ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಅಭ್ಯರ್ಥಿಗಳಿಗೆ ‘ಜಾಟ್‌’ ಆಕ್ರೋಶದ ಬಿಸಿ

ಉತ್ತರ ಪ್ರದೇಶದ ಪಶ್ಚಿಮ ಭಾಗ: ಮನೆ ಮನೆ ಪ್ರಚಾರ ಸಂದರ್ಭದಲ್ಲಿ ಮುಖಂಡರ ವಿರುದ್ಧ ಘೋಷಣೆ, ಮುತ್ತಿಗೆ
Last Updated 27 ಜನವರಿ 2022, 19:44 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಪಶ್ಚಿಮ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಅಂದರೆ, ಫೆ. 10ರಂದು ಮತದಾನ ನಡೆಯಲಿದೆ. ಕೇಂದ್ರವು ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಬಿಜೆಪಿ ಜತೆ ಮುನಿಸಿಕೊಂಡಿರುವ ಈ ಭಾಗದ ಪ್ರಭಾವಿ ‘ಜಾಟ್‌’ ಸಮುದಾಯವನ್ನು ಒಲಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಹಾಗಿದ್ದರೂ ಈ ಪ್ರದೇಶದ ಹಲವು ಗ್ರಾಮಗಳಲ್ಲಿ ಬಿಜೆಪಿ ವಿರುದ್ಧ ಮುಖ್ಯವಾಗಿ ರೈತರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು ಮತ್ತು ಮುಖಂಡರ ವಿರುದ್ಧದ ಪ್ರತಿಭಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಅದರ ಮಿತ್ರ ಪಕ್ಷ ರಾಷ್ಟ್ರೀಯ ಲೋಕದಳವು (ಆರ್‌ಎಲ್‌ಡಿ) ಈ ವಿಡಿಯೊಗಳನ್ನು ಪ್ರಕಟಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.

ಮಜಫ್ಫರ್‌ನಗರ ಜಿಲ್ಲೆಯ ಕರೌಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಕ್ರಮ ಸೈನಿ ಅವರು ಕ್ಷೇತ್ರದ ಮುನಾವರ್‌ಪುರ ಗ್ರಾಮಕ್ಕೆ ಕೆಲವು ದಿನಗಳ ಹಿಂದೆ ಪ್ರಚಾರಕ್ಕೆ ಹೋದಾಗ ಪ್ರತಿಭಟನೆ ಆರಂಭಗೊಂಡಿತು. ಮಾತನಾಡಲು ಅವಕಾಶ ಕೊಡಿ ಎಂದು ಸೈನಿ ಅವರು ಗ್ರಾಮಸ್ತರನ್ನು ಕೇಳಿಕೊಂಡರು. ಆದರೆ, ಜನರು ಸೈನಿ ವಿರುದ್ಧ ಘೋಷಣೆ ಕೂಗಿ ವಾಪಸ್‌ ಹೋಗುವಂತೆ ಒತ್ತಾಯಿಸಿದರು. ಗ್ರಾಮಸ್ತರ ಮನವೊಲಿಸಲು ಸೈನಿ ಎಷ್ಟೇ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ, ಅವರು ಹಿಂದಿರುಗಬೇಕಾಯಿತು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರದೇವ್‌ ಸಿಂಗ್‌ ಅವರಿಗೂ ಇಂತಹುದೇ ಅನುಭವ ಆಗಿದೆ. ಕರೌಲಿ ಕ್ಷೇತ್ರದ ವಾಲ್ಮೀಕಿ ಬಸ್ತಿ ಪ್ರದೇಶಕ್ಕೆ ಸಿಂಗ್‌ ಅವರು ಮಂಗಳವಾರ ಹೋದಾಗ ಯುವ ಜನರು ಅವರ ವಿರುದ್ಧ ಘೋಷಣೆ ಕೂಗಿದ್ದರು. ಹಾಥರಸ್‌ ಘಟನೆಯ ವಿರುದ್ಧ ಯುವ ಜನರು ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಥರಸ್‌ನಲ್ಲಿ ದಲಿತ ಸಮುದಾಯದ ಹದಿಹರೆಯದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಲಾಗಿತ್ತು. ಮೃತದೇಹದ ಅಂತ್ಯಕ್ರಿಯೆಯನ್ನು ಮನೆಯವರ ಸಮ್ಮತಿ ಇಲ್ಲದೆಯೇ ಪೊಲೀಸರು ನಡೆಸಿದ್ದರು.

ಸಂಭಲ್‌ ಜಿಲ್ಲೆಯ ಅಸ್ಮೌಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೇಂದ್ರ ಸಿಂಗ್‌ ರಿಂಕು ಅವರು ಕ್ಷೇತ್ರ ವ್ಯಾಪ್ತಿಯ ಶಕರಪುರ ಗ್ರಾಮಕ್ಕೆ ಪ್ರಚಾರಕ್ಕೆ ಹೋಗಿದ್ಧಾಗ ಜನರು ಅವರಿಗೆ ಮುತ್ತಿಗೆ ಹಾಕಿ, ವಾಪಸ್‌ ಕಳುಹಿಸಿದ್ದರು.

ಸಿವಾಲ್ಖಾಸ್‌ ಕ್ಷೇತ್ರದ ಅಭ್ಯರ್ಥಿ ಮನೀಂದರ್‌ ಪಾಲ್‌ ಸಿಂಗ್‌ ಅವರು ಮನೆ ಮನೆ ಪ್ರಚಾರಕ್ಕೆ ಹೋಗಿದ್ದಾಗ ಜನರು ಅವರನ್ನು ಓಡಿಸಿದ್ದರು. ಅವರ ವಾಹನದ ಕಿಟಕಿಯ ಗಾಜುಗಳನ್ನು ಜನರು ಒಡೆದು ಹಾಕಿದ್ದರು. ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರಿಗೆ ಅವರದೇ ಕ್ಷೇತ್ರ ಸಿರಥುವಿನಲ್ಲಿ ಇಂತಹುದೇ ಅನುಭವ ಆಗಿತ್ತು.

ಉತ್ತರ ಪ್ರದೇಶದ ಸಚಿವ ಮತ್ತು ‘ಉಗ್ರ ಹಿಂದುತ್ವವಾದಿ’ ಮುಖಂಡ ಸುರೇಶ್‌ ರಾಣಾ ಅವರಿಗೂ ಅವರ ಕ್ಷೇತ್ರದಲ್ಲಿ ಮತದಾರರ ಆಕ್ರೋಶದ ಬಿಸಿ ಮುಟ್ಟಿದೆ.

‘ಎಸ್‌ಪಿ ಮತ್ತು ಆರ್‌ಎಲ್‌ಡಿ ಈ ಪ್ರತಿಭಟನೆಗಳನ್ನು ಸಂಘಟಿಸುತ್ತಿವೆ. ಇದರ ಹಿಂದೆ ಇರುವುದು ಬೆರಳೆಣಿಕೆಯ ಮಂದಿ ಮಾತ್ರ. ಬಿಜೆಪಿ ಅಭ್ಯರ್ಥಿಗಳ ಆತ್ಮಸ್ಥೈರ್ಯ ಕೆಡಿಸುವ ಯತ್ನ ಇದು. ಅದರಲ್ಲಿ ಅವರು ಯಶಸ್ವಿ ಆಗುವುದಿಲ್ಲ’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಜನರು ಸ್ವಯಂಪ್ರೇರಣೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಎಸ್‌ಪಿ ಅಥವಾ ಆರ್‌ಎಲ್‌ಡಿ ಪ್ರಾಯೋಜಿತ ಅಲ್ಲ ಎಂದು ಎಸ್‌ಪಿಯ ಮುಖಂಡರೊಬ್ಬರು ಹೇಳಿದ್ದಾರೆ. ‘ಜನರು ಬಿಜೆಪಿ ಬಗ್ಗೆ ಆಕ್ರೋಶಗೊಂಡಿದ್ದಾರೆ. ಆ ಪಕ್ಷವು ಏನನ್ನು ಬಿತ್ತಿದೆಯೋ ಅದನ್ನು ಕೊಯ್ಲು ಮಾಡಬೇಕಿದೆ’ ಎಂದು ಎಸ್‌ಪಿಯ ಮುಖಂಡರೊಬ್ಬರು ಹೇಳಿದ್ದಾರೆ.

ಬಿಜೆಪಿ ಮುಖಂಡರನ್ನು ಗ್ರಾಮೀಣ ಭಾಗದ ಜನರು ಹೊಡೆದು ಓಡಿಸುತ್ತಿದ್ದಾರೆ. ಆದರೆ, ಸುದ್ದಿವಾಹಿನಿಗಳು ಮಾತ್ರ ಅವನ್ನು ತೋರಿಸುತ್ತಿಲ್ಲ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಹೇಳಿದ್ದಾರೆ.

ಅಮಿತ್ ಶಾ ಸಭೆಗೆ ಜಾತಿ ಮುಖ್ಯಸ್ಥರ ಗೈರು

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜಕೀಯವಾಗಿ ಮುಖ್ಯವಾದ ಜಾಟ್‌ ಸಮುದಾಯದ ಜಾತಿ ಪಂಚಾಯಿತಿಗಳ ಮುಖ್ಯಸ್ಥರ ಸಭೆಯನ್ನು ದೆಹಲಿಯಲ್ಲಿ ಇತ್ತೀಚೆಗೆ ಕರೆದಿದ್ದರು. ಹಲವು ಪ್ರಮುಖ ಜಾತಿ ಪಂಚಾಯಿತಿಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಿಲ್ಲ.

‘ಬಲಿಯನ್‌ ಖಾಪ್‌’ನ ಹಲವು ಮುಖಂಡರಿಗೆ ಆಹ್ವಾನ ನೀಡಲಾಗಿತ್ತು. ಭಾರತೀಯ ಕಿಸಾನ್‌ ಯೂನಿಯನ್‌ನ ರಾಕೇಶ್‌ ಟಿಕಾಯತ್‌ ಅವರೂ ಈ ಪಂಚಾಯಿತಿಯ ಸದಸ್ಯ. ಆಹ್ವಾನಿತರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಶಾ ಅವರನ್ನು ಭೇಟಿಯಾಗಿದ್ದಾರೆ.

‘ನಮ್ಮ ಪಂಚಾಯಿತಿಯಿಂದ ಯಾರನ್ನು ಆಹ್ವಾನಿಸಲಾಗಿದೆ ಎಂಬುದೇ ಗೊತ್ತಿಲ್ಲ. ಅದಲ್ಲದೆ, ಈ ಸಭೆಯನ್ನು ಏಕೆ ಕರೆಯಲಾಗಿದೆ ಎಂಬುದೂ ಗೊತ್ತಿಲ್ಲ. ಅಮಿತ್‌ ಶಾ ಅವರು ಯಾವ ಭರವಸೆ ಕೊಟ್ಟಿದ್ದಾರೆ ಎಂಬುದೂ ತಿಳಿದಿಲ್ಲ’ ಎಂದು ತೋಮರ್‌ ಖಾಪ್‌ನ ಮುಖಂಡ ಸುರೇಂದ್ರ ಸಿಂಗ್‌ ಹೇಳಿದ್ದಾರೆ.

ಬಲಿಯನ್‌ ಖಾಪ್‌ನ ಮುಖಂಡ ಮತ್ತು ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ನರೇಶ್‌ ಟಿಕಾಯತ್‌ ಅವರು ದೆಹಲಿಯ ಸಭೆಯನ್ನು ಪ್ರಶ್ನಿಸಿದ್ದಾರೆ. ರೈತರ ಪ್ರತಿಭಟನೆಯ ದಿನಗಳಲ್ಲಿ ಜಾಟ್‌ ಸಮುದಾಯದ ರೈತರು ದೆಹಲಿಯ ಬೀದಿಗಳಲ್ಲಿ ಮಲಗಿದ್ದರು. ಆಗ ಶಾ ಎಲ್ಲಿ ಹೋಗಿದ್ದರು ಎಂದು ನರೇಶ್‌ ಟಿಕಾಯತ್‌ ಪ್ರಶ್ನಿಸಿದ್ದಾರೆ.

ಸಭೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಖಿಲ ಭಾರತ ಜಾಟ್‌ ಮಹಾಸಭಾದ ಅಧ್ಯಕ್ಷ ಜಿತೇಂದ್ರ ಚೌಧರಿ ಅವರೂ ಹೇಳಿದ್ದಾರೆ. ‘ಬಿಜೆಪಿಜಾಟ್‌ ಸಮುದಾಯವನ್ನು ವಂಚಿಸಿದೆ’ ಎಂದು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರೋಹಿತ್‌ ಜಾಖಡ್‌ ಹೇಳಿದ್ದಾರೆ.

ಜಾಟ್‌ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವನ್ನು ವಿಧಾನಸಭೆ ಚುನಾವಣೆ ಬಳಿಕ ಪರಿಶೀಲಿಸುವುದಾಗಿ ಶಾ ಅವರು ಸಭೆಯಲ್ಲಿ ಹಾಜರಿದ್ದ ಮುಖಂಡರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT