ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ನೇಮಕ–ವಜಾ: ಮುಖ್ಯಮಂತ್ರಿಯ ವಿವೇಚನಾಧಿಕಾರ–ಡಿಎಂಕೆ

ರಾಜ್ಯಪಾಲ ರವಿ ಕ್ರಮಕ್ಕೆ ವಿರೋಧ * ಸ್ಟಾಲಿನ್‌ ಬೆಂಬಲಕ್ಕೆ ನಿಂತ ವಿಪಕ್ಷಗಳು
Published 30 ಜೂನ್ 2023, 15:53 IST
Last Updated 30 ಜೂನ್ 2023, 15:53 IST
ಅಕ್ಷರ ಗಾತ್ರ

ಚೆನ್ನೈ: ಸಚಿವ ಸೆಂಥಿಲ್‌ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಲು ಮುಂದಾಗಿದ್ದ ರಾಜ್ಯಪಾಲ ಆರ್‌.ಎನ್‌.ರವಿ ವಿರುದ್ದ ಆಡಳಿತಾರೂಢ ಡಿಎಂಕೆ ಶುಕ್ರವಾರ ವಾಗ್ದಾಳಿ ನಡೆಸಿದೆ.

‘ಸಚಿವರ ನೇಮಕ ಹಾಗೂ ವಜಾಗೊಳಿಸುವುದು ಮುಖ್ಯಮಂತ್ರಿಯ ವಿವೇಚನಾಧಿಕಾರವಾಗಿದೆ’ ಎಂದು ಪ್ರತಿಪಾದಿಸಿದೆ.

‘ಕಾನೂನಾತ್ಮಕ ಹೋರಾಟ ಸೇರಿದಂತೆ ರಾಜ್ಯಪಾಲರ ಕ್ರಮದ ವಿರುದ್ಧ ಲಭ್ಯವಿರುವ ಎಲ್ಲ ಆಯ್ಕೆಗಳ ಬಗ್ಗೆ ಪಕ್ಷ ಪರಿಶೀಲಿಸಲಿದೆ’ ಎಂದೂ ಡಿಎಂಕೆ ಹೇಳಿದೆ. ಈ ವಿಚಾರವಾಗಿ ಸಿಪಿಐಎಂಎಲ್‌ (ಲಿಬರೇಷನ್) ಹಾಗೂ ಎನ್‌ಸಿಪಿ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಡಿಎಂಕೆ ಬೆಂಬಲಕ್ಕೆ ನಿಂತಿವೆ.

ರಾಜ್ಯಪಾಲ ರವಿ ಅವರು ಸೆಂಥಿಲ್‌ ಅವರನ್ನು ಗುರುವಾರ ಸಚಿವ ಸಂಪುಟದಿಂದ ವಜಾಗೊಳಿಸಿ ಆದೇಶಿಸಿದ್ದರು. ನಂತರ, ಕೇಂದ್ರ ಗೃಹ ಸಚಿವಾಲಯದ ಸಲಹೆ ಮೇರೆಗೆ ಈ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿದ್ದಾರೆ.

‘ತಮಿಳುನಾಡು ಸರ್ಕಾರವು ರಾಜ್ಯಪಾಲರ ಕ್ರಮವನ್ನು ಒಪ್ಪಿಕೊಳ್ಳುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ರಾಜ್ಯಪಾಲರಿಗೆ ವಿವರವಾದ ಪತ್ರ ಬರೆಯುವರು’ ಎಂದು ಹಣಕಾಸು ಸಚಿವ ತಂಗಂ ತೆನ್ನರಸು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಈ ವಿಷಯದಲ್ಲಿ ರಾಜ್ಯಪಾಲರ ರವಿ ಅವರ ಕ್ರಮ ಏಕಪಕ್ಷೀಯ ಹಾಗೂ ಅವಸರದ ತೀರ್ಮಾನವಾಗಿತ್ತು. ಸೆಂಥಿಲ್‌ ಬಾಲಾಜಿ ಅವರನ್ನು ವಜಾಗೊಳಿಸುವ ತೀರ್ಮಾನ ಕೈಗೊಳ್ಳುವುದಕ್ಕೂ ಮುನ್ನ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿರಲಿಲ್ಲ. ಅದರಲ್ಲೂ, ಈ ವಿಚಾರವಾಗಿ ಅಟಾರ್ನಿ ಜನರಲ್‌ ಅವರೊಂದಿಗೆ ಚರ್ಚಿಸಬೇಕು ಎಂದು ಗೃಹ ಸಚಿವಾಲಯ ಹೇಳಬೇಕಾಯಿತು’ ಎಂದು ತಂಗಂ ಹೇಳಿದರು.

‘ಇದಾದ ನಂತರ, ಸೆಂಥಿಲ್‌ ಅವರನ್ನು ವಜಾಗೊಳಿಸುವ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿರುವುದಾಗಿ ಮುಖ್ಯಮಂತ್ರಿಗೆ ಪತ್ರ ಬರೆದರು. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ರಾಜ್ಯಪಾಲರು ವಿವೇಚನೆ ಬಳಸಬೇಕು’ ಎಂದರು.

ಸಮಾಲೋಚನೆ: ಈ ದಿಢೀರ್‌ ಬೆಳವಣಿಗೆ ಬೆನ್ನಲ್ಲೇ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಈ ವಿಷಯಕ್ಕೆ ಸಂಬಂಧಿಸಿ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನಾತ್ಮಕ ಮತ್ತು ರಾಜಕೀಯವಾಗಿ ಕಾರ್ಯತಂತ್ರ ರೂಪಿಸಲು ಡಿಎಂಕೆ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

‘ರಾಜ್ಯಪಾಲರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವುದು ಅವರ ಉದ್ದೇಶವನ್ನು ಬಹಿರಂಗಗೊಳಿಸಿದೆ. ಡಿಎಂಕೆಯನ್ನು ಗುರಿಯಾಗಿಸಿ ಬಿಜೆಪಿ ಹೂಡಿದ್ದ ರಾಜಕೀಯ ಅಸ್ತ್ರ ಈಗ ತಿರುಗುಬಾಣವಾಗಿದೆ’ ಎಂದು ಡಿಎಂಕೆ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

‘ದ್ವಂದ್ವ ನೀತಿ’: ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ, ‘ಇಂಥ ವಿಚಾರದಲ್ಲಿ ಡಿಎಂಕೆ ದ್ವಂದ್ವ ನೀತಿ ಅನುಸರಿಸುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.

‘ಈ ಹಿಂದೆ ಸ್ಟಾಲಿನ್‌ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಏನು ಹೇಳಿದ್ದರು ಎಂಬುದನ್ನು ಜನರ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಹಿಂದೆ ಎಐಎಡಿಎಂಕೆ ಸರ್ಕಾರವಿದ್ದಾಗ ಒಬ್ಬ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಸ್ಟಾಲಿನ್‌ ಅವರು ರಾಜ್ಯಪಾಲರನ್ನು ಒತ್ತಾಯಿಸಿದ್ದರು’ ಎಂದು ಹೇಳಿದ್ದಾರೆ.

ಎಐಎಡಿಎಂಕೆ ಆರೋಪ: ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಯಿಂದ ರಕ್ಷಿಸುವ ಉದ್ದೇಶದಿಂದಲೇ ಸೆಂಥಿಲ್‌ ಬಾಲಾಜಿ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ದೂರಿದೆ.

ಇ.ಡಿ ಪ್ರಕರಣ ಮತ್ತು ತನಿಖೆಯ ದೃಷ್ಟಿಯಿಂದ ಸಚಿವ ಸೆಂಥಿಲ್‌ ಅವರನ್ನು ಸಂಪುಟದಿಂದ ತೆಗೆದುಹಾಕಬೇಕು ಎಂದು ಎಐಎಡಿಎಂ ಪುನರುಚ್ಚರಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಸೆಂಥಿಲ್‌ ಅವರನ್ನು ಸಂಪುಟದಿಂದ ಕೈಬಿಡಲು ಡಿಎಂಕೆಗೆ ಏನು ಅಡ್ಡಿಯಾಗಿದೆ ಎಂದು ಎಐಎಡಿಎಂಕೆ ನಾಯಕ ಡಿ. ಜಯಕುಮಾರ್‌ ಪ್ರಶ್ನಿಸಿದ್ದಾರೆ.

‘ಯಾವುದೇ ಖಾತೆ ಇಲ್ಲದೇ ಸಚಿವ ಸ್ಥಾನದಲ್ಲಿ ಮುಂದುವರಿಸುವ ಮೂಲಕ ಸರ್ಕಾರ ಸಾರ್ವಜನಿಕರ ಹಣವನ್ನು ವ್ಯಯಿಸುತ್ತಿರುವುದು ಏಕೆ’ ಎಂದು ಅವರು ಕೇಳಿದ್ದಾರೆ.

ಆರ್.ಎನ್‌.ರವಿ
ಆರ್.ಎನ್‌.ರವಿ

ಶಾ ಸಲಹೆ: ಆದೇಶಕ್ಕೆ ತಡೆ ನೀಡಿದ ರಾಜ್ಯಪಾಲ

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಲಹೆಯ ಮೇರೆಗೆ ತಮಿಳುನಾಡು ರಾಜ್ಯಪಾಲ ಆರ್.ಎನ್‌.ರವಿ ಅವರು ಸಚಿವ ಸಂಪುಟದಿಂದ ಸೆಂಥಿಲ್‌ ಬಾಲಾಜಿ ಅವರನ್ನು ವಜಾಗೊಳಿಸಿ ಹೊರಡಿಸಿದ್ದ ಆದೇಶವನ್ನು ತಡೆಹಿಡಿದಿದ್ದಾರೆ. ಸೆಂಥಿಲ್‌ ಅವರನ್ನು ಸಂಪುಟದಿಂದ ವಜಾಗೊಳಿಸಿದ ಬಗ್ಗೆ ವಿವರಿಸಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರಿಗೆ ರಾಜ್ಯಪಾಲ ರವಿ ಪತ್ರ ಬರೆದಿದ್ದರು. ಶಾ ಅವರಿಂದ ಸಂದೇಶ ಬಂದ ಬೆನ್ನಲ್ಲೇ ಸ್ಟಾಲಿನ್‌ ಅವರಿಗೆ ಮತ್ತೊಂದು ಪತ್ರ ಕಳುಹಿಸಿದ ರಾಜ್ಯಪಾಲರು ತಾವು ನೀಡಿದ ಆದೇಶವನ್ನು ತಡೆ ಹಿಡಿದಿದ್ದಾಗಿ ತಿಳಿಸಿದ್ದಾರೆ.

‘ಇಂಥ ವಿಷಯಗಳ ಬಗ್ಗೆ ಅವಸರದ ನಿರ್ಣಯ ಕೈಗೊಳ್ಳಬಾರದು. ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ ಅವರ ಅಭಿಪ್ರಾಯ ಪಡೆಯಬೇಕು’ ಎಂಬ ಸಂದೇಶವನ್ನು ರಾಜ್ಯಪಾಲರಿಗೆ ಶಾ ರವಾನಿಸಿದ್ದರು.

‘ಕೇಂದ್ರ ಸಚಿವ ಅಮಿತ್ ಶಾ ಅವರ ಸಲಹೆಯಂತೆ ಈ ವಿಚಾರವಾಗಿ ಅಟಾರ್ನಿ ಜನರಲ್‌ ಅವರ ಅಭಿಪ್ರಾಯ ಪಡೆಯುವುದು ವಿವೇಕಯುತ ಕ್ರಮವಾಗಲಿದೆ. ಹೀಗಾಗಿ ನನ್ನಿಂದ ಮುಂದಿನ ಸೂಚನೆ ಬರುವವರೆಗೆ ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರನ್ನು ವಜಾಗೊಳಿಸುವ ಆದೇಶವನ್ನು ತಡೆ ಹಿಡಿಯಲಾಗಿದೆ’ ಎಂದು ಸ್ಟಾಲಿನ್‌ ಅವರಿಗೆ ಬರೆದ ಎರಡನೇ ಪತ್ರದಲ್ಲಿ ರಾಜ್ಯಪಾಲರು ವಿವರಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚಿಸದೇ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ನಿರ್ಧಾರವನ್ನು ರಾಜ್ಯಪಾಲರು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಬಿರುಗಾಳಿ ಎಬ್ಬಿಸಿದ್ದ ಪತ್ರ: ರಾಜ್ಯಪಾಲರು ಮುಖ್ಯಮಂತ್ರಿ ಸ್ಟಾಲಿನ್‌ ಅವರಿಗೆ ಬರೆದಿದ್ದ ಮೊದಲ ಪತ್ರ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು.

‘ಸಂವಿಧಾನದ 154 163 ಹಾಘೂ 164ನೇ ವಿಧಿ ಅಡಿ ದತ್ತವಾದ ಅಧಿಕಾರ ಬಳಿಸಿ ಮಂತ್ರಿ ಪರಿಷತ್ತಿನಿಂದ ಬಾಲಾಜಿ ಅವರನ್ನು ವಜಾಗೊಳಿಸುತ್ತಿದ್ದೇನೆ’ ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದರು.

‘ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಲು ರಾಜ್ಯಪಾಲ ರವಿ ಅವರಿಗೆ ಅಧಿಕಾರ ಇಲ್ಲ. ಈ ವಿಚಾರವನ್ನು ಸರ್ಕಾರ ಕಾನೂನಾತ್ಮಕವಾಗಿಯೇ ಎದುರಿಸಲಿದೆ’ ಎಂದು ಸ್ಟಾಲಿನ್ ಹೇಳಿದ್ದರು.

‘ಸಂವಿಧಾನದ ಈ ವಿಧಿಗಳನ್ನು ರಾಜ್ಯಪಾಲರು ಹೇಳಿರುವಂತೆ ವ್ಯಾಖ್ಯಾನಿಸಲಾಗದು. ಮುಖ್ಯಮಂತ್ರಿ ಶಿಫಾರಸು ಮಾಡಿದರೆ ಮಾತ್ರ ರಾಜ್ಯಪಾಲರು ಈ ರೀತಿ ಕ್ರಮ ಕೈಗೊಳ್ಳಬಹುದು’ ಎಂದು ಲೋಕಸಭೆಯ ಮಾಜಿ ಮಹಾಕಾರ್ಯದರ್ಶಿ ಪಿ.ಡಿ.ಟಿ.ಆಚಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಧಿಕಾರ ವ್ಯಾಪ್ತಿ ಮೀರಿ ಕ್ರಮ ಕೈಗೊಳ್ಳುತ್ತಿರುವ ಕಾರಣ ತಮಿಳುನಾಡು ರಾಜ್ಯಪಾಲ ಆರ್‌.ಎನ್.ರವಿ ಅವರನ್ನು ತೆಗೆದುಹಾಕಬೇಕು. ರಾಜ್ಯಪಾಲರ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯೇತರ ಪಕ್ಷಗಳ ಸರ್ಕಾರವನ್ನು ಕೇಂದ್ರವು ಶತ್ರುವಿನ ರೀತಿಯಲ್ಲಿ ನೋಡುತ್ತಿದೆ.
ದೀಪಂಕರ್ ಭಟ್ಟಾಚಾರ್ಯ ಪ್ರಧಾನ ಕಾರ್ಯದರ್ಶಿ ಸಿಪಿಐ (ಎಂಎಲ್‌) ಲಿಬರೇಷನ್
ರಾಜ್ಯಪಾಲ ಆರ್‌.ಎನ್‌.ರವಿ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅವರು ತಮಿಳುನಾಡಿನ ರಾಜ್ಯಪಾಲರಲ್ಲ ಬದಲಾಗಿ ಬಿಜೆಪಿಯ ರಾಜ್ಯಪಾಲರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎಲ್ಲಿದೆ? ಇಂದು ತಮಿಳುನಾಡಿನಲ್ಲಿ ನಡೆದ ಘಟನೆ ನಾಳೆ ಇತರ ರಾಜ್ಯಗಳಲ್ಲಿಯೂ ಸಂಭವಿಸಬಹುದು.
ಸುಪ್ರಿಯಾ ಸುಳೆ ಎನ್‌ಸಿಪಿ ಕಾರ್ಯಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT