ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿರುವ ತಮಿಳುನಾಡು ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ಕಳೆದ 15 ತಿಂಗಳಿನಿಂದ ಅವರು ಸೆರೆವಾಸ ಅನುಭವಿಸುತ್ತಿದ್ದರು. ಅವರ ವಿಚಾರಣೆ ಶೀಘ್ರವೇ ಪೂರ್ಣಗೊಳ್ಳುವ ಸಾಧ್ಯತೆಗಳು ಇಲ್ಲ ಎಂಬುದನ್ನು ಪರಿಗಣಿಸಿ, ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಆದರೆ, ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಎಂ. ಅವರಿದ್ದ ಪೀಠ, ಜಾಮೀನು ನೀಡಿದೆ.
ಇ.ಡಿ. ಪರ ವಕಾಲತ್ತು ವಹಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಬಾಲಜಿ ಪರ ವಾದ ಮಂಡಿಸಿದ್ದ ಮುಕುಲ್ ರೋಹಟಗಿ, ಸಿದ್ಧಾರ್ಥ್ ಲುಥಾರ ಅವರ ವಿಚಾರಣೆಯನ್ನು ಆಗಸ್ಟ್ 12ರಂದು ನಡೆಸಿದ್ದ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು.
‘ಸೆಂಥಿಲ್ ಬಾಲಾಜಿ ಅವರ ಅವರ ಸೆರೆವಾಸ ಮುಂದುವರಿದಲ್ಲಿ, ಅದು ಸಂವಿಧಾನದ 21ನೇ ವಿಧಿ ಅನ್ವಯ ನೀಡಲಾಗಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
‘ಪ್ರಕರಣಕ್ಕೆ ಸಂಬಂಧಿಸಿ 2 ಸಾವಿರಕ್ಕೂ ಅಧಿಕ ಆರೋಪಿಗಳಿದ್ದು, 600ಕ್ಕೂ ಹೆಚ್ಚು ಜನ ಸಾಕ್ಷಿಗಳಿದ್ದಾರೆ. ಒಂದೆಡೆ ವಿಚಾರಣೆ ಮುಗಿದು, ಪ್ರಕರಣದ ಇತ್ಯರ್ಥ ವಿಳಂಬವಾಗಲಿದೆ. ಇನ್ನೊಂದೆಡೆ ಜಾಮೀನು ನಿರಾಕರಿಸುವುದಕ್ಕೂ ಒಂದು ಮಿತಿ ಇದೆ’ ಎಂದು ಪೀಠ ಹೇಳಿದೆ.
2011 ರಿಂದ 2015ರಲ್ಲಿ ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದ ಸೆಂಥಿಲ್ ಅವರು ಉದ್ಯೋಗ ಕೊಡಿಸುವುದಾಗಿ ಲಂಚ ಪಡೆದಿದ್ದಾರೆ ಎಂಬ ಆರೋಪದಲ್ಲಿ 2023ರ ಜೂನ್ 14ರಂದು ಇ.ಡಿ. ಅಧಿಕಾರಿಗಳು ಬಂಧಿಸಿದ್ದರು. ಇ.ಡಿ., ಆಗಸ್ಟ್ 12ರಂದು ಬಾಲಾಜಿ ವಿರುದ್ಧ 3,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಸೆಂಥಿಲ್ ಅವರು 2018ರಲ್ಲಿ ಡಿಎಂಕೆ ಸೇರಿದ್ದರು.
ಸೆಂಥಿಲ್ ಬಾಲಾಜಿ ಅವರಿಗೆ ಜಾಮೀನು ನೀಡಿರುವುದನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸ್ವಾಗತಿಸಿದ್ದಾರೆ. ‘ಬಾಲಾಜಿ ಅವರನ್ನು ಜೈಲಿನಲ್ಲಿಯೇ ಇರಿಸುವ ಮೂಲಕ ಅವರನ್ನು ತುಳಿಯುವ ಯತ್ನಗಳು ನಡೆದಿದ್ದವು. ಆದರೆ, ಈಗ ಅವರು ಹಿಂದಿಗಿಂತಲೂ ಹೆಚ್ಚು ಬಲಿಷ್ಠರಾಗಿ ಹೊರಹೊಮ್ಮಿದ್ದಾರೆ’ ಎಂದು ಹೇಳಿದ್ದಾರೆ.
‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಇಷ್ಟೊಂದು ದೀರ್ಘ ಅವಧಿಗೆ ಯಾರಿಗೂ ಸೆರೆವಾಸ ವಿಧಿಸಿರಲಿಲ್ಲ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.