ಎಎಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಸಚಿವೆ ಆತಿಶಿ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಪ್ರಸ್ತಾಪಿಸಿದ್ದು, ಪಕ್ಷವು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೇಜ್ರಿವಾಲ್ ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ಕರೆತರುವ ಗುರಿಯೊಂದಿಗೆ ನಾನು ಮುಂದಿನ ಕೆಲವು ತಿಂಗಳು ಕೆಲಸ ಮಾಡುತ್ತೇನೆ. ಅರವಿಂದ ಕೇಜ್ರಿವಾಲ್ ಅವರ ಮಾರ್ಗದರ್ಶನದಲ್ಲಿ ನಾನು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತೇನೆ. ದೆಹಲಿ ಜನರನ್ನು ರಕ್ಷಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ಕೇಜ್ರಿವಾಲ್ ಅವರು ನನ್ನನ್ನು ನಂಬಿದ್ದರು. ಮೊದಲು ಶಾಸಕಿಯಾಗಿ, ಬಳಿಕ ಸಚಿವೆಯಾಗಿ ಮತ್ತು ಈಗ ಮುಖ್ಯಮಂತ್ರಿಯಾಗಿ ಮಾಡಿದ್ದಾರೆ. ನಾನು ಅವರಿಗೆ ಕೃತಜ್ಞಳಾಗಿದ್ದಾನೆ. ಮೊದಲ ಬಾರಿಗೆ ರಾಜಕಾರಣಿಯೊಬ್ಬರು ಎಎಪಿಯಲ್ಲಿ ಮಾತ್ರ ಇಂತಹ ಅವಕಾಶಗಳನ್ನು ಪಡೆಯಬಹುದು. ನಾನು ಇತರೆ ಯಾವುದೇ ಪಕ್ಷಗಳಲ್ಲಿ ಇದ್ದಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೂಡ ಸಿಗುತ್ತಿರಲಿಲ್ಲ’ ಎಂದು ಹೇಳಿದ್ದಾರೆ.
‘ನನಗೆ ಸಂತೋಷವಾಗಿದೆ. ಹಾಗೆಯೇ ನನ್ನ ಹಿರಿಯ ಅಣ್ಣ (ಅರವಿಂದ ಕೇಜ್ರಿವಾಲ್) ಇಂದು (ಮಂಗಳವಾರ) ರಾಜೀನಾಮೆ ನೀಡುತ್ತಿರುವುದಕ್ಕೆ ಬಹಳ ಬೇಸರವಾಗುತ್ತಿದೆ. ನನಗೆ ಯಾರು ಹೂವಿನ ಹಾರ ಹಾಕಬೇಡಿ, ಅಭಿನಂದಿಸಬೇಡಿ. ಇದು ದುಃಖದ ಸಂದರ್ಭವಾಗಿದೆ’ ಎಂದು ಆತಿಶಿ ಹೇಳಿದ್ದಾರೆ.
ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ನಂತರ ಆತಿಶಿ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ.