ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶವನ್ನು ಒಗ್ಗೂಡಿಸುವುದೇ ನೈಜ ದೇಶಭಕ್ತಿ: ರಾಹುಲ್‌

Published 18 ಫೆಬ್ರುವರಿ 2024, 0:30 IST
Last Updated 18 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ವಾರಾಣಸಿ (ಉತ್ತರ ಪ್ರದೇಶ): ‘ದೇಶದಲ್ಲಿ ಎರಡು ಭಾರತಗಳಿವೆ. ಅದರಲ್ಲಿ ಒಂದು ಶ್ರೀಮಂತರದ್ದಾಗಿದ್ದರೆ, ಇನ್ನೊಂದು ಬಡವರದ್ದಾಗಿದೆ’ ಎಂದು ಹೇಳಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ದೇಶವನ್ನು ಒಗ್ಗೂಡಿಸುವುದೇ ನಿಜವಾದ ದೇಶಭಕ್ತಿಯಾಗಿದೆ’ ಎಂದರು.

‌ಉತ್ತರ ಪ್ರದೇಶದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ಯ ಎರಡನೇ ದಿನವಾದ ಶನಿವಾರ ಮಾತನಾಡಿದ ಅವರು, ‘ಭಾರತವು ಪ್ರೀತಿ ಹಂಚುವ ದೇಶವೇ ಹೊರತು, ದ್ವೇಷ ಹರಡುವ ದೇಶವಲ್ಲ’ ಎಂದು ಹೇಳಿದರು. 

ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಜಯ್‌ ರಾಯ್‌ ಮತ್ತು ಇತರ ಕಾಂಗ್ರೆಸ್‌ ನಾಯಕರ ಜತೆಗೆ ತೆರೆದ ಜೀಪಿನಲ್ಲಿ ಇಲ್ಲಿನ ಜನನಿಬಿಡ ಗುಡೌಲಿಯಾದಲ್ಲಿ ಯಾತ್ರೆಯಲ್ಲಿ ಅವರು ಸಾಗಿದರು. ಇದೇ ವೇಳೆ ಅವರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು.

‘ಸಹೋದರರ ನಡುವಿನ ಸಂಘರ್ಷದಿಂದ ದೇಶ ದುರ್ಬಲವಾಗಿದೆ’ ಎಂದ ಅವರು, ‘ದೇಶವನ್ನು ಒಗ್ಗೂಡಿಸುವುದೇ ನಿಜವಾದ ದೇಶಭಕ್ತಿಯಾಗಿದೆ’ ಎಂದು ಪುನರುಚ್ಚರಿಸಿದರು.

‘ನಾನು ಗಂಗಾ ನದಿಯಲ್ಲಿ ತಲೆಬಾಗಿ ಮಿಂದೆದ್ದು ಬಂದಿದ್ದೇನೆ. ಈ ಯಾತ್ರೆಯಲ್ಲಿ ಅವರು ತಮ್ಮ ಸಹೋದರರನ್ನು ಭೇಟಿಯಾಗಲು ಬಂದಿದ್ದಾರೆ ಎಂದು ಎಲ್ಲರೂ ಭಾವಿಸಬೇಕು’ ಎಂದು ರಾಹುಲ್‌ ಗಾಂಧಿ ಹೇಳಿದರು.

ಮಾಧ್ಯಮಗಳ ವಿರುದ್ಧ ವಾಗ್ದಾಳಿ:

ದೇಶದ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಮಾಧ್ಯಮಗಳು ಸರಿಯಾಗಿ ಬಿತ್ತರಿಸುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರನ್ನು ಮಾಧ್ಯಮಗಳು ದಿನದ 24 ಗಂಟೆಯೂ ತೋರಿಸುತ್ತವೆ. ಐಶ್ವರ್ಯ ರೈ ಅವರನ್ನೂ ತೋರಿಸುತ್ತವೆ. ಆದರೆ ನಿಜವಾದ ಸಮಸ್ಯೆಗಳನ್ನು ಬಿತ್ತರಿಸುವುದಿಲ್ಲ ಎಂದರು.

ಯಾತ್ರೆ ವೇಳೆ ಜನರ ಗುಂಪಿನಲ್ಲಿದ್ದ ರಾಹುಲ್ ಎಂಬ ಯುವಕನನ್ನು ಕರೆದ ಅವರು, ಶಿಕ್ಷಣಕ್ಕಾಗಿ ಎಷ್ಟು ಖರ್ಚಾಗಿದೆ ಎಂಬುದರ ಮಾಹಿತಿ ಪಡೆದರು. ಅಲ್ಲದೆ ನಿರುದ್ಯೋಗದ ಕುರಿತೂ ಆ ಯುವಕನನ್ನು ಕೇಳಿದರು. ಬಳಿಕ ಅವರು ನಿರುದ್ಯೋಗ ಮತ್ತು ಹಣದುಬ್ಬರವು ದೇಶದ ಎರಡು ಪ್ರಮುಖ ಸಮಸ್ಯೆಗಳಾಗಿವೆ ಎಂದರು.

ಅಪ್ನಾದಳ ನಾಯಕಿ ಪಲ್ಲವಿ ಪಟೇಲ್‌, ಸಮಾಜವಾದಿ ಪಕ್ಷದ ಕೆಲ ಶಾಸಕರೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರೆಯು ಬಿಹಾರದಿಂದ ಚಂದೌಲಿ ಮೂಲಕ ಶುಕ್ರವಾರ ಸಂಜೆ ಉತ್ತರ ಪ್ರದೇಶ ಪ್ರವೇಶಿಸಿತು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ರಾಯ್‌ ಬರೇಲಿಯಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ದೇವಾಲಯ ಭೇಟಿ, ರೋಡ್‌ ಶೋ

ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪೂಜೆ ಸಲ್ಲಿಸಿದರು.

ಬಳಿಕ ರಾಹುಲ್‌ ಅವರು ಪಟ್ಟಣದಲ್ಲಿ 12 ಕಿ.ಮೀ ರೋಡ್‌ ಶೋ ನಡೆಸಿದರು. ಗೊಡೌಲಿಯಾ, ಮೈದಾಗಿನ್‌, ಜ್ಞಾನವಾಪಿ, ಗೋಲ್ಗಡ್ಡಾ ಮೂಲಕ ಸಾಗಿದ ಯಾತ್ರೆ ಮಾಂಡುವಾಡಿಹ್‌ನಲ್ಲಿ ಕೊನೆಗೊಂಡಿತು. ಮುಸ್ಲಿಂ ಸಮುದಾಯದವರ ಪ್ರಾಬಲ್ಯವಿರುವ ಹಲವು ಪ್ರದೇಶಗಳ ಮೂಲಕ ಯಾತ್ರೆ ಸಾಗಿತು.

ರಸ್ತೆ ಸ್ವಚ್ಛಗೊಳಿಸಿದ ಬಿಜೆಪಿ ಕಾರ್ಯಕರ್ತರು 

ಲಖನೌ: ವಾರಾಣಸಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ ಸಾಗಿದ ಬೆನ್ನಲ್ಲೇ ಆ ರಸ್ತೆಗಳನ್ನು ಬಿಜೆಪಿ ಕಾರ್ಯಕರ್ತರು ಗಂಗಾನದಿಯ ಪವಿತ್ರ ನೀರಿನಿಂದ ಸ್ವಚ್ಛಗೊಳಿಸಿದರು.

ಗಂಗಾಜಲ ತುಂಬಿದ್ದ ಬಕೆಟ್‌ಗಳನ್ನು ಹೊತ್ತು ತಂದ ಕೇಸರಿ ಪಕ್ಷದ ನೂರಾರು ಕಾರ್ಯಕರ್ತರು, ರಾಹುಲ್‌ ಯಾತ್ರೆಯ ಬಳಿಕ ಆ ಮಾರ್ಗವನ್ನು ತೊಳೆದರು. 

‘ರಾಹುಲ್‌ ಅವರಿಗೆ ಸನಾತನ ಧರ್ಮದಲ್ಲಿ ನಂಬಿಕೆ ಇಲ್ಲ ಮತ್ತು ಅವರು ಮಾಂಸಾಹಾರಿ. ಅವರಿಂದ ಈ ಮಾರ್ಗ ಅಶುದ್ಧವಾಗಿದೆ’ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದರು. ಈ ವೇಳೆ ಕೇಸರಿ ಪಕ್ಷದ ಕಾರ್ಯಕರ್ತರು
ಜೈ ಶ್ರೀರಾಮ್‌ ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT