ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಸ್ಪೀಕರ್ ತಮ್ಮಿನೇನಿ ಸೀತಾರಾಂ ಅವರು, ಗುರುವಾರ ಟಿಡಿಪಿಯ ಇಬ್ಬರು, ವೈಎಸ್ಆರ್ ಕಾಂಗ್ರೆಸ್‌ನ ಒಬ್ಬ ಸದಸ್ಯ ಸೇರಿ ಮೂವರನ್ನು ಈ ಅಧಿವೇಶನದ ಉಳಿದ ಅವಧಿಯವರೆಗೆ ಅಮಾನತು ಮಾಡಿದ್ದಾರೆ.
ಅಲ್ಲದೆ, ಅನುಚಿತ ವರ್ತನೆಗಾಗಿ ಟಿಡಿಪಿಯ ಇತರ ಸದಸ್ಯರನ್ನು ದಿನದ ಮಟ್ಟಿಗೆ ಅಮಾನತು ಮಾಡಿದರು.
ಕಲಾಪದ ವೇಳೆ ಮೀಸೆ ತಿರುವಿ, ತೊಡೆ ತಟ್ಟಿದ ಹಿಂದೂಪುರ ಶಾಸಕ ಹಾಗೂ ನಟ ಬಾಲಕೃಷ್ಣ ಅವರಿಗೆ ಮುಂದಿನ ದಿನಗಳಲ್ಲಿ ಇಂಥ ಅನುಚಿತ ವರ್ತನೆ ತೋರದಂತೆ ಎಚ್ಚರಿಕೆ ನೀಡಿದರು.
ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಟಿಡಿಪಿ ಶಾಸಕರು, ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಸ್ಪೀಕರ್ ಪೀಠದತ್ತ ನುಗ್ಗಿ ಅವರ ಆಸನವನ್ನು ಸುತ್ತುವರಿದರು. ಈ ವೇಳೆ ಸ್ಪೀಕರ್ ಅವರು, ಪ್ರತಿಪಕ್ಷಗಳ ಸದಸ್ಯರು ತಮ್ಮ ಆಸನಗಳಲ್ಲಿ ಕುಳಿತು, ಪ್ರಶ್ನೋತ್ತರ ಕಲಾಪ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆದರೆ, ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆಯನ್ನು ಮುಂದುವರಿಸಿದರು.
ಟಿಡಿಪಿ ಸದಸ್ಯರ ಅಮಾನತು ಗೊತ್ತುವಳಿ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಬಿ.ರಾಜೇಂದ್ರನಾಥ್ ರೆಡ್ಡಿ ಅವರು, ಟಿಡಿಪಿ ಶಾಸಕರು ಪ್ರಸ್ತಾಪಿಸುವ ಯಾವುದೇ ವಿಚಾರದ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಸ್ಪೀಕರ್ ಪೀಠದತ್ತ ನುಗ್ಗಿ, ಅವರ ಮೇಜಿನ ಮೇಲಿನ ಗಾಜು ಒಡೆಯುವುದು ಅಪರಾಧ ಎಂದರು. ಈ ಮಧ್ಯೆ ಪರಸ್ಪರ ಆರೋಪ–ಪ್ರತ್ಯಾರೋಪ ಮುಂದುವರಿದ ಕಾರಣ ಸದನವನ್ನು ಮುಂದೂಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.