ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಪರಿಹಾರ: ಕೇಂದ್ರದ ಕಿವಿ ಹಿಂಡಿದ ಸುಪ್ರೀಂ

Last Updated 12 ಜನವರಿ 2023, 5:06 IST
ಅಕ್ಷರ ಗಾತ್ರ

ನವದೆಹಲಿ: 1984 ರ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಕಿವಿ ಹಿಂಡಿದೆ.

ಅನಿಲ ದುರಂತಕ್ಕೆ ಕಾರಣರಾದ ಯೂನಿಯನ್ ಕಾರ್ಬೈಡ್ ಕಂಪನಿಯಿಂದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹೆಚ್ಚುವರಿಯಾಗಿ ₹7,844 ಕೋಟಿ ಹೆಚ್ಚುವರಿ ಪರಿಹಾರವನ್ನು ಕೊಡಿಸಬೇಕು ಎಂದು ಸಲ್ಲಿಕೆಯಾಗಿದ್ದ ಕ್ಯುರೇಟಿವ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಬುದ್ಧಿವಾದ ಹೇಳಿದೆ.

‘ಬೇರೊಬ್ಬರ ಜೇಬಿನಿಂದ ಹಣವನ್ನು ತೆಗೆದು ಕೊಡುವುದು ತುಂಬಾ ಸುಲಭ. ಮೊದಲು ನಿಮ್ಮ ಜೇಬಿನಲ್ಲಿಯ ಹಣವನ್ನು ತೆಗೆಯಿರಿ. ನಂತರ ಇನ್ನೊಬ್ಬರ ಜೇಬಿನ ಹಣಕ್ಕೆ ಕೈ ಹಾಕಿ’ ಎಂದು ಹೇಳಿದೆ.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಈ ರೀತಿ ಹೇಳಿತು.

‘1989 ರಲ್ಲಿನ ಒಪ್ಪಂದದ ಭಾಗವಾಗಿ ಯೂನಿಯನ್ ಕಾರ್ಬೈಡ್ ಕಂಪನಿಯಿಂದ ಪಡೆದ ₹715 ಕೋಟಿಗಿಂತ ಹೆಚ್ಚುವರಿ ₹7,844 ಕೋಟಿ ಪರಿಹಾರ ರೂಪದ ಹಣ ನೀಡಲು ಯೂನಿಯನ್ ಕಾರ್ಬೈಡ್ ಕಂಪನಿಯ ಉತ್ತರಾಧಿಕಾರಿ ಸಂಸ್ಥೆಗಳಿಗೆ ಆದೇಶಿಸಬೇಕು’ ಎಂದು ಕೇಂದ್ರ ಸುಪ್ರೀಂಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದೆ.

‘ಈ ಕ್ಯುರೇಟಿವ್ ಅರ್ಜಿಯ ಬಗ್ಗೆ ಆದೇಶ ನೀಡಲು ನಾವು ಹೊಳೆಯುವ ರಕ್ಷಾಕವಚ ತೊಟ್ಟಿರುವ ಸರದಾರನಂತೆ ವರ್ತಿಸಲು ಸಾಧ್ಯವಿಲ್ಲ. ಕ್ಯುರೇಟಿವ್ ನ್ಯಾಯವ್ಯಾಪ್ತಿಯನ್ನು ನೋಡಿಕೊಂಡು ನಾವು ಆದೇಶ ನೀಡಬೇಕಾಗುತ್ತದೆ’ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನ್ಯಾಯಮೂರ್ತಿಗಳು ತಿಳಿಸಿದರು.

ನ್ಯಾಯಮೂರ್ತಿಗಳಾದ ಸಂಜೀವ್ ಖ‌ನ್ನಾ, ಅಭಯ್ ಓಕಾ, ವಿಕ್ರಮ್‌ನಾಥ್, ಜೆಕೆ ಮಹೇಶ್ವರಿ ಪೀಠದಲ್ಲಿದ್ದರು.

1984 ರಲ್ಲಿ ಭೋಪಾಲ್‌ನಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ವಿಷಾನಿಲ ದುರಂತದಿಂದ 5000 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. 44 ಸಾವಿರ ಜನ ಸಂತ್ರಸ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT