ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಯೋಧ್ಯೆಯಲ್ಲಿ ಹೊಸ ಶಕೆ: ರಾಮಮಂದಿರ ಉದ್ಘಾಟನೆಗೂ ಮುನ್ನ ಸಂಭ್ರಮ ಹೆಚ್ಚಿಸಿದ ಮೋದಿ

Published : 30 ಡಿಸೆಂಬರ್ 2023, 16:04 IST
Last Updated : 30 ಡಿಸೆಂಬರ್ 2023, 16:04 IST
ಫಾಲೋ ಮಾಡಿ
Comments

ಅಯೋಧ್ಯೆ: ಹೂವಿನ ಹಾಸಿಗೆಯಂತೆ ಕಾಣಿಸುತ್ತಿದ್ದ ಅಯೋಧ್ಯೆಯಲ್ಲಿ ಶನಿವಾರ ಹಬ್ಬದ ಸಂಭ್ರಮ ಮನೆಮಾಡಿತ್ತು. ರಾಮಮಂದಿರದ ಉದ್ಘಾಟನೆಗೆ ಸಜ್ಜಾಗುತ್ತಿರುವ ಈ ನಗರದಲ್ಲಿ ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ ಹಾಡಲಿರುವ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. 

ಮರುಅಭಿವೃದ್ಧಿ ಆಗಿರುವ ರೈಲು ನಿಲ್ದಾಣ ಮತ್ತು ಹೊಸದಾಗಿ ನಿರ್ಮಿಸಿರುವ ‘ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ’ ಉದ್ಘಾಟಿಸಿದ ಪ್ರಧಾನಿ, ಭರ್ಜರಿ ರೋಡ್‌ ಶೋ ನಡೆಸಿದರು. ಮೋದಿ ಅವರ ಭೇಟಿ, ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭದ ‘ಪೂರ್ವತಯಾರಿ’ಯಂತೆ ಇತ್ತು. 

ಇಡೀ ದಿನ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಪ್ರಧಾನಿ, ₹ 15,700 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಇದರಲ್ಲಿ ₹ 11,100 ಕೋಟಿ ಮೊತ್ತದ ಯೋಜನೆಗಳು ಅಯೋಧ್ಯೆಗೆ ಮೀಸಲಾಗಿದ್ದರೆ, ಇನ್ನುಳಿದ ₹ 4,600 ಕೋಟಿ ಮೊತ್ತದ ಯೋಜನೆಗಳು ಉತ್ತರ ಪ್ರದೇಶದ ಇತರ ಭಾಗಗಳಿಗೆ ಸಂಬಂಧಿಸಿದ್ದಾಗಿವೆ.

ರೋಡ್‌ ಶೋ: ಬೆಳಿಗ್ಗೆ 11ರ ವೇಳೆಗೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ, ಅಲ್ಲಿಂದ ನೇರವಾಗಿ ರೈಲು ನಿಲ್ದಾಣ ಉದ್ಘಾಟನೆಗೆ ತೆರಳಿದರು. 15 ಕಿ.ಮೀ. ದೂರದ ಹಾದಿಯಲ್ಲಿ ರೋಡ್‌ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ನೂರಾರು ಮಂದಿ ಪ್ರಧಾನಿ ಅವರಿದ್ದ ಕಾರಿಗೆ ಹೂಮಳೆಗರೆದರು. 

ಜನರತ್ತ ಕೈಬೀಸಿದ ಪ್ರಧಾನಿ, ವಿವಿಧ ಕಲಾ ತಂಡಗಳ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಸುಮಾರು 1,400 ಕಲಾವಿದರು ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಮೆರುಗು ಹೆಚ್ಚಿಸಿದರು.  

₹ 240 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ‘ಅಯೋಧ್ಯಾ ಧಾಮ್’ ರೈಲು ನಿಲ್ದಾಣ ಉದ್ಘಾಟಿಸಿದ ಅವರು, ಅಮೃತ್ ಭಾರತ್‌ನ ಎರಡು ಹಾಗೂ ವಂದೇ ಭಾರತ್‌ನ ಆರು ರೈಲುಗಳಿಗೆ ಹಸಿರು ನಿಶಾನೆ ತೋರಿದರು. 

ಲತಾ ಮಂಗೇಶ್ಕರ್‌ ಚೌಕ್‌ಗೆ ಭೇಟಿ ನೀಡಿ, ಅಲ್ಲಿ ಸ್ಥಾಪಿಸಿರುವ ವೀಣೆಯ ಬೃಹತ್‌ ಗಾತ್ರದ ಪ್ರತಿಕೃತಿ ಅನಾವರಣಗೊಳಿಸಿದರು. ₹ 1,450 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣ ಉದ್ಘಾಟಿಸಿದ ಬಳಿಕ ‘ಜನಸಭಾ’ ರ್‍ಯಾಲಿ ಉದ್ದೇಶಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT