ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪಿ ನಯಾಜಿ ಬಂಧನ

Published 2 ಮಾರ್ಚ್ 2024, 16:24 IST
Last Updated 2 ಮಾರ್ಚ್ 2024, 16:24 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಅವರ ಹತ್ಯೆಯ ಪ್ರಮುಖ ಸಂಚುಕೋರ ಎನ್ನಲಾದ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತ ಘೌಸ್ ನಯಾಜಿ ಎನ್ನುವವನನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂಧಿಸಿದ್ದಾರೆ.

ನಯಾಜಿ ತಾಂಜಾನಿಯಾದಲ್ಲಿ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಂಜಾನಿಯಾದಿಂದ ಮುಂಬೈಗೆ ಬಂದ ನಯಾಜಿಯನ್ನು ಬಂಧಿಸಲಾಯಿತು. ಗುಪ್ತಚರ ಮಾಹಿತಿ ಆಧರಿಸಿ ನಯಾಜಿ ತಾಂಜಾನಿಯಾದಲ್ಲಿ ಇರುವುದನ್ನು ಪತ್ತೆ ಮಾಡಲಾಗಿತ್ತು. ಅಲ್ಲಿನ ಅಧಿಕಾರಿಗಳು ಆತನನ್ನು ಹಿಡಿದು, ಭಾರತಕ್ಕೆ ಕಳುಹಿಸಿದ್ದರು.

ಬೆಂಗಳೂರಿನ ಶಿವಾಜಿನಗರದ ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್ ಅವರನ್ನು 2016ರ ಅಕ್ಟೋಬರ್ 16ರಂದು ಹತ್ಯೆ ಮಾಡಲಾಗಿತ್ತು. ಪಿಎಫ್‌ಐನ ನಾಲ್ವರು ಕಾರ್ಯಕರ್ತರು ಅವರ ಹತ್ಯೆ ಮಾಡಿದ್ದರು. ಹತ್ಯೆಯ ಪ್ರಮುಖ ಸಂಚುಕೋರ ಎಂಬ ಆರೋಪ ನಯಾಜಿ ಮೇಲಿದೆ.

ಎಸ್‌ಡಿಪಿಐ ಪಕ್ಷದ ಹೆಬ್ಬಾಳ ವಿಧಾಸನಭಾ ಕ್ಷೇತ್ರದ ಅಧ್ಯಕ್ಷ ಆಗಿದ್ದ ನಯಾಜಿ, ಆಸಿಂ ಶರೀಫ್ ಎನ್ನುವ ವ್ಯಕ್ತಿಯೊಬ್ಬನ ಜೊತೆಗೂಡಿ ರುದ್ರೇಶ್ ಕೊಲೆಗೆ ಸಂಚು ರೂಪಿಸಿದ್ದ ಎಂಬ ಆರೋಪ ಇದೆ ಎಂದು ಹೇಳಿಕೆ ತಿಳಿಸಿದೆ. ಪಿಎಫ್‌ಐ ಸಂಘಟನೆಯ ರಾಜಕೀಯ ವಿಭಾಗ ಎಸ್‌ಡಿಪಿಐ.

‘ಆರ್‌ಎಸ್‌ಎಸ್‌ ಸದಸ್ಯರು ಹಾಗೂ ಇಡೀ ಸಮಾಜದಲ್ಲಿ ಭೀತಿಯನ್ನು ಸೃಷ್ಟಿಸಲು ನಯಾಜಿ ಮತ್ತು ಶರೀಫ್‌ ಜೊತೆಗೂಡಿ, ಇತರ ನಾಲ್ವರಿಗೆ ರುದ್ರೇಶ್ ಅವರನ್ನು ಹತ್ಯೆ ಮಾಡಲು ಪ್ರೇರಣೆ ನೀಡಿದ್ದರು. ಆರ್‌ಎಸ್‌ಎಸ್‌ ವಿರುದ್ಧದ ಸಮರವು ಪವಿತ್ರ ಯುದ್ಧಕ್ಕೆ ಸಮ ಎಂದು ಆ ನಾಲ್ವರ ಮನವೊಲಿಸಲಾಗಿತ್ತು’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ನಯಾಜಿ ಬಂಧನದ ಪರಿಣಾಮವಾಗಿ ರುದ್ರೇಶ್ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿದಂತಾಗಿದೆ. ಇತರ ಆರೋಪಿಗಳ ವಿರುದ್ಧದ ವಿಚಾರಣೆಯು ಬೆಂಗಳೂರಿನಲ್ಲಿ ಇರುವ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಎನ್‌ಐಎ 2017ರ ಏಪ್ರಿಲ್‌ 12ರಂದು ಸಲ್ಲಿಸಿದ್ದ ಆರೋಪಪಟ್ಟಿ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಇರ್ಫಾನ್ ಪಾಶಾ, ವಸೀಂ ಅಹಮದ್, ಮೊಹಮ್ಮದ್ ಸಾದಿಕ್, ಮೊಹಮ್ಮದ್ ಮುಜೀಬ್ ಉಲ್ಲಾ ಮತ್ತು ಅಸೀಂ ಶರೀಫ್ ಬಂಧಿತರು.

‘ಆರೋಪಿಗಳಲ್ಲಿ ಯಾರೊಬ್ಬರಿಗೂ ರುದ್ರೇಶ್ ಬಗ್ಗೆ ವೈಯಕ್ತಿಕವಾಗಿ ದ್ವೇಷ ಇರಲಿಲ್ಲ. ರುದ್ರೇಶ್ ಅವರು ನಿರ್ದಿಷ್ಟ ಸಂಘಟನೆಯ ನಾಯಕ/ಕಾರ್ಯಕರ್ತ ಆಗಿದ್ದ ಕಾರಣಕ್ಕಾಗಿಯೇ ಹತ್ಯೆ ಮಾಡಲಾಯಿತು. ಜನರಲ್ಲಿನ ಒಂದು ವರ್ಗದಲ್ಲಿ ಭೀತಿಯನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಿರುವ ಹತ್ಯೆಯು ಭಯೋತ್ಪಾದಕ ಕೃತ್ಯ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಆರ್‌ಎಸ್‌ಎಸ್‌ನ ಸದಸ್ಯರೊಬ್ಬರನ್ನು ಹಾಡಹಗಲೇ, ಮಾರಣಾಂತಿಕ ಅಸ್ತ್ರಗಳನ್ನು ಬಳಸಿ ಹತ್ಯೆ ಮಾಡುವ ಮೂಲಕ ಈ ಉದ್ದೇಶ ಈಡೇರಿಸಲಾಗಿದೆ’ ಎಂದು ಎನ್‌ಐಎ 2017ರ ಏಪ್ರಿಲ್‌ನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT