ಅಮರಾವತಿ: ‘ತಿರುಪತಿ ವೆಂಕಟೇಶ್ವರನ ಮೇಲೆ ನಂಬಿಕೆಯಿದೆ’ ಎಂದು ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪುತ್ರಿ ಪಲಿನಾ ಅಂಜನಿ ಕೊನಿಡೇಲಾ, ದೇವಸ್ಥಾನ ಪ್ರವೇಶಿಸುವ ಮೊದಲು ಘೋಷಿಸಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಹಿಂದುಯೇತರರು, ದೇವರಲ್ಲಿ ನಂಬಿಕೆಯಿದೆ ಎಂದು ಘೋಷಿಸುವುದು ಕಡ್ಡಾಯವಾಗಿದೆ. ಪಲಿನಾ ಅಂಜನಿ ಅವರು ಹಿಂದುಯೇತರರು ಎಂದು ಗುರುತಿಸಿಕೊಂಡಿದ್ದರಿಂದ ನಂಬಿಕೆ ಘೋಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ.
‘ಟಿಟಿಡಿ ಸಿಬ್ಬಂದಿ ನೀಡಿದ ದಾಖಲೆಗಳಿಗೆ ಸಹಿ ಹಾಕುವ ಮೂಲಕ ಪಲಿನಾ ಅವರು ವೆಂಕಟೇಶ್ವರನಲ್ಲಿ ಭಕ್ತಿ, ನಂಬಿಕೆಯಿರುವುದಾಗಿ ಘೋಷಿಸಿದ್ದಾರೆ. ಪಲಿನಾ ಅವರು ಅಪ್ರಾಪ್ತರಾಗಿರುವುದರಿಂದ ಅವರ ತಂದೆ ಪವನ್ ಕಲ್ಯಾಣ್ ದಾಖಲೆಗಳನ್ನು ಅನುಮೋದಿಸಿದ್ದಾರೆ’ ಎಂದು ಜನಸೇನಾ ಪಕ್ಷ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪಲಿನಾ ಅವರು ಪವನ್ ಕಲ್ಯಾಣ ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರ ಮಗಳು.
ಏತನ್ಮಧ್ಯೆ, ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ ದೇವಾಲಯದ ಶುದ್ದೀಕರಣಕ್ಕಾಗಿ ಪವನ್ ಕಲ್ಯಾಣ 11 ದಿನಗಳ ದೀಕ್ಷೆ ಪಡೆದಿದ್ದಾರೆ.