ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಸಿಎಂ ಜಗನ್‌ ತಾಯಿ ವಿಜಯಮ್ಮ ಪ್ರಯಾಣಿಸುತ್ತಿದ್ದ ಕಾರು ಕರ್ನೂಲ್‌ ಬಳಿ ಅಪಘಾತ

Last Updated 11 ಆಗಸ್ಟ್ 2022, 10:56 IST
ಅಕ್ಷರ ಗಾತ್ರ

ಕರ್ನೂಲ್‌: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್‌ ಮೋಹನ ರೆಡ್ಡಿ ಅವರ ತಾಯಿ ವೈ.ಎಸ್‌ ವಿಜಯಮ್ಮ ಅವರು ಪ್ರಯಾಣಿಸುತ್ತಿದ್ದ ಕಾರು ಕರ್ನೂಲ್ ಪಟ್ಟಣದಲ್ಲಿ ಗುರುವಾರ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ವಿಜಯಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಜಿ ಶಾಸಕಿ ವಿಜಯಮ್ಮ ಅವರು ತಮ್ಮ ಪತಿ ದಿವಂಗತ ವೈ.ಎಸ್‌ ರಾಜಶೇಖರರೆಡ್ಡಿ ಅವರ ಸ್ನೇಹಿತನ ಕುಟುಂಬವನ್ನು ಭೇಟಿ ಮಾಡಲೆಂದು ಕರ್ನೂಲ್‌ಗೆ ಬಂದಿದ್ದರು. ಕರ್ನೂಲ್‌ನಿಂದ ಹೊರಟ ಅವರ ಕಾರಿನ ಚಕ್ರದ ಟೈರ್‌ ಒಡೆದು ಅಪಘಾತ ಸಂಭವಿಸಿದೆ. ಗುತ್ತಿ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ವಿಜಯಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಅವರು ಮತ್ತೊಂದು ಕಾರಿನಲ್ಲಿ ಪ್ರಯಾಣ ಮುಂದುವರಿಸಿದರು.

ಕಳೆದ ತಿಂಗಳು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷ ಸ್ಥಾನಕ್ಕೆ ವಿಜಯಮ್ಮ ಅವರು ರಾಜೀನಾಮೆ ನೀಡಿದ್ದರು.

ತೆಲಂಗಾಣದಲ್ಲಿ ರಾಜಕೀಯ ಪಕ್ಷ ಕಟ್ಟಿರುವ ತಮ್ಮ ಪುತ್ರಿ ವೈ.ಎಸ್‌ ಶರ್ಮಿಳಾ ಅವರ ಪರವಾಗಿ ನಿಲ್ಲುವಂತೆ ರಾಜಕೀಯ ನಾಯಕರು ತಮ್ಮನ್ನು ಒತ್ತಾಯಿಸಿರುವುದಾಗಿ ವಿಜಯಮ್ಮ ಅವರು ಹೇಳಿದ್ದರು.

2009 ರಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಆಂಧ್ರ ಪ್ರದೇಶದ ಅಂದಿನ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರು ದುರ್ಮರಣಕ್ಕೀಡಾಗಿದ್ದರು. ನಂತರ, ವಿಜಯಮ್ಮ ಕಡಪಾ ಜಿಲ್ಲೆಯ ಪುಲಿವೆಂದುಲ ಕ್ಷೇತ್ರದಿಂದ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರವನ್ನು ರಾಜಶೇಖರ ರೆಡ್ಡಿ ಅವರು ಹಿಂದೆ ಪ್ರತಿನಿಧಿಸುತ್ತಿದ್ದರು.

ಜಗನ್ ಮತ್ತು ವಿಜಯಮ್ಮ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ 2011 ರಲ್ಲಿ ನಡೆದ ಉಪಚುನಾವಣೆಯಲ್ಲಿ, ಇಬ್ಬರೂ ಕ್ರಮವಾಗಿ ಕಡಪ ಲೋಕಸಭೆ ಮತ್ತು ಪುಲಿವೆಂದುಲ ವಿಧಾನಸಭಾ ಕ್ಷೇತ್ರಗಳಿಂದ ದಾಖಲೆಯ ಅಂತರದ ಗೆಲುವು ಸಾಧಿಸಿದ್ದರು.

ವಿಜಯಮ್ಮ ಅವರು 2014ರಲ್ಲಿ ವಿಶಾಖಪಟ್ಟಣದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT