ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸೂರಿನಲ್ಲಿ ಶಸ್ತ್ರಸಜ್ಜಿತ ಗುಂಪಿನಿಂದ 25 ಕೆ.ಜಿ ಚಿನ್ನ ದರೋಡೆ

ಮುತ್ತೂಟ್‌ ಫೈನಾನ್ಸ್‌ ಶಾಖೆಯಲ್ಲಿ ಲೂಟಿ: ₹ 7 ಕೋಟಿ ಮೌಲ್ಯದ ಚಿನ್ನ
Last Updated 22 ಜನವರಿ 2021, 16:17 IST
ಅಕ್ಷರ ಗಾತ್ರ

ಚೆನ್ನೈ:ಹಾಡಹಗಲೇ ಶಸ್ತ್ರಸಜ್ಜಿತ ಆರು ಜನರ ಗುಂಪೊಂದು ತಮಿಳುನಾಡಿನ ಹೊಸೂರಿನಲ್ಲಿರುವ ಮುತ್ತೂಟ್‌ ಫೈನಾನ್ಸ್‌ ಶಾಖೆಗೆ ನುಗ್ಗಿ, ₹ 7 ಕೋಟಿ ಮೌಲ್ಯದ 25 ಕೆ.ಜಿ ಚಿನ್ನವನ್ನು ದರೋಡೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಹೊಸೂರು, ಕೃಷ್ಣಗಿರಿ ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿದೆ. ಮುತ್ತೂಟ್‌ ಫೈನಾನ್ಸ್‌ ಚಿನ್ನ ಅಡವಿಟ್ಟುಕೊಂಡು ಸಾಲ ನೀಡುವ ಕಂಪನಿ.

ಹೊಸೂರು– ಬಾಗಲೂರು ರಸ್ತೆಯಲ್ಲಿ ಸಂಸ್ಥೆಯ ಶಾಖೆ ಇದೆ. ಶುಕ್ರವಾರ ಬೆಳಿಗ್ಗೆ 9.30ರ ವೇಳೆಗೆ ಶಾಖೆಯನ್ನು ತೆರೆದ ಸಿಬ್ಬಂದಿ, ದಿನದ ಕರ್ತವ್ಯಕ್ಕೆ ಅಣಿಯಾಗುತ್ತಿದ್ದ ವೇಳೆ ಶಸ್ತ್ರಸಜ್ಜಿತ ಆರು ಜನರು ಶಾಖೆ ಒಳಗೆ ನುಗ್ಗಿದ್ದಾರೆ.

ಮುಖಗವುಸು ಧರಿಸಿದ್ದ ಅವರು, ಮೊದಲು ಕಾವಲುಗಾರನ ಮೇಲೆ ಹಲ್ಲೆ ನಡೆಸಿ, ಒಳ ನುಗ್ಗಿದ್ದಾರೆ. ಗನ್‌ ತೋರಿಸಿ ಶಾಖೆಯ ಸಿಬ್ಬಂದಿಗೆ ಬೆದರಿಕೆವೊಡ್ಡಿದ ದರೋಡೆಕೋರರು, ಲಾಕರ್‌ಗಳಲ್ಲಿದ್ದ 25 ಕೆ.ಜಿ ಚಿನ್ನ, ₹ 96,000 ನಗದು ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಈ ಕೃತ್ಯದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

‘ದರೋಡೆಕೋರರ ಪತ್ತೆಗಾಗಿ 10 ವಿಶೇಷ ತಂಡಗಳನ್ನು ರಚಿಸಲಾಗಿದೆ. ಬೆಂಗಳೂರು ಹಾಗೂ ತಮಿಳುನಾಡಿನ ವಿವಿಧ ಸ್ಥಳಗಳಿಗೆ ತೆರಳಿರುವ ತಂಡಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿವೆ’ ಎಂದು ಕೃಷ್ಣಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಂಡಿ ಗಂಗಾಧರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ಆಯಾಮಗಳಲ್ಲಿಯೂ ತನಿಖೆಯನ್ನು ಆರಂಭಿಸಿದ್ದೇವೆ. ಬೆಂಗಳೂರು ರಾಜ್ಯದ ಗಡಿಗೆ ಸಮೀಪದಲ್ಲಿದ್ದು, ದರೋಡೆಕೋರರು ಅಲ್ಲಿ ಅಡಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಆರೋಪಿಗಳ ಪತ್ತೆಗಾಗಿ ಕರ್ನಾಟಕ ಪೊಲೀಸರ ನೆರವು ಕೇಳಿದ್ದೇವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT