ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ: ಮತ್ತೊಂದು ಸೇತುವೆ ಕುಸಿತ

Published 22 ಜೂನ್ 2024, 14:45 IST
Last Updated 22 ಜೂನ್ 2024, 14:45 IST
ಅಕ್ಷರ ಗಾತ್ರ

ಸಿವಾನ್‌ (ಪಿಟಿಐ): ಬಿಹಾರದ ಸಿವಾನ್‌ ಜಿಲ್ಲೆಯ ಸಣ್ಣ ಸೇತುವೆಯೊಂದು ಶನಿವಾರ ಬೆಳಿಗ್ಗೆ ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ರಾಜ್ಯದ ಅರಾರಿಯದಲ್ಲಿ ಹೊಸ ಸೇತುವೆಯೊಂದು ಕುಸಿದಿತ್ತು. ಅದರ ಬೆನ್ನಲ್ಲೇ ಮತ್ತೊಂದು ಸೇತುವೆ ಕುಸಿದು ಬಿದ್ದಿದೆ.

ದುರೌಂಧಾ ಮತ್ತು ಮಹಾರಾಜಗಂಜ್‌ ತಾಲ್ಲೂಕುಗಳ ಕೆಲ ಹಳ್ಳಿಗಳನ್ನು ಸಂಪರ್ಕಿಸುವ ಈ ಸೇತುವೆಯನ್ನು ಕಾಲುವೆಯ ಮೇಲೆ ನಿರ್ಮಿಸಲಾಗಿತ್ತು. ಅದು ಮುಂಜಾನೆ 5 ಗಂಟೆ ಸುಮಾರಿಗೆ ಕುಸಿದಿದೆ ಎಂದು ಜಿಲ್ಲಾಧಿಕಾರಿ ಮುಕುಲ್‌ ಕುಮಾರ್‌ ಗುಪ್ತಾ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಇದು ತುಂಬಾ ಹಳೆಯ ಸೇತುವೆಯಾಗಿದ್ದು, ಕಾಲುವೆಯಲ್ಲಿ ನೀರು ಬಿಡುವಾಗ ಪಿಲ್ಲರ್‌ಗಳು ಕುಸಿದಿವೆ. ಅದನ್ನು ಪುನರ್‌ ನಿರ್ಮಿಸುವವರೆಗೆ ಈ ಭಾಗದ ಹಳ್ಳಿಗಳ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಆದಷ್ಟು ಬೇಗ ಪುನರ್‌ ನಿರ್ಮಾಣಕಾರ್ಯ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

1991ರಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಅಡಿಯಲ್ಲಿ 20 ಅಡಿ ಎತ್ತರದ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ತನಿಖಾ ವರದಿಯ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಹಾರಾಜಗಂಜ್‌ನ ಉಪ ವಿಭಾಗಾಧಿಕಾರಿ ಅನಿಲ್‌ ಕುಮಾರ್‌ ತಿಳಿಸಿದ್ದಾರೆ.

ರಾಜ್ಯದ ಅರಾರಿಯ ಜಿಲ್ಲೆಯಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯ ಒಂದು ಭಾಗ ಜೂನ್‌ 18ರಂದು ಕುಸಿದಿತ್ತು. ಈ ಸೇತುವೆಯ ಸಂಪರ್ಕ ರಸ್ತೆಗಳ ನಿರ್ಮಾಣ ಬಾಕಿ ಉಳಿದಿದ್ದುದರಿಂದ ಅದು ಸಾರ್ವಜನಿಕ ಬಳಕೆಗೆ ಮುಕ್ತವಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT