ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಹಾಸ ಮೂಡಿದೆ, ಮಕ್ಕಳನ್ನು ಅಪ್ಪಿಕೊಂಡಿದ್ದೇನೆ: ಬಿಲ್ಕಿಸ್ ಬಾನು

Published 8 ಜನವರಿ 2024, 20:39 IST
Last Updated 8 ಜನವರಿ 2024, 20:39 IST
ಅಕ್ಷರ ಗಾತ್ರ

ಅಹಮದಾಬಾದ್: ‘ನನಗೆ ಇಂದು ಹೊಸ ವರ್ಷ. ನಾನು ಸಮಾಧಾನದ ಕಣ್ಣೀರು ಒರೆಸಿಕೊಂಡಿದ್ದೇನೆ. ಒಂದೂವರೆ ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಇದೇ ಮೊದಲ ಬಾರಿಗೆ ನನ್ನ ಮೊಗದಲ್ಲಿ ಮಂದಹಾಸ ಮೂಡಿದೆ. ನನ್ನ ಮಕ್ಕಳನ್ನು ಅಪ್ಪಿಕೊಂಡಿದ್ದೇನೆ’ ಎಂದು ಬಿಲ್ಕಿಸ್ ಬಾನು ಅವರು ತಮ್ಮ ವಕೀಲೆ ಶೋಭಾ ಗುಪ್ತ ಅವರ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲರಿಗೂ ಸಮಾನ ನ್ಯಾಯದ ಭರವಸೆಯನ್ನು ತಮ್ಮಲ್ಲಿ, ತಮ್ಮ ಮಕ್ಕಳಲ್ಲಿ ಹಾಗೂ ಎಲ್ಲ ಮಹಿಳೆಯರಲ್ಲಿ ಮೂಡಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

‘ನಾನು ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ನಾನು ಕಂಡಂತಹ ಪಯಣವನ್ನು ಒಬ್ಬಳೇ ಅನುಭವಿಸಲು ಸಾಧ್ಯವಿಲ್ಲ. ನನ್ನ ಪತಿ ಹಾಗೂ ಮಕ್ಕಳು ನನ್ನ ಜೊತೆ ಇದ್ದರು. ದ್ವೇಷದ ಕಾಲಘಟ್ಟದಲ್ಲಿ ಪ್ರೀತಿಯನ್ನು ನೀಡಿದ ಸ್ನೇಹಿತರು ನನಗಿದ್ದಾರೆ. 20 ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ನನ್ನ ಜೊತೆ ವಕೀಲೆ ಶೋಭಾ ಅವರು ಇದ್ದಾರೆ’ ಎಂದು ಬಿಲ್ಕಿಸ್ ಹೇಳಿದ್ದಾರೆ.

‘ನನ್ನ ಕುಟುಂಬವನ್ನು ನಾಶಮಾಡಿದ್ದ ಹಾಗೂ ನನ್ನ ಅಸ್ತಿತ್ವಕ್ಕೇ ಬೆದರಿಕೆಯಾಗಿದ್ದವರು ಬಿಡುಗಡೆ ಆದಾಗ ನಾನು ಕುಸಿದುಹೋಗಿದ್ದೆ. ನನ್ನಲ್ಲಿನ ಧೈರ್ಯ ಮುಗಿದುಹೋಯಿತು ಅನಿಸಿತ್ತು. ಆದರೆ ದೇಶದ ಸಹಸ್ರಾರು ಮಂದಿ ಜನಸಾಮಾನ್ಯರು, ಮಹಿಳೆಯರು ಮುಂದೆ ಬಂದರು. ಅವರು ನನ್ನ ಜೊತೆ ನಿಂತರು. ಕರ್ನಾಟಕದ 29 ಜಿಲ್ಲೆಗಳಿಂದ ನನ್ನ ಪರವಾಗಿ ಜನ ಅನಿಸಿಕೆ ವ್ಯಕ್ತಪಡಿಸಿದರು’ ಎಂದು ಅವರು ನೆನಪಿಸಿಕೊಂಡಿದ್ದಾರೆ.

‘ನ್ಯಾಯದ ಪರಿಕಲ್ಪನೆಯನ್ನು ನನಗಾಗಿ ಮಾತ್ರವಲ್ಲ, ದೇಶದ ಎಲ್ಲ ಮಹಿಳೆಯರಿಗಾಗಿ ಕಾಪಾಡುವ ಸಲುವಾಗಿ ಹೋರಾಟ ನಡೆಸಲು ಇವರೆಲ್ಲ ನನಗೆ ಮನೋಬಲ ನೀಡಿದರು’ ಎಂದು ಕೂಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT