರು ತ‌ಮ್ಮ ವಿರುದ್ಧದ ಪ್ರಕರಣ ವಾಪಸ್ ಪಡೆಯುವಂತೆ ಪೊಲೀಸರಿಗೆ ಬೆದರಿಕೆ ಹಾಕಿದ್ದರು. ನೂರಾರು ಬೆಂಬಲಿಗರು ಬ್ಯಾರಿಕೇಡ್‌ ಮುರಿದು, ಚೂಪಾದ ಆಯುಧಗಳು ಹಾಗೂ ಸ್ವಯಂಚಾಲಿತ ಬಂದೂಕುಗಳೊಂದಿಗೆ ಅಜನಾಲ ಪೊಲೀಸ್ ಠಾಣೆಗೆ ನುಗ್ಗಿದ್ದರು. ಈ ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದರು.

ಕೇಂದ್ರದಿಂದ ಭದ್ರತಾ ನೆರವು
ಪಂಜಾಬ್‌ನಲ್ಲಿ ಖಾಲಿಸ್ತಾನ್‌ ಬೆಂಬಲಿಗರ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜ್ಯದ ಕಾನೂನು ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಚರ್ಚಿಸಿದ್ದರು. 1,900 ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಗಲಭೆ ತಡೆಯುವಲ್ಲಿ ವಿಶೇಷ ತರಬೇತಿ ಪಡೆದಿರುವ ಆರ್‌ಎಎಫ್ ತಂಡವನ್ನು ಪಂಜಾಬ್‌ಗೆ ಕೇಂದ್ರ ಸರ್ಕಾರ ರವಾನಿಸಿತ್ತು. ರಾಜ್ಯದ ಕಾನೂನು ಸುವ್ಯವಸ್ಥೆಗೆ ಬಲ ತುಂಬಲು 18 ಕೇಂದ್ರೀಯ ತುಕಡಿಗಳನ್ನು ಪಂಜಾಬ್‌ಗೆ ರವಾನಿಸುವಂತೆ ಕಳೆದ ವಾರ ಕೇಂದ್ರ ಸರ್ಕಾರ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT