ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಎಸ್‌ಟಿ: ಹಣಕಾಸು ಸಚಿವರ ಕ್ಷಮೆಯಾಚಿಸಿದ ತಮಿಳುನಾಡಿನ ರೆಸ್ಟೋರೆಂಟ್‌ ಮಾಲೀಕ

Published : 13 ಸೆಪ್ಟೆಂಬರ್ 2024, 14:43 IST
Last Updated : 13 ಸೆಪ್ಟೆಂಬರ್ 2024, 14:43 IST
ಫಾಲೋ ಮಾಡಿ
Comments

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಗ್ಗೆ ಕಳವಳ ವ್ಯಕ್ತಪಡಿಸಿದ ರೆಸ್ಟೋರೆಂಟ್‌ ಮಾಲೀಕರೊಬ್ಬರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಕ್ಷಮೆಯಾಚಿಸಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌, ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ.

ತಮಿಳುನಾಡಿನ ಅನ್ನಪೂರ್ಣ ರೆಸ್ಟೋರೆಂಟ್‌ ಸರಣಿಯ ಮಾಲೀಕರು ನಿರ್ಮಲಾ ಅವರ ಕ್ಷಮೆಯಾಚಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. 

ರೆಸ್ಟೋರೆಂಟ್‌ ಮಾಲೀಕ ತಿರು ಶ್ರೀನಿವಾಸನ್‌, ಹಣಕಾಸು ಸಚಿವರು ಆಯೋಜಿಸಿದ್ದ ಸಭೆಯಲ್ಲಿ ಜಿಎಸ್‌ಟಿಯ ಸಂಕೀರ್ಣತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತಾವಾಡಿದ ಮಾತುಗಳಿಗೆ ಆ ಬಳಿಕ ಖಾಸಗಿ ಭೇಟಿ ವೇಳೆ ಕ್ಷಮೆಯಾಚಿಸಿದ್ದಾರೆ. ಶ್ರೀನಿವಾಸನ್‌ ಸಭೆಯಲ್ಲಿ ಮಾತನಾಡಿದ ಮತ್ತು ಖಾಸಗಿ ಭೇಟಿಯಲ್ಲಿ ಕ್ಷಮೆಯಾಚಿಸಿದ ವಿಡಿಯೊಗಳನ್ನು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೆತ್ ಅವರು ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಮಲಾ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಅನ್ನಪೂರ್ಣ ರೆಸ್ಟೋರೆಂಟ್ ಮಾಲೀಕರನ್ನು ಅವಮಾನ ಮಾಡಿದ ಘಟನೆಯು ‘ಅಧಿಕಾರದ ದುರಹಂಕಾರ’ವನ್ನು ತೋರಿಸುತ್ತದೆ. ಹಣಕಾಸು ಸಚಿವರು ಸಾರ್ವಜನಿಕ ಸಂವಾದಗಳಲ್ಲಿ ಪದೇ ಪದೇ ಇಂತಹ ತಪ್ಪು ಮಾಡುತ್ತಿದ್ದಾರೆ’ ಎಂದು ದೂರಿದರು. 

‘ರೆಸ್ಟೋರೆಂಟ್‌ ಮಾಲೀಕರು ಜಿಎಸ್‌ಟಿಯ ಲೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಮಾತುಗಳಿಗೆ ವ್ಯಂಗ್ಯವಾಗಿ ನಕ್ಕ ಸಚಿವರು ಆ ಬಳಿಕ ಬಲವಂತದಿಂದ ಕ್ಷಮೆ ಕೇಳುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಅನ್ನಪೂರ್ಣ ರೆಸ್ಟೋರೆಂಟ್‌ನಂತಹ ಸಣ್ಣ ಉದ್ಯಮದ ಮಾಲೀಕರು ಸರಳೀಕೃತ ಜಿಎಸ್‌ಟಿಗೆ ಮನವಿ ಮಾಡಿದಾಗ ಅವರಿಗೆ ಅಗೌರವ ತೋರಲಾಗುತ್ತದೆ. ಆದರೆ, ಶತಕೋಟ್ಯಧಿಪತಿ ಗೆಳೆಯರು ಕಾನೂನು ಬದಲಿಸಲು ಅಥವಾ ದೇಶದ ಸಂಪತ್ತನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿದಾಗ ಪ್ರಧಾನಿ ಮೋದಿ ಅವರು ಕೆಂಪು ಹಾಸಿನ ಸ್ವಾಗತ ನೀಡುವರು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಅಣ್ಣಾಮಲೈ ಕ್ಷಮೆಯಾಚನೆ

ಖಾಸಗಿ ಮಾತುಕತೆಯ ವಿಡಿಯೊ ಬಹಿರಂಗಗೊಂಡದ್ದಕ್ಕೆ ಬಿಜೆಪಿ ತಮಿಳುನಾಡು ಘಟಕದ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಕ್ಷಮೆಯಾಚಿಸಿದ್ದಾರೆ.  ‘ನಮ್ಮ ಕಾರ್ಯಕರ್ತರು ಮಾಡಿದ ಈ ಕೆಲಸಕ್ಕೆ ತಮಿಳುನಾಡು ಬಿಜೆಪಿ ಘಟಕದ ಪರವಾಗಿ ಕ್ಷಮೆಯಾಚಿಸುತ್ತೇನೆ. ಅನ್ನಪೂರ್ಣ ರೆಸ್ಟೋರೆಂಟ್‌ ಮಾಲೀಕ ಶ್ರೀನಿವಾಸನ್‌ ಅವರೊಂದಿಗೆ ಮಾತನಾಡಿದ್ದು ಖಾಸಗಿತನದ ಉಲ್ಲಂಘನೆಗಾಗಿ ವಿಷಾದ ವ್ಯಕ್ತಪಡಿಸಿದ್ದೇನೆ. ಈ ವಿವಾದವನ್ನು ಇಲ್ಲಿಗೆ ಕೊನೆಗೊಳಿಸಬೇಕು ಎಂದು ಎಲ್ಲರನ್ನೂ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT