ನವದೆಹಲಿ: ‘ಆರೋಪಿಗಳ ಮನೆ ನೆಲಸಮ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ, ಕೂಡಲೇ ಇದನ್ನು ನಿಲ್ಲಿಸಬೇಕು‘ ಎಂದು ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ.
ಮಧ್ಯಪ್ರದೇಶದ ಛತರ್‌ಪುರದಲ್ಲಿ ಪ್ರತಿಭಟನೆ ವೇಳೆ ಉಂಟಾದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಎನ್ನಲಾದ ವ್ಯಕ್ತಿಯ ಮನೆಯನ್ನು ನೆಲಸಮಗೊಳಿಸಿದ ಬೆನ್ನಲ್ಲೇ ಕಾಂಗ್ರೆಸ್ ಈ ಹೇಳಿಕೆ ನೀಡಿದೆ.
'ಶಹಜಾದ್ ಆಲಿ ಎಂಬವರ ಮನೆಯನ್ನು ನೆಲಸಮ ಮಾಡಲಾಗಿದೆ. ಹಿಂಸಾಚಾರ ಆರೋಪಕ್ಕೆ ಸಂಬಂಧಿಸಿ 150 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 46 ಮಂದಿಯ ಗುರುತು ಪತ್ತೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಯಾರದೊ ಮನೆಯನ್ನು ನೆಲಸಮ ಮಾಡುವುದು ಮತ್ತು ಕುಟುಂಬಸ್ಥರ ಸೂರನ್ನು ಕಸಿದುಕೊಳ್ಳುವುದು ಎರಡೂ ಅಮಾನವೀಯ ಮತ್ತು ಅನ್ಯಾಯ’ ಎಂದು ಎಕ್ಸ್‌ನಲ್ಲಿ ಹೇಳಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಲ್ಪಸಂಖ್ಯಾತರನ್ನು ಪದೇ ಪದೇ ಗುರಿಮಾಡಲಾಗುತ್ತಿದೆ. ಕಾನೂನಿನ ಆಳ್ವಿಕೆ ಇರುವ ಸಮಾಜದಲ್ಲಿ ಇಂಥ ಕೆಲಸಕ್ಕೆ ಜಾಗವಿಲ್ಲ’ ಎಂದು ಕಿಡಿಕಾರಿದ್ದಾರೆ.
ಜನರಲ್ಲಿ ಭಯ ಹುಟ್ಟಿಸಲು ಬುಲ್ಡೋಜರ್ ಬಳಕೆ ಮಾಡುತ್ತಿರುವ ಹಾಗೂ ಸಂವಿಧಾನಕ್ಕೆ ಅಗೌರವ ತೋರುತ್ತಿರುವ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳ ಕ್ರಮವನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದರು.
‘ಅರಾಜಕತೆಯು ನ್ಯಾಯಕ್ಕೆ ಪರ್ಯಾಯ ಅಲ್ಲ– ಅಪರಾಧಗಳಿಗೆ ನ್ಯಾಯಾಲಯದ ಮೂಲಕವೇ ಶಿಕ್ಷೆಯಾಗಬೇಕು’ ಎಂದು ಹೇಳಿದರು.