ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಗೆ ಮಾರಕ ಯೋಜನೆ ಬೇಡ: ಬದರೀನಾಥ ಪ್ರಧಾನ ಅರ್ಚಕ 

ಜೋಶಿಮಠದಲ್ಲಿ ಎನ್‌ಟಿಪಿಸಿ ಸೇರಿ ಪರಿಸರಕ್ಕೆ ಹಾನಿಮಾಡುವ ಎಲ್ಲ ಯೋಜನೆಗಳ ಸ್ಥಿತಕ್ಕೆ ಆಗ್ರಹ
Last Updated 15 ಜನವರಿ 2023, 13:14 IST
ಅಕ್ಷರ ಗಾತ್ರ

ಕಣ್ಣೂರು(ಕೇರಳ)(ಪಿಟಿಐ): ಹಿಮಾಲಯ ಪರ್ವತಶ್ರೇಣಿಯ ಉತ್ತರಾಖಂಡದ ಜೋಶಿಮಠದ ಮೇಲೆ ಪರಿಣಾಮ ಬೀರುವ ಕಾಮಗಾರಿಗಳನ್ನು ನಿಲ್ಲಿಸುವಂತೆ ಬದರೀನಾಥ ದೇವಾಲಯದ ಪ್ರಧಾನ ಅರ್ಚಕ ಈಶ್ವರ ಪ್ರಸಾದ್‌ ನಂಬೂದಿರಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಿತಿಮೀರಿದ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಪಟ್ಟಣದ ನೂರಾರು ಮನೆಗಳು ಮತ್ತು ಕಟ್ಟಡಗಳಲ್ಲಿ ದಿನೇ ದಿನೇ ಬಿರುಕುಗಳು ಹೆಚ್ಚುತ್ತಿವೆ. ಪ್ರಮುಖ ಭೂಪ್ರದೇಶವೇ ಮುಳುಗುವ ಅಪಾಯದಲ್ಲಿದ್ದು, ಜೋಶಿಮಠದ ಭೂಕುಸಿತಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಬೆಟ್ಟದ ಮೇಲಿನ ಪಟ್ಟಣಗಳು ಮತ್ತು ಪ್ರಕೃತಿಗೆ ಹಾನಿ ಮಾಡುವಂತಹ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ಉತ್ತರಾಖಂಡ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ಜೋಶಿಮಠದಲ್ಲಿ ಬೆಳವಣಿಗೆಗಳು ಅತ್ಯಂತ ಕಳವಳಕಾರಿ ವಿಷಯ. ಭೂಮಿಯನ್ನು ಪಾರಿಸಾರಿಕವಾಗಿ ದುರ್ಬಲಗೊಳಿಸುವ ಮತ್ತು ಜನರಿಗೆ ಸಮಸ್ಯೆ ಸೃಷ್ಟಿಸುವ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಭೂಮಿಯನ್ನು ತಾಯಿ ಪೂಜಿಸುತ್ತೇವೆ. ಹಿಮಾಲಯ ಪ್ರದೇಶವು ಸೂಕ್ಷ್ಮ ವಲಯ. ಈ ಪವಿತ್ರ ಭೂಮಿಯನ್ನು ನಾವು ನಾಶಪಡಿಸಬಾರದು, ರಕ್ಷಿಸಬೇಕು’ ಎಂದು ನಂಬೂದಿರಿ ಹೇಳಿದ್ದಾರೆ.

‘ಬಹುತೇಕ ಯೋಜನೆಗಳನ್ನು ಹೆಚ್ಚಾಗಿ ಲಾಭ ಗಳಿಸುವ ಪಟ್ಟಭದ್ರ ಹಿಸಕ್ತಿಯೊಂದಿಗೆ ನಡೆಸಲಾಗುತ್ತದೆ. ಅಂತಹ ಯೋಜನೆಗಳಿಗಿಂತ ಜನರ ಜೀವನ ಮತ್ತು ಯೋಗಕ್ಷೇಮ ಹೆಚ್ಚು ಮುಖ್ಯ. ಸಾಮಾನ್ಯ ಜನರನ್ನು ರಕ್ಷಿಸುವ ಮೂಲಕ ಅಭಿವೃದ್ಧಿ ಸಾಧಿಸಬೇಕು. ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ (ಎನ್‌ಟಿಪಿಸಿ) ಯೋಜನೆ ಮಾತ್ರವಲ್ಲ, ಪರಿಸರ ಹಾನಿ ಮಾಡುವ ಎಲ್ಲ ಯೋಜನೆಗಳನ್ನು ನಿಲ್ಲಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಧರ್ಮದ ಪರಿಕಲ್ಪನೆ ಯಾರಿಗೂ ಹಾನಿ ಮಾಡಬಾರದೆನ್ನುವುದು. ಪರಿಸರ ಸೂಕ್ಷ್ಮ ಬೆಟ್ಟಗಳಲ್ಲಿ ರಸ್ತೆಗಳ ನಿರ್ಮಾಣವನ್ನು ಪ್ರಕೃತಿಗೆ ಹಾನಿ ಮಾಡದೆ ಕೈಗೊಳ್ಳಬೇಕು. ಈ ದಿನಮಾನಗಳಲ್ಲಿ ಪರಿಸರ ಸ್ನೇಹಿ ಅಭಿವೃದ್ಧಿ ಯೋಜನೆಗಳಿಗೆ ಆಯ್ಕೆಗಳಿವೆ. ನಾವು ಪಾಶ್ಚಾತ್ಯ ದೇಶಗಳ ಮಾದರಿ ಅನುಸರಿಸಬಹುದು. ಜನರು ತಮ್ಮ ಹಳ್ಳಿಗಳು ಮತ್ತು ಜೀವನೋಪಾಯ ಮಾರ್ಗ ಕಳೆದುಕೊಂಡರೆ ಅಂತಹ ಯೋಜನೆಗಳನ್ನು ಜಾರಿಗೊಳಿಸುವುದಾದರೂ ಏಕೆ’ ಎಂದು ಅವರು ಪ್ರಶ್ನಿಸಿದರು.

ಮಾಹಿತಿ ಬಹಿರಂಗಪಡಿಸದಂತೆ ನಿರ್ದೇಶನ:

ಜೋಶಿಮಠದ ಭೂಕುಸಿತ ಸಂಬಂಧ ಯಾವುದೇ ಮಾಹಿತಿಗಳನ್ನು ಪೂರ್ವಾನುಮತಿ ಇಲ್ಲದೇ ಮಾಧ್ಯಮಗಳು ಅಥವಾ ಸಾಮಾಜಿಕ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಬಾರದು. ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು ಎಂದು ಇಸ್ರೊ ಮತ್ತು ವಿವಿಧ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಮತ್ತು ರಾಜ್ಯ ಸರ್ಕಾರ ನಿರ್ದೇಶನ ನೀಡಿವೆ.

ಜೋಶಿಮಠದಲ್ಲಿ ಕೇವಲ 12 ದಿನಗಳಲ್ಲಿ ಸುಮಾರು 5.4 ಸೆಂ.ಮೀ. ಭೂಮಿ ಕುಸಿದಿರುವುದನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ಕಾರ್ಟೋಸ್ಯಾಟ್‌–ಎಸ್‌2 ಉಪಗ್ರಹ ಸೆರೆಹಿಡಿದ ಚಿತ್ರಗಳ ಅಧ್ಯಯನ ನಡೆಸಿ, ಖಚಿತಪಡಿಸಿದ್ದರು. ಇಸ್ರೊದ ಈ ಮಾಹಿತಿ ಹೊರಬಿದ್ದ ನಂತರ ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.

ಹಿಂದೂ ಮತ್ತು ಸಿಖ್ ಸಮುದಾಯದ ಪ್ರಮುಖ ದೇವಾಲಯಗಳಿಗೆ ಜೋಶಿಮಠವು ಹೆಬ್ಬಾಗಿಲು ಎನಿಸಿದೆ. ಈ ಪಟ್ಟಣದ ಹಿಮಾಲಯದ ಕೆಲವು ಶಿಖರಗಳು ಚಾರಣಿಗರನ್ನು ಕೈಬೀಸಿ ಕರೆಯುತ್ತದೆ. 1,830 ಮೀಟರ್ ಎತ್ತರದಲ್ಲಿರುವ ಜೋಶಿಮಠದ ಜನಸಂಖ್ಯೆ ಸುಮಾರು 17 ಸಾವಿರ.

‘ಸುಪ್ರೀಂ’ ಮಧ್ಯಪ್ರವೇಶ ಕೋರಿದ ಅರ್ಜಿ ಇಂದು ವಿಚಾರಣೆ

ನವದೆಹಲಿ(ಪಿಟಿಐ): ಜೋಶಿಮಠದ ಭೂಕುಸಿತವನ್ನು ‘ರಾಷ್ಟ್ರೀಯ ವಿಪತ್ತು’ ಆಗಿ ಘೋಷಿಸಲು ನ್ಯಾಯಾಂಗದ ಮಧ್ಯಪ್ರವೇಶ ಕೋರಿರುವ ಮೇಲ್ಮನವಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ.

ಸ್ವಾಮಿ ಅವಿಮುಕ್ತೇಶ್ವರನಂದ್ ಸರಸ್ವತಿ ಅವರು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು ಕಳೆದ ಮಂಗಳವಾರ ನಿರಾಕರಿಸಿತ್ತು.

‘ಇಂತಹ ಪರಿಸ್ಥಿತಿ ನಿಭಾಯಿಸಲು ಚುನಾಯಿತ ಸರ್ಕಾರಗಳು ಇವೆ. ಎಲ್ಲಾ ಪ್ರಮುಖ ವಿಷಯಗಳನ್ನು ನಮ್ಮ ಬಳಿಗೆ ತರಬಾರದು’ ಎಂದು ಅರ್ಜಿದಾರರ ಪರ ಹಾಜರಿದ್ದ ಪರಮೇಶ್ವರ್‌ ನಾಥ್‌ ಮಿಶ್ರಾ ಅವರಿಗೆ ಸೂಚಿಸಿತ್ತು.

ಈ ಅರ್ಜಿ ವಿಚಾರಣೆಯನ್ನು ಪೀಠವು ಜ.16 ರಂದು ವಿಚಾರಣೆಗೆ ಪಟ್ಟಿ ಮಾಡಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪಾರ್ದೀವಾಲಾ ಅವರಿರುವ ತ್ರಿಸದಸ್ಯ ಪೀಠ ಈ ಅರ್ಜಿ ವಿಚಾರಣೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT