ರಾಜಸ್ಥಾನ: ‘ನಮ್ಮ ಬಳಿ ಗ್ಯಾರಂಟಿ ಇದೆ’: ರಾಜಕೀಯ ಲಾಭಕ್ಕಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಐ.ಟಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಜನರಿಗೂ ಅರ್ಥವಾಗಿದೆ. ಇಂಥ ಕೆಲಸಗಳಿಗೆ ಜನರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹಲೋತ್ ಅವರು ಭಾನುವಾರ ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಯಂತಿ ಅಂಗವಾಗಿ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಗೌರವ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಮುಂದೆ ಮಾತನಾಡಿದರು. ‘ಬಿಜೆಪಿ ಬಳಿ ಇ.ಡಿ ಇದೆ. ಆದರೆ ನಮ್ಮ ಬಳಿ ಗ್ಯಾರಂಟಿಗಳು ಇದೆ’ ಎಂದರು.
ಧರಣಿ ಕೈಬಿಟ್ಟ ದಿಗ್ವಿಜಯ್: ಮಧ್ಯಪ್ರದೇಶ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿ ಖಜುರಾಹೊ ಪೊಲೀಸ್ ಠಾಣೆ ಎದುರು ಪಕ್ಷದ ರಾಜ್ಯಸಭೆ ಸದಸ್ಯ ದಿಗ್ವಿಜಯ್ ಸಿಂಗ್ ಅವರು ಶನಿವಾರ ಧರಣಿ ಆರಂಭಿಸಿದ್ದರು. ಶನಿವಾರ ಇಡೀ ರಾತ್ರಿ ಪೊಲೀಸ್ ಠಾಣೆ ಎದುರು ಧರಣಿ ಕೂತಿದ್ದ ಅವರು ಭಾನುವಾರ ಧರಣಿ ಅಂತ್ಯಗೊಳಿಸಿದರು.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಮತದಾನದ ದಿನ ರಾಜ್‌ನಗರ್ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಘರ್ಷಣೆ ನಡೆದು ಸಲ್ಮಾನ್ ಖಾನ್ ಎಂಬ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ದಿಗ್ವಿಜಯ್ ಅವರು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ಹಸಿವಿನಿಂದ ಜನರ ಸಾವು, ನಕ್ಸಲ್ ಚಳುವಳಿಗಳು ಮತ್ತು ಎನ್‌ಕೌಂಟರ್‌ಗಳು ಹೆಚ್ಚಿದ್ದವು ಎಂದು ಬಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಭಾನುವಾರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ರಾವ್, ಕೊಲ್ಲಾಪುರದಲ್ಲಿ ಕೃಷ್ಣಾ ನದಿ ಹತ್ತಿರದಲ್ಲಿ ಹರಿಯುತ್ತಿದ್ದರೂ ತಮ್ಮ ಆಳ್ವಿಕೆಯಲ್ಲಿ ಕುಡಿಯುವ ನೀರು ಒದಗಿಸಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ನಾಯಕರು ಮತ ಕೇಳಲು ನಾಚಿಕೆಪಡಬೇಕು. ಕಾಂಗ್ರೆಸ್ ಪಕ್ಷವು ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿಳಂಬ ಮಾಡಿತು ಮತ್ತು ತನ್ನ ಶಾಸಕರನ್ನು ಖರೀದಿಸುವುದರ ಜೊತೆಗೆ ಬಿಆರ್‌ಎಸ್ ಪಕ್ಷ ವಿಭಜಿಸಲು ಪ್ರಯತ್ನಿಸಿತು ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.