ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕತಾರ್‌ | ನೌಕಾಪಡೆಯ 8 ಮಾಜಿ ಸಿಬ್ಬಂದಿಗೆ ಮರಣದಂಡನೆ: ಮೇಲ್ಮನವಿ ಸಲ್ಲಿಸಿದ ಭಾರತ

ಭಾರತೀಯರಿಗೆ ಮರಣ ದಂಡನೆ ಪ್ರಕರಣ
Published 9 ನವೆಂಬರ್ 2023, 15:58 IST
Last Updated 9 ನವೆಂಬರ್ 2023, 15:58 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆಯ 8 ಮಾಜಿ ಸಿಬ್ಬಂದಿ ಕತಾರ್‌ ನ್ಯಾಯಾಲಯವೊಂದರಿಂದ ಮರಣ ದಂಡನೆಗೆ ಗುರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ.

ಮರಣ ದಂಡನೆಗೆ ಗುರಿಯಾಗಿರುವ ನೌಕಾಪಡೆಯ ಮಾಜಿ ಸಿಬ್ಬಂದಿಗೆ ಭಾರತವು ಎಲ್ಲ ರೀತಿಯ ಕಾನೂನು ಹಾಗೂ ಕಾನ್ಸುಲರ್ ನೆರವು ನೀಡಲಿದೆ ಎಂದು ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ತಿಳಿಸಿದ್ದಾರೆ.

ಕತಾರ್‌ನ ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಬಂಧಿತ ಎಲ್ಲ ಭಾರತೀಯರನ್ನು ಮಂಗಳವಾರ ಸಂಪರ್ಕಿಸಿ, ಮಾತುಕತೆ ನಡೆಸಿದೆ ಎಂದೂ ಅವರು ತಿಳಿಸಿದ್ದಾರೆ.

‘ನ್ಯಾಯಾಲಯದ ತೀರ್ಪು ಗೌಪ್ಯ ದಾಖಲೆಯಾಗಿರುವ ಕಾರಣ, ಅದನ್ನು ಕಾನೂನು ಹೋರಾಟ ನಡೆಸುವ ತಂಡದೊಂದಿಗೆ ಮಾತ್ರ ಹಂಚಿಕೊಳ್ಳಲಾಗಿದೆ. ಈ ತಂಡವು ಕತಾರ್‌ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮೇಲ್ಮನವಿ ಸಲ್ಲಿಕೆ ಸೇರಿದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದೂ ಅವರು ಹೇಳಿದರು.

‘ಈ ಪ್ರಕರಣ ಬಹಳ ಸೂಕ್ಷ್ಮವಾಗಿರುವ ಕಾರಣ, ಊಹಾಪೋಹಗಳಲ್ಲಿ ತೊಡಗದಂತೆ ಎಲ್ಲರನ್ನು ಒತ್ತಾಯಿಸುತ್ತೇನೆ’ ಎಂದು ಬಾಗ್ಚಿ ಹೇಳಿದರು.

ಕತಾರ್‌ನ ಅಲ್‌ ದಹ್ರಾ ಎಂಬ ಖಾಸಗಿ ಕಂಪನಿಯಲ್ಲಿ, ನೌಕಾಪಡೆಯ ಈ 8 ಜನ ಮಾಜಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಬೇಹುಗಾರಿಕೆ ಆರೋಪದಡಿ ಇವರನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT