ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಸ್ವತ ಲೋಕಕ್ಕೆ ಕರುಣಾನಿಧಿ ಕೊಟ್ಟ ದೊಡ್ಡ ಕೊಡುಗೆ

ಅಣ್ಣಾ ಸೇಂಟೆನರಿ ಲೈಬ್ರೆರಿ ಎಂಬ ಪುಸ್ತಕ ಸಾಗರ
Last Updated 8 ಆಗಸ್ಟ್ 2018, 15:54 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ರಾಜಕಾರಣದ ಮಕುಟಮಣಿಯಾಗಿದ್ದ ಕರುಣಾನಿಧಿ ಒಬ್ಬ ಉತ್ತಮ ಓದುಗ, ಬರಹಗಾರ, ಸಾಹಿತ್ಯ ಪ್ರೇಮಿ ಎಂಬುದಕ್ಕೆ ಅವರ ಆಡಳಿತಾವಧಿಯಲ್ಲಿ ತಮಿಳುನಾಡಿನ ಚೆನ್ನೈನ ಕೊಟ್ಟೂರು ಪುರಂನಲ್ಲಿ ಸ್ಥಾಪನೆಯಾದ ಅಣ್ಣಾ ಸೆಂಟಿನರಿ ಎಂಬ ಸಾರ್ವಜನಿಕ ಗ್ರಂಥಾಲಯವೇ ಸಾಕ್ಷಿ.

ಕಾವ್ಯ, ಜೀವನಚರಿತ್ರೆ, ಸಿನಿಮಾ ಗೀತೆ, ಕಾದಂಬರಿ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ಸೇವೆಗೈದ ಕರುಣಾನಿಧಿ ಅವರು ₹172 ಕೋಟಿ ವೆಚ್ಚದಲ್ಲಿ, 8 ಎಕರೆ ಪ್ರದೇಶದಲ್ಲಿ 9 ಮಹಡಿಗಳ ಬೃಹತ್ ಸುಸಜ್ಜಿತ ಗ್ರಂಥಾಲಯವನ್ನು ಡಿಎಂಕೆ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಸಿ. ಎನ್. ಅಣ್ಣಾದೊರೈ ಅವರ ಹೆಸರಿನಲ್ಲಿ ನಿರ್ಮಿಸಿದರು.

ಗ್ರಂಥಾಲಯದ ಒಳಾಂಗಣ:

ಅಣ್ಣಾ ಸೆಂಟಿನರಿ ಗ್ರಂಥಾಲಯದಲ್ಲಿ ಬರೋಬ್ಬರಿ 12 ಲಕ್ಷ ಪುಸ್ತಕಗಳಿವೆ. ಇಷ್ಟುದೊಡ್ಡ ಪುಸ್ತಕ ಭಂಡಾರರೂಪುರೇಷೆಯ ಹಿಂದೆ 1250 ಮಂದಿಯ ಶ್ರಮವಿದೆ.ಮೂಲ ಕರ್ತೃ ಸಿ.ಎನ್. ರಾಘವೇಂದ್ರನ್. ಇಲ್ಲಿ ಇಂಗ್ಲೀಷ್ ಕಾದಂಬರಿ, ಕಾವ್ಯ, ಸಾಹಿತ್ಯ, ಎಂಜಿನಿಯರಿಂಗ್, ಹೀಗೆ ನಾನಾ ವಿಷಯಗಳ ಕುರಿತ ಅದ್ಭುತ ವಿದೇಶಿ ಪುಸ್ತಕಗಳಿವೆ.

ಇಲ್ಲಿರುವ ಆಂಪಿಥಿಯೇಟರ್‌ ಇದ್ದು, ಒಟ್ಟು 800 ಮಂದಿ, ಆಡಿಟೋರಿಯಂನಲ್ಲಿ 1280 ಮಂದಿ ಏಕಕಾಲದಲ್ಲಿ ಆಸೀನರಾಗಬಹುದು. 2 ಚರ್ಚಾ ಕೊಠಡಿಯಿದ್ದು 151 ಮಂದಿಯ ಸಾಮರ್ಥ್ಯವನ್ನು ಹೊಂದಿದೆ.

ಈ ಹವಾನಿಯಂತ್ರಿತ ಗ್ರಂಥಾಲಯವು ಲಿಫ್ಟ್, ಎಸ್ಕಲೇಟರ್, ಫುಡ್ಕೋರ್ಟ್ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.ವಿದ್ಯಾರ್ಥಿಗಳು ತಮ್ಮ ಇಷ್ಟದ ಪುಸ್ತಕಗಳನ್ನುಮೊದಲೆರಡು ಮಹಡಿಗೆ ತೆಗೆದುಕೊಂಡು ಹೋಗಿ ಸುಖವಾಗಿ ಓದಬಹುದು. ಪುಸ್ತಕಗಳನ್ನು ಪಡೆಯಲು ಸ್ಮಾರ್ಟ್‌ ಕಾರ್ಡ್‌ಗಳ ಬಳಕೆ ಕಡ್ಡಾಯ. ಮಕ್ಕಳಿಗೆ ಪ್ರತ್ಯೇಕ ವಿಭಾಗವಿದ್ದು, ಸಾವಿರಾರು ಕಥೆ ಪುಸ್ತಕಗಳಿವೆ.

ವಿಶೇಷವಾಗಿ ಅಂಧರಿಗೆ ಅನುಕೂಲವಾಗಲೆಂದು ಕೇಳುಪುಸ್ತಕಗಳ ವ್ಯವಸ್ಥೆ ಮಾಡಲಾಗಿದೆ.ಬ್ರೈಲ್‌ಲಿಪಿಯ ಸಾಕಷ್ಟು ಪುಸ್ತಕಗಳು ಇವೆ.420 ಕಾರುಗಳು ಹಾಗೂ 1030 ದ್ವಿಚಕ್ರ ವಾಹನಗಳ ನಿಲುಗಡೆಯ ವ್ಯವಸ್ಥೆಯೂ ಇದೆ. ಕಟ್ಟಡದಲ್ಲಿ ಒಟ್ಟು 493 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಊಟದ ವ್ಯವಸ್ಥೆಯೂ ಇದ್ದು, 180 ಸಿಬ್ಬಂದಿ ಇದ್ದಾರೆ.

ಗ್ರಂಥಾಲಯದ ಎದುರು 5 ಅಡಿ ಎತ್ತರದ ಅಣ್ಣಾದೊರೈ ಅವರ ಪ್ರತಿಮೆಯಿದೆ. ಇದರಲ್ಲಿ ಸುಮಾರು 200 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 2701 ಮಂದಿ ಭೇಟಿ ನೀಡುತ್ತಾರೆ.



ವಿಭಾಗಗಳು:

ಬ್ರೈಲ್ ವಿಭಾಗ: ಇಲ್ಲಿ ಬ್ರೈಲಿ ಲಿಪಿಯ 1500 ಮುದ್ರಿತ ಪುಸ್ತಕಗಳಿವೆ. 1080 ಆಡಿಯೋ ಪುಸ್ತಕಗಳು

ಸ್ವಂತ ಪುಸ್ತಕಗಳ ವಿಭಾಗ: ಇಲ್ಲಿಗೆ ಬರುವ ಓದುಗರು ತಮ್ಮ ಸ್ವಂತ ಪುಸ್ತಕ, ಲ್ಯಾಪ್‌ಟಾಪ್, ಮೊಬೈಲ್‌, ಪಠ್ಯಪುಸ್ತಕಗಳನ್ನು ತಂದು ಓದುಲು ಅವಕಾಶ ಕಲ್ಪಿಸಲಾಗಿದೆ.

ಮಕ್ಕಳ ವಿಭಾಗ:ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಜರ್ಮನ್, ಸ್ಪಾನಿಷ್ ಮತ್ತು ಇಟಾಲಿಯನ್ ಹೀಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಭಾಷೆಗಳ ಒಟ್ಟು 60 ಸಾವಿರ ಪುಸ್ತಕಗಳಿವೆ. 2000 ಸಿಡಿ, ಡಿವಿಡಿಗಳಿವೆ.

ನಿಯತಕಾಲಿಕೆಗಳ ವಿಭಾಗ: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ 500 ನಿಯತಕಾಲಿಕೆಗಳಿವೆ.

ತಮಿಳು ಪುಸ್ತಕಗಳ ವಿಭಾಗ: ಕಾದಂಬರಿ, ಕಾವ್ಯ, ಸಣ್ಣ ಕಥೆಗಳು, ನಾಟಕಗಳು, ಪ್ರಬಂಧಗಳು, ಪತ್ರಗಳು ಸೇರಿದಂತೆ ಒಟ್ಟು 1, 00, 000 ಲಕ್ಷ ಪುಸ್ತಕಗಳಿವೆ.

ಇಂಗ್ಲಿಷ್ ಪುಸ್ತಕ ವಿಭಾಗದಲ್ಲಿ 4.5 ಲಕ್ಷ ಪುಸ್ತಕಗಳಿವೆ



ಈ ಗ್ರಂಥಾಲಯದ ಬಗ್ಗೆ ಓದುಗರೊಬ್ಬರ ಅಭಿಪ್ರಾಯ

ಚೆನ್ನೈನಲ್ಲಿ ನೆಲೆಸಿರುವ ಕನ್ನಡ ಸಾಹಿತಿ ನಾಗೇಶ್‌ಕುಮಾರ್ ಸಿ.ಎಸ್. ಅವರು ಕರುಣಾನಿಧಿ ಸಾವಿನ ಹಿನ್ನೆಲೆಯಲ್ಲಿ ಈ ಗ್ರಂಥಾಲಯದ ಬಗ್ಗೆ ತಮ್ಮ ಫೇಸ್‌ಬುಕ್ ಪುಟದಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದಾರೆ.

ಎಂಟು ಮಹಡಿಗಳ ಭವ್ಯ ಹವಾನಿಯಂತ್ರಿತ ತಣ್ಣನೆಯ ಭವನ. ಅದೂ ವಿಶ್ವವಿದ್ಯಾಲಯದ ಪಕ್ಕವೇ...ಲಿಫ್ಟ್, ಎಸ್ಕಲೇಟರ್, ಫ಼ುಡ್ ಕೋರ್ಟ್ ಎಲ್ಲಾ ಇರುವ ಮಾಡರ್ನ್ ಮಾಲ್ ತರಹದ ಪುಸ್ತಕಾಲಯ....ವಿದ್ಯಾರ್ಥಿಗಳು ತಮ್ಮ ಓದಿನ ಪುಸ್ತಕಗಳನ್ನೂ ಮೊದಲೆರಡು ಮಹಡಿಗೆ ತೆಗೆದುಕೊಂಡು ಹೋಗಿ ಓದುತ್ತಾ ದಿನವಿಡೀ ಸುಖಾಸೀನರಾಗಬಹುದು...ಪ್ರತಿ ಮಹಡಿಯಲ್ಲೂ ಬೇರೆ ಬೇರೆ ವಿಷಯಗಳು.

ಅಲ್ಲಿರುವ ಕಂಪ್ಯೂಟರ್‌ಗಳಲ್ಲಿ ಇಂಡೆಕ್ಸ್‌ನಲ್ಲಿ ಪುಸ್ತಕಗಳನ್ನು ಹುಡುಕಬಹುದು. ನಮ್ಮ ಲ್ಯಾಪ್‌ಟಾಪ್, ಟ್ಯಾಬ್ಲಟ್ ಸಹ ಕೆಳಗೆ ಟೋಕನ್ ತೆಗೆದುಕೊಂಡು ಹೋಗಿ ಅಲ್ಲೇ ಯಾವ ಮಹಡಿಯಲ್ಲಿರುವ ಟೆಬಲ್ ಅಥವಾ ವರ್ಕ್ ಸ್ಟೇಶನ್ನಿನಲ್ಲಿ ಪ್ಲಗ್ ಮಾಡಿ ಕುಳಿತು ದಿನವಿಡೀ ಡೇಟಾ ಪ್ಯಾಕಿನಲ್ಲಿ ಉಪಯೋಗಿಸಬಹುದು...ಯಾವ ನಿರ್ಬಂಧವೂ ಇಲ್ಲ.

ಆದರೆ ನಾನು ಇದುವರೆಗೆ ಒಂದು ವರ್ಷದಿಂದ ಹೋಗಿ ನನ್ನ ಕನ್ನಡ ಕತೆ ಕಾದಂಬರಿಗಳನ್ನು ಚೆನ್ನೈ ನಲ್ಲಿ ಇಲ್ಲಿ ಬರೆದ ಮೊದಲನೆಯವನಿರಬೇಕು( ಜೈ ಕನ್ನಡಾಂಬೆ!!) ನನ್ನ ಫೇಸ್ ಬುಕ್ ಪೋಸ್ಟ್‌ ಸಹ...( ಅಲ್ಲಿ ಕೂತುಕೊಂಡು "ಎಲ್ಲಾ ಕನ್ನಡದಲ್ಲಿ ಬರೆಯಿರಿ" ಎಂದು ನಿಮಗೆಲ್ಲಾ ಒತ್ತಾಯ ಮಾಡುತ್ತೇನೆ !!..ಏನಂದಿರಿ ತಮಿಳುನಾಡು ಅಂತಾನಾ??... ಕೇಳಿಸಲಿಲ್ಲ.. )

ಇಂಗ್ಲೀಷ್ ಕಾದಂಬರಿ, ಕಾವ್ಯ, ಲಿಟರೇಚರ್, ಎಂಜಿನಿಯರಿಂಗ್ ಬಗ್ಗೆ ಅದ್ಭುತ ವಿದೇಶಿ ಪುಸ್ತಕಗಳಿವೆ..ಮಿಕ್ಕದ್ದನ್ನೂ ನಾನು ನೋಡಲೂ ಸಮಯವಾಗಿಲ್ಲ..ದಿನವೆಲ್ಲಾ ಅಲ್ಲಿ ಕಳೆಯುತ್ತೇನೆ ಒಮ್ಮೊಮ್ಮೆ!

ಒಂದು ಪುಸ್ತಕದಲ್ಲೂ ಗೀಚಿದ್ದು, ಹರಿದಿದ್ದು, ಹಾಳು ಮಾಡಿದ್ದು ಕಂಡಿಲ್ಲ..ಓದುಗರ ಶ್ಲಾಘನೀಯ ಶಿಸ್ತಿನ ವರ್ತನೆ ಎಂದು ಹೊಗಳಲೇ ಬೇಕು. ಹತ್ತಿರದಲ್ಲೇ ಆವಿನ್ ಡೈರಿಯ ಅಂಗಡಿಯಲ್ಲಿ ಹಾಲು, ಬಾದಾಮಿ ಹಾಲು, ಸ್ವೀಟ್ಸ್, ಮಿಲ್ಕ್ ಶೇಕ್, ಐಸ್ ಕ್ರೀಂ, ಕುಲ್ಫಿ ಸಿಗುತ್ತದೆ...ಬೇರೆ ಅಂಗಡಿಯಿಲ್ಲ..

ಸದ್ದು ಮಾಡುವಂತಿಲ್ಲ, ಪಿಸುಗುಟ್ಟಬೇಕು, ಮೊಬೈಲ್‌ನಲ್ಲಿ ಜೋರಾಗಿ ಮಾತಾಡುವಂತಿಲ್ಲ. ನಾವೇ ಅಂತದಕ್ಕೆ ಗದರಿಸಬಹುದು!!, ರಿಂಗ್ ಟೋನ್ ಮೆತ್ತಗಿರಬೇಕು...

ಅರೆ, ಹಾ...ಕನ್ನಡ ಪುಸ್ತಕಗಳಿಲ್ಲ...ನಾನೊಬ್ಬನೆ ಅನಿಸುತ್ತೆ ಓದುಗ ಹೀಗೆ ಅವರನ್ನು ಕೇಳಿದ್ದು ಸಹ..ಹಾಗಾಗಿ ಡಿಮ್ಯಾಂಡ್ ಇಲ್ಲ. ತಮಿಳುನಾಡು ಸರಕಾರಕ್ಕೆ ಈ ಬಗ್ಗೆ ‘ಹೇಳುವವರು’ ಹೇಳಬೇಕು.

ಇದೊಂದು ವಿಶಿಷ್ಟ ಅನುಭವ. ಇಲ್ಲಿನ ನಿಮ್ಮ ಪ್ರವಾಸಿ ಸ್ಥಳಗಳ #ಬಕೆಟ್_ಲಿಸ್ಟಿ ನಲ್ಲಿ ಹಾಕಿಕೊಳ್ಳಿ!! ಡಾ. ನಾಗತಿಹಳ್ಳಿ ಚಂದ್ರಶೇಖರರು ಇಲ್ಲಿ ಬಂದಾಗ ಭೇಟಿ ನೀಡಿದ್ದರು. ಇದನ್ನು ಕಟ್ಟಿಕೊಟ್ಟ ಕರುಣಾನಿಧಿ ಯವರಿಗೆ ದೊಡ್ಡ ಥ್ಯಾಂಕ್ಸ್ ಸಲ್ಲುತ್ತದೆ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT