ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ಲೋಕಸಭೆ ಚುನಾವಣೆ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿಗಳು

Published 23 ಮಾರ್ಚ್ 2024, 13:34 IST
Last Updated 23 ಮಾರ್ಚ್ 2024, 13:34 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನ ವಡೋದರ ಮತ್ತು ಸಾಬರ್‌ಕಾಂಠಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ವೈಯಕ್ತಿಕ ಕಾರಣ ನೀಡಿ ಚುನಾವಣಾ ಕಣದಿಂದ ಶನಿವಾರ ಹಿಂದೆ ಸರಿದಿದ್ದಾರೆ.

ಬಿಜೆಪಿಯು ವಡೋದರ ಕ್ಷೇತ್ರದಿಂದ ಹಾಲಿ ಸಂಸದೆ ರಂಜನಾಬೆನ್‌ ಭಟ್ ಅವರನ್ನು ಕಣಕ್ಕಿಳಿಸಿತ್ತು. ‘2024ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ’ ಎಂದು ಅವರು ‘ಎಕ್ಸ್’ನಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. 

ಇದರ ಬೆನ್ನಲ್ಲೇ ಸಾಬರ್‌ಕಾಂಠಾ ಕ್ಷೇತ್ರದ ಅಭ್ಯರ್ಥಿ ಭೀಖಾಜಿ ಠಾಕೂರ್ ಅವರೂ ಹಿಂದೆ ಸರಿಯುವ ನಿರ್ಧಾರ ಘೋಷಿಸಿದರು. ‘ವೈಯಕ್ತಿಕ ಕಾರಣಗಳಿಂದಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಡೋದರ ಕ್ಷೇತ್ರದಿಂದ ರಂಜನಾಬೆನ್‌ ಅವರನ್ನು ಕಣಕ್ಕಿಳಿಸಿರುವುದಕ್ಕೆ ಬಿಜೆಪಿಯ ಕೆಲವು ಸ್ಥಳೀಯ ನಾಯಕರಲ್ಲೇ ಅಸಮಾಧಾನ ಇತ್ತು. ಅವರಿಗೆ ಟಿಕೆಟ್‌ ನೀಡಿರುವುದನ್ನು ಟೀಕಿಸಿ ನಗರದ ಕೆಲವೆಡೆ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಅದರ ಬೆನ್ನಲ್ಲೇ ಅವರು ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ವಡೋದರ ಕ್ಷೇತ್ರವನ್ನು ಬಿಟ್ಟುಕೊಟ್ಟ ಬಳಿಕ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ರಂಜನಾಬೆನ್‌ ಗೆದ್ದಿದ್ದರು. 2019 ರಲ್ಲಿ ಅವರು ಪುನರಾಯ್ಕೆಯಾಗಿದ್ದರು. ಗುಜರಾತ್‌ನ 26 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT