ನವದೆಹಲಿ: ‘ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಆಗಸ್ಟ್‌ನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ. ಲಭ್ಯ ಸಾಕ್ಷ್ಯಗಳ ಪ್ರಕಾರ, ಸಂಜಯ್ ರಾಯ್ ಏಕೈಕ ಆರೋಪಿಯಾಗಿದ್ದಾನೆ’ ಎಂದು ಸಿಬಿಐ ನಡೆಸಿದ ತನಿಖೆಯಲ್ಲಿ ಗೊತ್ತಾಗಿದೆ.
ಸಿಬಿಐನ ಮೂಲಗಳನ್ನು ಆಧರಿಸಿ ಎನ್‌ಡಿಟಿವಿ ಈ ಕುರಿತು ವರದಿ ಮಾಡಿದೆ. ‘ಪ್ರಕರಣದ ತನಿಖೆಯು ಅಂತಿಮ ಹಂತದಲ್ಲಿದೆ. ಆದಷ್ಟು ಶೀಘ್ರದಲ್ಲಿಯೇ ಆರೋಪಪಟ್ಟಿ ದಾಖಲಿಸಲಾಗುತ್ತದೆ’ ಎಂದು ವರದಿ ತಿಳಿಸಿದೆ. ಕೃತ್ಯದ ತನಿಖೆಯನ್ನು ಕೋಲ್ಕತ್ತ ಹೈಕೋರ್ಟ್, ಸಿಬಿಐಗೆ ಒಪ್ಪಿಸಿತ್ತು.
ಸಿಬಿಐ ತನಿಖೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕಾಗಿ ರಾಜಕೀಯ ವಿರೋಧಿಗಳು ಹಾಗೂ ನಾಗರಿಕ ಸಮಾಜದ ಟೀಕೆಗೂ ಗುರಿಯಾಗಿದ್ದರು.
‘ತನಿಖೆಯನ್ನು ವಿಳಂಬ ಮಾಡುವುದೇ ಸಿಬಿಐ ತನಿಖೆಗೆ ಒಪ್ಪಿಸಿರುವುದರ ಉದ್ದೇಶ. ತನಿಖೆ ಆರಂಭವಾಗಿ 16 ದಿನ ಕಳೆದಿದೆ. ಎಲ್ಲಿದೆ ನ್ಯಾಯ?’ ಎಂದು ಕಳೆದ ತಿಂಗಳಷ್ಟೇ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದರು.
ತನಿಖೆಗೆ ಸಂಬಂಧಿಸಿ ಸಿಬಿಐ ಸುಮಾರು 100 ಹೇಳಿಕೆಗಳನ್ನು ದಾಖಲಿಸಿದೆ. ಆಸ್ಪತ್ರೆಯ ಮಾಜಿ ಮುಖ್ಯಸ್ಥ ಡಾ.ಸಂದೀಪ್ ಘೋಷ್ ಸೇರಿದಂತೆ 10 ಜನರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಿದೆ. ಮೂವರನ್ನು ಬಂಧಿಸಿದೆ. ಇವರಲ್ಲಿ ಘೋಷ್ ಅವರನ್ನು ಹಣಕಾಸು ಅಕ್ರಮ ಆರೋಪದಡಿ ಬಂಧಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಉಲ್ಲೇಖಿಸಿದೆ.