ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಚಿವ ಎಚ್‌.ಏಕಾಂತಯ್ಯ ವಿರುದ್ಧ ಬಸವಪ್ರಭು ಸ್ವಾಮೀಜಿ ಕಿಡಿ

ದುರ್ಬಳಕೆಯಾಗಿಲ್ಲ ಬಸವ ಪ್ರತಿಮೆ ಅನುದಾನ
Published 15 ಡಿಸೆಂಬರ್ 2023, 15:27 IST
Last Updated 15 ಡಿಸೆಂಬರ್ 2023, 15:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದಲ್ಲಿ ನಿರ್ಮಿಸುತ್ತಿರುವ ಬಸವ ಪ್ರತಿಮೆಗೆ ಸರ್ಕಾರ ನೀಡಿದ ಅನುದಾನ ದುರ್ಬಳಕೆಯಾಗಿಲ್ಲ. ಈ ಸಂಬಂಧ ಹರಿದಾಡುತ್ತಿರುವ ವದಂತಿಗಳಿಗೆ ಭಕ್ತರು ಕಿವಿಗೊಡುವ ಅಗತ್ಯವಿಲ್ಲ ಎಂದು ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ತಿಳಿಸಿದರು.

‘ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಈವರೆಗೆ ₹ 35 ಕೋಟಿ ಅನುದಾನ ನೀಡಿದೆ. ಇದರಲ್ಲಿ ₹ 25 ಕೋಟಿ ವೆಚ್ಚವಾಗಿದ್ದು, ಇನ್ನೂ ₹ 10 ಕೋಟಿ ಖಾತೆಯಲ್ಲಿದೆ. ವೆಚ್ಚಕ್ಕೆ ಬಿಲ್‌ಗಳಿದ್ದು, ಲೆಕ್ಕಪತ್ರ ಪಾರದರ್ಶಕವಾಗಿದೆ. ಜಿಲ್ಲಾಡಳಿತ ರಚಿಸಿದ ಪರಿಶೀಲನಾ ಸಮಿತಿಗೆ ಸಂಪೂರ್ಣ ಮಾಹಿತಿ ನೀಡಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಐತಿಹಾಸಿಕ ಕಲ್ಲಿನಕೋಟೆ ಇದ್ದರೂ ಪ್ರವಾಸಿಗರನ್ನು ಆಕರ್ಷಿಸಲು ಚಿತ್ರದುರ್ಗಕ್ಕೆ ಸಾಧ್ಯವಾಗಿಲ್ಲ. ಮಠದ ಭಕ್ತರು ಹಾಗೂ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಬೃಹತ್‌ ಬಸವ ಪ್ರತಿಮೆ ನಿರ್ಮಾಣಕ್ಕೆ ಮಠ ನಿರ್ಧಾರ ಕೈಗೊಂಡಿತ್ತು. ಹತ್ತು ವರ್ಷಗಳಿಂದ ಈ ಪ್ರಯತ್ನ ನಡೆಯುತ್ತಿದ್ದು, ಆರಂಭದಲ್ಲಿ ಕಲ್ಲಿನ ಪ್ರತಿಮೆಗೆ ಒಲವು ತೋರಲಾಗಿತ್ತು. ತಜ್ಞರ ಸಲಹೆ ಮೇರೆಗೆ ಕಂಚಿನ ಪ್ರತಿಮೆ ನಿರ್ಮಿಸಲಾಗುತ್ತಿದೆ’ ಎಂದರು.

‘₹ 285 ಕೋಟಿ ವೆಚ್ಚದ ಈ ಯೋಜನೆಗೆ ಸರ್ಕಾರ ಹಾಗೂ ಮಠದ ಭಕ್ತರು ಅನುದಾನ ನೀಡಿದ್ದಾರೆ. ಪ್ರತಿಮೆಯ ಅಚ್ಚು ಸಿದ್ಧವಾಗುತ್ತಿದ್ದು, ತಳಪಾಯದ ಸಿವಿಲ್‌ ಕಾಮಗಾರಿ ಪ್ರಗತಿಯಲ್ಲಿದೆ. ಕಾರಣಾಂತರಗಳಿಂದ ಒಂದು ವರ್ಷದಿಂದ ಕಾಮಗಾರಿ ನನಗುದಿಗೆ ಬಿದ್ದಿದೆ. ಶಿವಮೂರ್ತಿ ಮುರುಘಾ ಶರಣರ ಕನಸಿನ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮಠದ ಏಳಿಗೆ ಸಹಿಸದ ಮಾಜಿ ಸಚಿವ ಎಚ್‌.ಏಕಾಂತಯ್ಯ ಅನಗತ್ಯವಾಗಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಪ್ರತಿಮೆಗೆ ಮೀಸಲಿಟ್ಟ ಹಣ ದುರುಪಯೋಗವಾಗಿದೆ ಎಂಬುದು ಶುದ್ಧ ಸುಳ್ಳು. ಪೀಠಾಧ್ಯಕ್ಷರಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದಾರೆ. ಮಠದ ವಿರುದ್ಧ ದ್ವೇಷಸಾಧಿಸುವುದನ್ನು ಇನ್ನಾದರೂ ಬಿಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸವ ಪ್ರತಿಮೆಗೆ ಸರ್ಕಾರ ನೀಡಿದ ಅನುದಾನದ ಸದ್ಬಳಕೆಗೆ ಲೆಕ್ಕವಿದೆ. ಭಕ್ತರು ನೀಡಿದ ದೇಣಿಗೆಯ ಮಾಹಿತಿಯನ್ನೂ ಪರಿಶೀಲನಾ ಸಮಿತಿಯ ಮುಂದೆ ಇಡಲಾಗುವುದು.
- ಬಸವಪ್ರಭು ಸ್ವಾಮೀಜಿ, ಮುರುಘಾ ಮಠದ ಉಸ್ತುವಾರಿ

‘ಅನುದಾನ ತಡೆಹಿಡಿಯುವ ಷಡ್ಯಂತ್ರ’

ಮುರುಘಾ ಮಠದ ಬಸವ ಪ್ರತಿಮೆಗೆ ಸರ್ಕಾರ ಘೋಷಣೆ ಮಾಡಿದ ಅನುದಾನವನ್ನು ತಡೆಹಿಡಿಯುವ ಹಾಗೂ ಹಿಂಪಡೆಯುವಂತೆ ಒತ್ತಡ ಹೇರುವ ಷಡ್ಯಂತ್ರವನ್ನು ಕೆಲವರು ರೂಪಿಸಿದ್ದರು. ಇದರಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ ಎಂದು ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಹುಲಿಕುಂಟೆ ಆರೋಪಿಸಿದರು.

‘ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ್‌ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ಅನೇಕರು ಮಠವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಪ್ರತಿಮೆಗೆ ಸಂಬಂಧಿಸಿದ ದಾಖಲೆಗಳನ್ನು ಅನಧಿಕೃತವಾಗಿ ಪಡೆದು ಅಪಪ್ರಚಾರ ಮಾಡುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಅಧಿಕೃತ ಮಾಹಿತಿಯನ್ನು ಯಾರೊಬ್ಬರೂ ಪಡೆದಿಲ್ಲ’ ಎಂದು ಹೇಳಿದರು.

‘ಪಾರದರ್ಶಕ ಕಾಯ್ದೆ ಅನ್ವಯವಾಗದು’

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಪಿಟಿಟಿ) ಕಾಯ್ದೆಯ ವ್ಯಾಪ್ತಿಗೆ ಮಠಗಳು ಒಳಪಡುವುದಿಲ್ಲ. ಸರ್ಕಾರ ನೀಡಿದ ಅನುದಾನಕ್ಕೆ ಬಳಕೆ ಪ್ರಮಾಣ ಪತ್ರ ಸಲ್ಲಿಸಲು ಮಾತ್ರ ಅವಕಾಶವಿದೆ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷರಾಗಿದ್ದ ಕೆ.ಸಿ.ನಾಗರಾಜ್‌ ತಿಳಿಸಿದರು.

‘ಸರ್ಕಾರದಿಂದ ಪಡೆದ ಅನುದಾನಕ್ಕೆ ಬಳಕೆ ಪ್ರಮಾಣ ಪತ್ರ ನೀಡಲು ಮಠ ಸಿದ್ಧವಿದೆ. ಅನುದಾನದ ವೆಚ್ಚಕ್ಕೆ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಅನುದಾನ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧರಿದ್ದೇವೆ. ಈ ಬಗ್ಗೆ ಮಠಕ್ಕೆ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ. ಅಧಿಕಾರಿಗಳ ತಂಡ ಕೂಡ ಭೇಟಿ ನೀಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT