ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಜಹಾನ್‌ರನ್ನು ಸಿಬಿಐ, ಇ.ಡಿ ಗೂ ಬಂಧಿಸಬಹುದು: ಕಲ್ಕತ್ತಾ ಹೈಕೋರ್ಟ್

Published 28 ಫೆಬ್ರುವರಿ 2024, 15:59 IST
Last Updated 28 ಫೆಬ್ರುವರಿ 2024, 15:59 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಮತ್ತು ಗ್ರಾಮಸ್ಥರ ಭೂಮಿ ಕಸಿದಿರುವ ಪ್ರಕಣದ ಆರೋಪಿ ಹಾಗೂ ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ ಅವರನ್ನು ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ) ಅಥವಾ ರಾಜ್ಯ ಪೊಲೀಸರು ಬಂಧಿಸಬಹುದು ಎಂದು ಕಲ್ಕತ್ತ ಹೈಕೋರ್ಟ್ ಬುಧವಾರ ಹೇಳಿದೆ.

ಇ.ಡಿ. ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಮತ್ತು ಪೊಲೀಸರ ಜಂಟಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದಕ್ಕೆ ಮಾತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಇತರ ಪ್ರಕರಣಗಳಲ್ಲಿ ಶಹಜಹಾನ್‌ ಅವರನ್ನು ಬಂಧಿಸುವುದಕ್ಕೆ‌ ಯಾವುದೇ ತಡೆ ನೀಡಿಲ್ಲ ಎಂದು ಮುಖ್ಯ ನ್ಯಾಯ‌ಮೂರ್ತಿ ಟಿ.ಎಸ್‌. ಶಿವಜ್ಞಾನಂ ನೇ‌ತೃತ್ವದ ನ್ಯಾಯಪೀಠವು ಸಷ್ಟಪಡಿಸಿದೆ.

ಜನವರಿ 5ರಂದು ಇ.ಡಿ ಅಧಿಕಾರಿಗಳ ಮೇಲೆ ಗುಂಪೊಂದು ದಾಳಿ ನಡೆಸಿದ ಬಳಿಕ ಶಹಜಹಾನ್‌ ಅವರು ತಲೆ ಮರೆಸಿಕೊಂಡಿದ್ದಾರೆ.

ನಂದಿಗ್ರಾಮಕ್ಕೆ ಹೋಲಿಸಬೇಡಿ:

ನಂದಿಗ್ರಾಮ ಮತ್ತು ಸಿಂಗೂರ್‌ನಲ್ಲಿ ನಡೆದಿದ್ದ ಭೂಸ್ವಾಧೀನ ವಿರೋಧಿ ಪ್ರತಿಭಟನೆ ಮತ್ತು ಸಂದೇಶ್‌ಖಾಲಿ‌ಯ  ಪ್ರಕರಣವನ್ನು ಹೋಲಿಕೆ ಮಾಡಲು ಬಿಜೆಪಿ ಯತ್ನಿಸುತ್ತಿರುವುದು ಅಸಂಬದ್ಧ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

ಬಂಕುರಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂಸೆಯನ್ನು ಪ್ರಚೋದಿಸುವ ತಪ್ಪು ಮಾಡಬೇಡಿ, ಯಾವುದೇ ಕೆಟ್ಟ ಕೆಲಸಗಳಿಗೆ ನಾನು ಬೆಂಬಲ ನೀಡಲಾರೆ ಎಂದೂ ತಿಳಿಸಿದರು.

ಸಿಖ್‌ ಸಮುದಾಯದ ಐಪಿಎಸ್‌ ಅಧಿಕಾರಿಯನ್ನು ಖಾಲಿಸ್ತಾನಿ ಎನ್ನುವ ಮೂಲಕ ಬಿಜೆಪಿಯ ನಿಜವಾದ ಕೋಮುವಾದಿ ಮುಖವು ಅನಾವರಣಗೊಂಡಿದೆ ಎಂದರು.

ಸಂದೇಶ್‌ಖಾಲಿಗೆ ಈಚೆಗೆ ತೆರಳುತ್ತಿದ್ದ ಬಿಜೆಪಿ ಮುಖಂಡ ಸುವೆಂದು ಅಧಿಕಾರಿಯನ್ನು ತಡೆದಿದ್ದಕ್ಕೆ ಸಿಖ್‌ ಐಪಿಎಸ್‌ ಅಧಿಕಾರಿಯನ್ನು ಬಿಜೆಪಿ ಬೆಂಬಲಿಗರು ಖಾಲಿಸ್ತಾನಿ ಎಂದು ಕರೆದಿದ್ದರು.

ಬಿಜೆಪಿ ಧರಣಿ:

ಶಹಜಹಾನ್‌ ಶೇಖ್‌ ಅವರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಕೋಲ್ಕತ್ತದಲ್ಲಿ ಬುಧವಾರ ಎರಡು ದಿನಗಳ ಧರಣಿ ಆರಂಭಗೊಂಡಿತು.

ಶಹಜಹಾನ್‌ ಅವರು ಪೊಲೀಸರ ರಕ್ಷಣೆಯಲ್ಲಿ ತಲೆಮರೆಸಿಕೊಂಡಿದ್ದಾರೆ. ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅವರು ಬಾಂಗ್ಲಾದೇಶದ ರೋಹಿಂಗ್ಯಾ ವಲಸಿಗರಿಗೆ ಮತ್ತು ಜಾನುವಾರು ಕಳ್ಳಸಾಗಣೆದಾರರಿಗೆ ನೆರವು ನೀಡುತ್ತಿದ್ದಾರೆ ಎಂದು ಧರಣಿಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ದಿಲೀಪ್‌ ಘೋಷ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT