ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆ: ಕ್ರಮಕ್ಕೆ ಸರ್ಕಾರ ಬದ್ಧ

ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
Published 27 ಜೂನ್ 2024, 23:30 IST
Last Updated 27 ಜೂನ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಹೇಳಿದರು. 

ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಅಂಶಗಳು ಮತ್ತು ಪರೀಕ್ಷೆಗಳನ್ನು ಆಯೋಜಿಸುವ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಸಮಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು. 

ಸ್ಪರ್ಧಾತ್ಮಕ ಪರೀಕ್ಷೆಗಳೇ ಇರಲಿ ಅಥವಾ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆಗಳೇ ಆಗಿರಲಿ, ಪರೀಕ್ಷಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳನ್ನು ರಾಷ್ಟ್ರಪತಿಯವರು ಪ್ರಸ್ತಾಪಿಸುತ್ತಿದ್ದಂತೆಯೇ ವಿರೋಧ ಪಕ್ಷಗಳ ಕೆಲವು ಸದಸ್ಯರು, ‘ನೀಟ್‌’, ‘ನೀಟ್‌’ ಎಂದು ಕೂಗಿದರು.

‘ಪರೀಕ್ಷೆ ನಡೆಸುವ ಪ್ರಕ್ರಿಯೆಗೆ ಯಾವುದೇ ಅಡಚಣೆ ಉಂಟಾಗಬಾರದು. ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡುವುದು ಅತ್ಯಗತ್ಯ. ಈಚೆಗಿನ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲು ಸರ್ಕಾರ ಬದ್ಧವಾಗಿದೆ. ಈ ಹಿಂದೆಯೂ ಕೆಲವು ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳು ನಡೆದಿವೆ. ಆದ್ದರಿಂದ ಈ ವಿಚಾರದಲ್ಲಿ ನಾವು ರಾಜಕೀಯವನ್ನು ಮೀರಿ ರಾಷ್ಟ್ರಮಟ್ಟದಲ್ಲಿ ಬಲವಾದ ಹೆಜ್ಜೆಗಳನ್ನಿಡುವುದು ಮುಖ್ಯ’ ಎಂದರು.

ತುರ್ತು ಪರಿಸ್ಥಿತಿ ‘ಕರಾಳ ಅಧ್ಯಾಯ’: ‘ಸಂವಿಧಾನ ಜಾರಿಗೆ ಬಂದ ನಂತರವೂ ಸಂವಿಧಾನದ ಮೇಲೆ ಹಲವಾರು ದಾಳಿಗಳು ನಡೆದಿವೆ. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಸಂವಿಧಾನದ ಮೇಲೆ ನಡೆದ ದಾಳಿಯ ಅತಿದೊಡ್ಡ ಮತ್ತು ಕರಾಳ ಅಧ್ಯಾಯವಾಗಿದೆ. ಆದರೆ, ಅಂತಹ ಅಸಾಂವಿಧಾನಿಕ ಶಕ್ತಿಗಳ ವಿರುದ್ಧ ದೇಶವು ಗೆದ್ದುಬಂದಿದೆ ಎಂದು ಹೇಳಿದರು.

ಯುಸಿಸಿ ಪ್ರಸ್ತಾಪ ಇಲ್ಲ: ಬುಲೆಟ್‌ ರೈಲು ಯೋಜನೆ, ಹಿರಿಯ ನಾಗರಿಕರ ಆರೋಗ್ಯ ವಿಮೆ ಸೇರಿದಂತೆ ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಕೆಲವು ಅಂಶಗಳನ್ನು ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಹೇಳಿದರು. ಆದರೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ‘ಒಂದು ದೇಶ, ಒಂದು ಚುನಾವಣೆ’ಯಂತಹ ಕೆಲವು ಮಹತ್ವದ ವಿಷಯಗಳನ್ನು ಅವರು ಪ್ರಸ್ತಾಪಿಸಲಿಲ್ಲ.

ರಾಷ್ಟ್ರಪತಿ ಮಾಡಿರುವ ಭಾಷಣ ಸಮಗ್ರವಾಗಿದೆ ಮತ್ತು ಅಭಿವೃದ್ಧಿ ಹಾಗೂ ಉತ್ತಮ ಆಡಳಿತದ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದೆ.
–ನರೇಂದ್ರ ಮೋದಿ, ಪ್ರಧಾನಿ
ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ತಿರಸ್ಕರಿಸಿದ ಸುಳ್ಳನ್ನು ರಾಷ್ಟ್ರಪತಿಗಳ ಮೂಲಕ ಓದಿಸಿ ಚಪ್ಪಾಳೆ ಗಿಟ್ಟಿಸುವ ವ್ಯರ್ಥ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡಿದ್ದಾರೆ.
–ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಪರಸ್ಪರ ಆರೋಪ ಹೊರಿಸುವ ಬದಲು ಸಮಾಜದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕಿತ್ತು.
–ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ಭಾಷಣದ ಪ್ರಮುಖ ಅಂಶಗಳು

* ಚುನಾವಣಾ ಆಯೋಗವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ್ದು 64 ಕೋಟಿ ಮಂದಿ ಮತ ಚಲಾಯಿಸಿದ್ದಾರೆ. ಭಾರತದ ಜನರು ಸತತ ಮೂರನೇ ಬಾರಿಗೆ ಸ್ಥಿರ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ.

* ಇವಿಎಂ ಕಳೆದ ಒಂದು ದಶಕದ ಅವದಿಯಲ್ಲಿ ಸುಪ್ರೀಂ ಕೋರ್ಟ್‌ನಿಂದ ಹಿಡಿದು ಜನತಾ ನ್ಯಾಯಾಲಯದವರೆಗೆ ಪ್ರತಿಯೊಂದು ಪರೀಕ್ಷೆಯನ್ನೂ ಗೆದ್ದು ಬಂದಿದೆ.

* ಕಳೆದ 10 ವರ್ಷಗಳಲ್ಲಿ 7 ಹೊಸ ಐಐಟಿ 16 ಐಐಐಟಿ 7 ಐಐಎಂ 15 ಐಐಐಎಂ 315 ವೈದ್ಯಕೀಯ ಕಾಲೇಜುಗಳು ಮತ್ತು 390 ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ

* ಮುಂದಿನ ತಿಂಗಳಲ್ಲಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ನಿರ್ಧಾರಗಳು ಮಾತ್ರವಲ್ಲದೆ ಕೆಲವೊಂದು ಐತಿಹಾಸಿಕ ತೀರ್ಮಾನಗಳೂ ಇರಲಿವೆ.

* ಒಂದು ದಶಕದಲ್ಲಿ 25 ಕೋಟಿ ಮಂದಿ ಬಡತನದಿಂದ ಹೊರಗೆ ಬಂದಿದ್ದಾರೆ. ಪಿ.ಎಂ ಆವಾಸ್‌ ಯೋಜನೆಯಡಿ 4 ಕೋಟಿ ಮಹಿಳೆಯರಿಗೆ ಮನೆ ನಿರ್ಮಿಸಲಾಗಿದೆ.

ಎಎಪಿ ಸದಸ್ಯರಿಂದ ಬಹಿಷ್ಕಾರ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಧನವನ್ನು ಖಂಡಿಸಿ ಎಎಪಿ ಸಂಸದರು ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಿದರು. ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ಎಎಪಿ ಸಂಸದರು ‘ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ’ ಎಂದು ಆರೋಪಿಸಿದರು.

‘ಇ.ಡಿ ಸಿಬಿಐ ಸಂಸ್ಥೆಗಳ ದುರ್ಬಳಕೆ ನಿಲ್ಲಿಸಿ’ ‘ಕೇಜ್ರಿವಾಲ್‌ ಅವರನ್ನು ಬಂಧಮುಕ್ತಗೊಳಿಸಿ’ ‘ಸರ್ವಾಧಿಕಾರ ನಡೆಯಲ್ಲ’– ಮುಂತಾದ ಬರಹಗಳನ್ನೊಳಗೊಂಡ ಭಿತ್ತಿಪತ್ರಗಳನ್ನು ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT