ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ ಮಗುಚಿದ್ದು, 9 ಮೀನುಗಾರರು ಮೃತಪಟ್ಟಿರುವ ಆತಂಕ ಎದುರಾಗಿದೆ.
ಮೀನುಗಾರಿಕೆ ಸಲುವಾಗಿ ಪಶ್ಚಿಮ ಬಂಗಾಳದ ಸುಂದರಬನ್ಸ್‌ನಿಂದ ಬುಧವಾರ ತೆರಳಿದ್ದ ಬೋಟ್‌ನಲ್ಲಿ 17 ಮಂದಿ ಇದ್ದರು ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸುರಜಿತ್ ಬಾಗ್ ತಿಳಿಸಿದ್ದಾರೆ.
ಬಘೆರ್ ಚಾರ್ ದ್ವೀಪದ ಬಳಿ ಚಂಡಮಾರುತ ಅಪ್ಪಳಿಸಿದೆ. ಆ ವೇಳೆ ಎಂಟು ಮಂದಿ ಬೋಟ್‌ನ ಡೆಕ್‌ನಲ್ಲಿದ್ದರು. ಉಳಿದವರು ಕ್ಯಾಬಿನ್‌ನಲ್ಲಿ ಮಲಗಿದ್ದರು ಎಂದು ಹೇಳಿದ್ದಾರೆ.
'ಎತ್ತರದ ಅಲೆಗಳು ಅಪ್ಪಳಿಸಿದ್ದರಿಂದ ಬೋಟ್, ಮಗುಚಿದೆ. ಡೆಕ್‌ನಲ್ಲಿದ್ದ ಎಂಟು ಮಂದಿಯನ್ನು ಮತ್ತೊಂದು ಬೋಟ್ ಮೂಲಕ ರಕ್ಷಿಸಲಾಗಿದೆ. ವ್ಯಾಪಕ ಶೋಧದ ನಂತರವೂ, ಮಲಗಿದ್ದ 9 ಮೀನುಗಾರರು ಪತ್ತೆಯಾಗಿಲ್ಲ. ಅವರೆಲ್ಲ ಮೃತಪಟ್ಟಿರುವ ಆತಂಕ ಎದುರಾಗಿದೆ' ಎಂದಿದ್ದಾರೆ.
ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಸುಂದರಬನ್ಸ್, ಮ್ಯಾಂಗ್ರೋವ್ ಅರಣ್ಯಕ್ಕೆ ಹೆಸರುವಾಸಿಯಾಗಿದೆ. ವರ್ಷವಿಡೀ ಮೀನುಗಾರಿಕೆ ನಡೆಸಲು ಸಾವಿರಾರು ಮೀನುಗಾರರಿಗೆ ನೆಲೆಯೂ ಆಗಿದೆ. ಆದರೆ, ಮಾನ್ಸೂನ್ ಋತುವಿನಿಂದಾಗಿ ಕರಾವಳಿಯಲ್ಲಿ ಪ್ರತಿಕೂಲ ವಾತಾವರಣವಿದ್ದು, ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ, ಸಮುದ್ರಯಾನ ಸವಾಲಾಗಿದೆ.