ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಕೇಂದ್ರದ ನಿಯಂತ್ರಣದಲ್ಲಿಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಸಾಲಿಸಿಟರ್ ಜನರಲ್

Published 2 ಮೇ 2024, 15:57 IST
Last Updated 2 ಮೇ 2024, 15:57 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಐ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ, ಅದು ಪ್ರಕರಣಗಳನ್ನು ದಾಖಲಿಸಿಕೊಳ್ಳುವ ವಿಚಾರದಲ್ಲಿ ಹಾಗೂ ನಡೆಸುವ ತನಿಖೆಗಳ ಬಗ್ಗೆ ಕೇಂದ್ರ ಸರ್ಕಾರ ಮೇಲ್ವಿಚಾರಣೆ ನಡೆಸಲಾಗದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ಕೇಂದ್ರ ಸರ್ಕಾರವು ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು (ಇ.ಡಿ) ದುರ್ಬಳಕೆ ಮಾಡಿಕೊಳ್ಳುತ್ತಿದೆ, ತನ್ನ ವಿರೋಧಿಗಳ ವಿರುದ್ಧ ಅವುಗಳನ್ನು ಬಳಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರದ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.

ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆಯೇ ತನಿಖೆ ಮುಂದುವರಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ಅರ್ಜಿಯೊಂದಕ್ಕೆ ಪ್ರತಿಯಾಗಿ ಸಲ್ಲಿಸಿರುವ ಪ್ರಾಥಮಿಕ ಆಕ್ಷೇಪಣೆಯಲ್ಲಿ ಕೇಂದ್ರವು ಈ ಮಾತುಗಳನ್ನು ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರು ಇರುವ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ.

ಕೇಂದ್ರದ ವಾದಕ್ಕೆ ಪ್ರತಿವಾದ ಮಂಡಿಸಿರುವ ಪಶ್ಚಿಮ ಬಂಗಾಳ ಸರ್ಕಾರವು, ಸಿಬಿಐಗೆ ರಾಜ್ಯದಲ್ಲಿ ಒಮ್ಮೆ ಕಾಲೂರಲು ಅವಕಾಶ ನೀಡಿದಲ್ಲಿ, ಇ.ಡಿ. ಕೂಡ ಪ್ರವೇಶ ಪಡೆಯುತ್ತದೆ, ಅದರ ಪರಿಣಾಮಗಳು ದೇಶದ ರಾಜಕೀಯ ವ್ಯವಸ್ಥೆಯ ಮೇಲೆ ಬಹಳ ವ್ಯಾಪಕವಾಗಿರುತ್ತವೆ ಎಂದು ಹೇಳಿದೆ.

ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂದಪಡೆಯಲಾಗಿದ್ದರೂ, ಸಿಬಿಐ ಅಧಿಕಾರಿಗಳು ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದಾರೆ, ತನಿಖೆ ನಡೆಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದೆ.

ಕೇಂದ್ರದ ಪರವಾಗಿ ಗುರುವಾರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರಕರಣಗಳನ್ನು ಕೇಂದ್ರ ಸರ್ಕಾರ ದಾಖಲು ಮಾಡಿಲ್ಲ’ ಎಂದು ಪೀಠಕ್ಕೆ ತಿಳಿಸಿದರು. ‘ಪ್ರಕರಣಗಳನ್ನು ದಾಖಲಿಸಿಕೊಂಡಿರುವುದು ಸಿಬಿಐ ಅಧಿಕಾರಿಗಳು... ಸಿಬಿಐ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ’ ಎಂದು ಮೆಹ್ತಾ ವಿವರಿಸಿದರು.

ಕಲ್ಕತ್ತ ಹೈಕೋರ್ಟ್‌ನ ಸೂಚನೆ ಆಧರಿಸಿ ದಾಖಲು ಮಾಡಿಕೊಂಡಿರುವ ಪ್ರಕರಣಗಳನ್ನು ಕೂಡ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು. ‘ಸಿಬಿಐ ಉಸ್ತುವಾರಿ ಕೇಂದ್ರ ಸರ್ಕಾರದ ಹೊಣೆಯಲ್ಲ. ಪ್ರಕರಣ ದಾಖಲು, ತನಿಖೆ, ಪ್ರಕರಣದ ಪರಿಸಮಾಪ್ತಿ ವರದಿ ಅಥವಾ ದೋಷಾರೋಪಪಟ್ಟಿ ಅಥವಾ ಪ್ರಕರಣದಲ್ಲಿ ಶಿಕ್ಷೆ ಆಗುವ ವಿಚಾರವನ್ನು ಕೇಂದ್ರವು ಮೇಲ್ವಿಚಾರಣೆ ನಡೆಸಲು ಆಗುವುದಿಲ್ಲ’ ಎಂದು ಮೆಹ್ತಾ ಅವರು ಪೀಠಕ್ಕೆ ಮಾಹಿತಿ ನೀಡಿದರು.

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಸಿಬಿಐ ಎಂಬುದು ಶಾಸನಾತ್ಮಕ ಪ್ರಾಧಿಕಾರ ಅಲ್ಲ, ಅದೊಂದು ತನಿಖಾ ಸಂಸ್ಥೆ ಎಂದರು. ‘ಅದು ಸರ್ಕಾರದ ತನಿಖಾ ವಿಭಾಗ’ ಎಂದರು. ಸಿಬಿಐ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದಾಗ ಅದಕ್ಕೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ರಾಜ್ಯ ಖಾತೆ ಸಚಿವರು ಅದಕ್ಕೆ ಉತ್ತರ ನೀಡುತ್ತಾರೆ ಎಂದು ಸಿಬಲ್ ಹೇಳಿದರು. ವಾದ–ಪ್ರತಿವಾದವು ಮೇ 8ರಂದು ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT