ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಧಾನ್ಯ ಸಂಗ್ರಹಕ್ಕೆ ₹1 ಲಕ್ಷ ಕೋಟಿ ಯೋಜನೆ: ಕೇಂದ್ರ ಅನುಮೋದನೆ

ಪ್ರಧಾನಿ ಮೋದಿ ಅಧ್ಯಕ್ಷತೆಯ ಸಭೆಯಲ್ಲಿ ಅನುಮೋದನೆ
Published 31 ಮೇ 2023, 14:08 IST
Last Updated 31 ಮೇ 2023, 14:08 IST
ಅಕ್ಷರ ಗಾತ್ರ

ನವದೆಹಲಿ: ಆಹಾರ ಧಾನ್ಯಗಳ ಸಂಗ್ರಹ ಸಾಮರ್ಥ್ಯವನ್ನು 7 ಕೋಟಿ ಟನ್‌ಗಳಷ್ಟು ಹೆಚ್ಚಿಸುವ ಒಂದು ಲಕ್ಷ ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, ‘ಉದ್ದೇಶಿತ ಈ ಯೋಜನೆಯ ಅವಧಿ ಐದು ವರ್ಷಗಳಾಗಿದ್ದು, ಸಹಕಾರ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳಲಿರುವ ವಿಶ್ವದಲ್ಲಿಯೇ ಅತಿದೊಡ್ಡ ಆಹಾರ ಧಾನ್ಯ ಸಂಗ್ರಹ ಯೋಜನೆಯಾಗಿದೆ’ ಎಂದು ಹೇಳಿದರು.

‘ಈ ಯೋಜನೆಯಡಿ ಪ್ರತಿ ತಾಲ್ಲೂಕು ಮಟ್ಟದಲ್ಲಿ 2 ಸಾವಿರ ಟನ್‌ ಸಂಗ್ರಹ ಸಾಮರ್ಥ್ಯದ ಉಗ್ರಾಣ ನಿರ್ಮಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಧಾನ್ಯಗಳನ್ನು ಸಂಗ್ರಹಿಸಿಡುವುದಕ್ಕೆ ಸಮರ್ಪಕ ಸೌಲಭ್ಯಗಳ ಕೊರತೆಯಿಂದಾಗಿ ರೈತರು ಕಡಿಮೆ ದರಕ್ಕೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ತೊಂದರೆ ಅನುಭವಿಸುವುದನ್ನು ತಪ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಅಲ್ಲದೆ, ಆಹಾರ ಧಾನ್ಯಗಳ ಆಮದನ್ನು ತಗ್ಗಿಸುವುದು ಹಾಗೂ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯ ಗುರಿಯನ್ನೂ ಈ ಯೋಜನೆ ಹೊಂದಿದೆ’ ಎಂದು ಠಾಕೂರ್‌ ಅವರು ವಿವರಿಸಿದರು.

‘ದೇಶದಲ್ಲಿ ವರ್ಷಕ್ಕೆ 31 ಕೋಟಿ ಟನ್‌ಗಳಷ್ಟು ಆಹಾರ ಧಾನ್ಯ ಉತ್ಪಾದಿಸಲಾಗುತ್ತದೆ. ಆದರೆ, ಈಗಿರುವ ಉಗ್ರಾಣಗಳಲ್ಲಿ ಒಟ್ಟು ಉತ್ಪಾದನೆಯ ಶೇ 47ರಷ್ಟು ಉತ್ಪನ್ನಗಳನ್ನು ಮಾತ್ರ ಸಂಗ್ರಹಿಸಿಡಲು ಸಾಧ್ಯವಾಗುತ್ತಿದೆ. ಉಗ್ರಾಣಗಳ ಸಂಖ್ಯೆ ಹೆಚ್ಚುವುದರಿಂದ ಸಾಗಾಣಿಕೆಗೆ ತಗುಲುವ ವೆಚ್ಚ ತಗ್ಗುವ ಜೊತೆಗೆ ಆಹಾರ ಭದ್ರತೆಯೂ ಬಲಗೊಳ್ಳುವುದು ’ ಎಂದರು.

‘ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಉಗ್ರಾಣಗಳ ಸಂಗ್ರಹ ಸಾಮರ್ಥ್ಯ 8 ಕೋಟಿ ಟನ್‌ ಇದ್ದು, ಉಳಿದ ಅಹಾರ ಧಾನ್ಯಗಳನ್ನು ರಾಜ್ಯ ಹಾಗೂ ಖಾಸಗಿ ಒಡೆತನದ ಉಗ್ರಾಣಗಳಲ್ಲಿ ಸಂಗ್ರಹಿಸಲಾಗುತ್ತಿದೆ’ ಎಂದು ಹೇಳಿದರು.

ಅನುಷ್ಠಾನ: ಯೋಜನೆಯನ್ನು ಪರಿಣಾಮಕಾರಿಯಾಗಿ ಹಾಗೂ ವೃತ್ತಿಪರತೆಯೊಂದಿಗೆ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ಸಹಕಾರ ಸಚಿವಾಲಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯ್ದ 10 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ’ ಎಂದು ಸಚಿವರು ವಿವರಿಸಿದರು.

ಸಿಐಟಿಐಐಎಸ್‌ 2.0’ಗೆ ಅನುಮೋದನೆ: ನಗರ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಒತ್ತು ನೀಡುವ ‘ಸಿಟಿ ಇನ್ವೆಸ್ಟ್‌ಮೆಂಟ್ಸ್ ಟು ಇನ್ನೋವೇಟ್, ಇಂಟಿಗ್ರೇಟ್ ಅಂಡ್ ಸಸ್ಟೇನ್ (ಸಿಐಟಿಐಐಎಸ್‌) 2.0‘ ಎಂಬ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಕುರಿತು ಮಾಹಿತಿ ನೀಡಿದ ಸಚಿವ ಠಾಕೂರ್‌, ಪ್ರಸಕ್ತ ಹಣಕಾಸು ವರ್ಷದಿಂದ ನಾಲ್ಕು ವರ್ಷಗಳ ವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ. ಫ್ರೆಂಚ್‌ ಅಭಿವೃದ್ಧಿ ಸಂಸ್ಥೆ (ಎಎಫ್‌ಡಿ), ಕೆಎಫ್‌ಡಬ್ಲ್ಯು, ಐರೋಪ್ಯ ಒಕ್ಕೂಟ ಹಾಗೂ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅರ್ಬನ್‌ ಅಫೇರ್ಸ್‌ (ಎನ್‌ಐಯುಎ) ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.

‘ನಗರ ಮಟ್ಟದಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ, ರಾಜ್ಯ ಮಟ್ಟದಲ್ಲಿ ಹವಾಮಾನ ಬದಲಾವಣೆ ಕೇಂದ್ರಿತ ಸುಧಾರಣಾ ಕ್ರಮಗಳಿಗೆ ಉತ್ತೇಜನ ನೀಡಲಾಗುತ್ತದೆ. ಈ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಸಬಲೀಕರಣ ಹಾಗೂ ಜ್ಞಾನ ಪ್ರಸಾರ ಕಾರ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ಪ್ರೋತ್ಸಾಹ ನೀಡುವುದನ್ನು ಈ ಯೋಜನೆ ಒಳಗೊಂಡಿದೆ’ ಎಂದು ತಿಳಿಸಿದರು.

‘ಈ ಯೋಜನೆ ಅನುಷ್ಠಾನಕ್ಕೆ ಎಎಫ್‌ಡಿ ಹಾಗೂ ಕೆಎಫ್‌ಡಬ್ಲ್ಯು ಜಂಟಿಯಾಗಿ ಒಟ್ಟು ₹ 1,760 ಕೋಟಿ ಸಾಲ ಒದಗಿಸಲಿವೆ. ತಾಂತ್ರಿಕ ನೆರವಿನಡಿ ಐರೋಪ್ಯ ಒಕ್ಕೂಟವು ₹ 106 ಕೋಟಿ ಒದಗಿಸಲಿದೆ’ ಎಂದು ಹೇಳಿದರು.

ಸಮನ್ವಯಕ್ಕೆ ಸಮಿತಿ
ಸಹಕಾರ ಕ್ಷೇತ್ರದಲ್ಲಿ ಈ ಯೋಜನೆಯ ಅನುಷ್ಠಾನಕ್ಕಾಗಿ ‘ಅಂತರ ಸಚಿವಾಲಯ ಸಮಿತಿ’ಯನ್ನು (ಐಎಂಸಿ) ರಚಿಸಲಾಗುವುದು. ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಸಮಿತಿ ಅಧ್ಯಕ್ಷರಾಗಿರುವರು. ಕೃಷಿ ಸಚಿವ ನರೇಂದ್ರ ತೋಮರ್‌ ಸಿಂಗ್, ಗ್ರಾಹಕರ ವ್ಯವಹಾರಗಳ ಸಚಿವ ಪೀಯೂಷ್‌ ಗೋಯೆಲ್, ಅಹಾರ ಸಂಸ್ಕರಣ ಕೈಗಾರಿಕೆಗಳ ಸಚಿವ ಪಶುಪತಿಕುಮಾರ್‌ ಪಾರಸ್‌ ಹಾಗೂ ಸಂಬಂಧಪಟ್ಟ ಸಚಿವಾಲಯಗಳ ಕಾರ್ಯದರ್ಶಿಗಳು ಸಮಿತಿ ಸದಸ್ಯರಾಗಿರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT