ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಕದ್ದಾಲಿಕೆ: ಫಡಣವೀಸ್ ಮನೆಗೆ ತೆರಳಿ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

Last Updated 13 ಮಾರ್ಚ್ 2022, 11:03 IST
ಅಕ್ಷರ ಗಾತ್ರ

ಮುಂಬೈ:ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಮುಂಬೈನ ಬಿಕೆಸಿ ಸೈಬರ್‌ ಪೊಲೀಸ್‌ನ ಹಿರಿಯ ಅಧಿಕಾರಿಗಳ ತಂಡವು ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ನಿವಾಸಕ್ಕೆ ತೆರಳಿತ್ತು.

ಅಧಿಕಾರಿಗಳ ಭೇಟಿ ಹಿನ್ನೆಲೆಯಲ್ಲಿ ನಿವಾಸದ ಬಳಿಕ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಎಸಿಪಿ ನಿತಿನ್‌ ಜಾಧವ್‌ ಮತ್ತು ಇಬ್ಬರು ಇನ್‌ಸ್ಪೆಕ್ಟರ್ ಭೇಟಿ ನೀಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹೇಳಿಕೆ ದಾಖಲಿಸಲು ಹಾಜರಾಗುವಂತೆ ಸೂಚಿಸಿ ಸೈಬರ್‌ ಪೊಲೀಸರು ಈ ಮೊದಲು ಫಡಣವೀಸ್ಅವರಿಗೆನೋಟಿಸ್ ಜಾರಿ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಫಡಣವೀಸ್ ಅವರು, ‘ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ದೂರವಾಣಿ ಕರೆ ಮಾಡಿದ್ದು, ಅಧಿಕಾರಿಗಳೇ ತಮ್ಮ ನಿವಾಸಕ್ಕೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ’ ಎಂದು ಹೇಳಿದ್ದರು.

ಕಾರ್ಯಕರ್ತರ ಆಕ್ರೋಶ: ಫಡಣವೀಸ್ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಕ್ಕೆ ಪಕ್ಷದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದ ವಿವಿಧೆಡೆ ನೋಟಿಸ್‌ನ ಪ್ರತಿ ಸುಟ್ಟುಹಾಕಿದರು.

ಪೊಲೀಸರ ತಂಡ ನಿವಾಸಕ್ಕೆ ತೆರಳಿದ್ದಾಗಲೂ ವಿವಿಧ ಮುಖಂಡರು, ಕಾರ್ಯಕರ್ತರು ಸೇರಿದ್ದರು. ಶಾಸಕ ನಿತೇಶ್‌ ರಾಣೆ, ಪರಿಷತ್‌ ಸದಸ್ಯರಾದ ಪ್ರಸಾದ್‌ ಲಾಡ್‌, ಪ್ರವೀಣ್‌ ಧರೇಕರ್, ಮುಖಂಡ ಕೃಪಾಶಂಕರ್ ಸಿಂಗ್‌ ಸೇರಿ ಹಲವರು ಇದ್ದರು. ಪೊಲೀಸರ ಕ್ರಮ ವಿರೋಧಿಸಿ ಪುಣೆ, ಫಂಡರಾಪುರ್, ನಾಗಪುರ, ಚಂದ್ರಾಪುರ, ಸಾಂಗ್ಲಿಯಲ್ಲಿ ಪ್ರತಿಭಟನೆ ನಡೆದಿದೆ.

ಮಾಜಿ ಸಚಿವ, ಶಾಸಕ ಅಶೀಶ್‌ ಶೆಲಾರ್ ಅವರು, ಹೇಳಿಕೆ ದಾಖಲಿಸಿಕೊಳ್ಳಲಿ. ಆದರೆ, ಸತ್ಯ ಮರೆಮಾಚಲಾಗದು. ಸತ್ಯಕ್ಕೆ ಎಂದು ಸೋಲಿಲ್ಲ. ವಾಸ್ತವವಾಗಿ ಫಡಣವೀಸ್‌ ಅವರೇ ಈ ಪ್ರಕರಣವನ್ನು ಬಯಲುಗೊಳಿಸಿದ್ದರು ಎಂದು ಪ್ರತಿಕ್ರಿಯಿಸಿದರು.

ಆದರೆ, ಮಹಾರಾಷ್ಟ್ರ ಸರ್ಕಾರ ಈ ಪ್ರಕರಣದಲ್ಲಿ ಒತ್ತಡ ತಂತ್ರವನ್ನು ಅನುಸರಿಸುತ್ತಿದೆ. ಸರ್ಕಾರದ ವಿರುದ್ಧವೇ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳಿವೆ. ಹೀಗಾಗಿ, ಅದು ಫಡಣವಿಸ್‌ ಅವರನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಮಾಜಿ ಸಂಸದ ಸಂಜಯ್‌ ಕಾಕಡೆ ಸೇರಿದಂತೆ ಹಲವರ ಫೋನ್‌ ಕರೆಗಳನ್ನು ಐಪಿಎಸ್‌ ಅಧಿಕಾರಿ ರಶ್ಮಿ ಶುಕ್ಲಾ ಅವರು ಕದ್ದಾಲಿಕೆ ಮಾಡಿದ್ದಾರೆ ಎಂದು ಗೃಹ ಸಚಿವ ದಿಲೀಪ್‌ ವಾಲ್ಸೆ ಆರೋಪಿಸಿದ್ದರು.

ಫಡಣವಿಸ್‌ ಅವರಿಗೆ ನೀಡಿದ್ದ ನೋಟಿಸ್‌ನಲ್ಲಿ ಪೊಲೀಸರು, ‘ಹಿಂದೆ ಮುಚ್ಚಿದ ಲಕೋಟೆಯಲ್ಲಿ ಪ್ರಶ್ನೆಗಳನ್ನು ಕಳುಹಿಸಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿಲ್ಲ. ಅಲ್ಲದೆ, ಹಿಂದೆ ಎರಡು ಬಾರಿ ನೀಡಿದ್ದ ನೋಟಿಸ್‌ಗೂ ಪ್ರತಿಕ್ರಿಯಿಸಿಲ್ಲ’ ಎಂದು ತಿಳಿಸಿದ್ದರು.

ಫೋನ್ ಕದ್ದಾಲಿಕೆ ಹಾಗೂ ಗೋಪ್ಯ ದಾಖಲೆಗಳನ್ನು ಸೋರಿಕೆ ಮಾಡಿದ್ದ ಆರೋಪ ಕುರಿತಂತೆ ಅಪರಿಚಿತರ ವಿರುದ್ಧ ಕಳೆದ ವರ್ಷ ಅಧಿಕೃತ ರಹಸ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT