ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಗಣಿಗಾರಿಕೆ ಪ್ರಕರಣ: ಅಖಿಲೇಶ್‌ಗೆ ಸಿಬಿಐ ಸಮನ್ಸ್

Published 28 ಫೆಬ್ರುವರಿ 2024, 14:36 IST
Last Updated 28 ಫೆಬ್ರುವರಿ 2024, 14:36 IST
ಅಕ್ಷರ ಗಾತ್ರ

ನವದೆಹಲಿ: ಐದು ವರ್ಷಗಳ ಹಿಂದೆ ದಾಖಲಾಗಿದ್ದ ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ಸಂಬಂಧ ಸಮಾಜವಾದಿ ಪಕ್ಷದ ಅಧ್ಯಕ್ಷ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರಿಗೆ ಸಿಬಿಐ ಸಮನ್ಸ್‌ ನೀಡಿದೆ.

2019ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 160ರ ಅಡಿಯಲ್ಲಿ ಪ್ರಕರಣದ ವಿಚಾರಣೆಗೆ ಫೆ. 29ರಂದು ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ ಸೀಟು ಹಂಚಿಕೆಯನ್ನು ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಇ–ಟೆಂಡರ್‌ ಪ್ರಕ್ರಿಯೆಯನ್ನು ಉಲ್ಲಂಘಿಸಿ ಗಣಿಗಾರಿಕೆಯ ಗುತ್ತಿಗೆಗಳನ್ನು ನೀಡಿರುವ ಕುರಿತ ಪ್ರಕರಣ ಇದಾಗಿದ್ದು, ಅಲಹಾಬಾದ್‌ ಹೈಕೋರ್ಟ್‌ ಆದೇಶದ ಮೇರೆಗೆ ತನಿಖೆ ನಡೆಯುತ್ತಿದೆ.

2012–16ರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಈ ಅವಧಿಯಲ್ಲಿ ಅಖಿಲೇಶ್‌ ಯಾದವ್‌ ಅವರು ಮುಖ್ಯಮಂತ್ರಿಯಾಗಿದ್ದರು. ಅಲ್ಲದೆ ಗಣಿಗಾರಿಕೆಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ನಿಷೇಧ ಹೇರಿದ್ದರೂ ಅಕ್ರಮವಾಗಿ ಪರವಾನಗಿ ನವೀಕರಿಸಲಾಗಿದೆ ಎಂಬ ಆರೋಪವೂ ಇದೆ. ಖನಿಜಗಳ ಕಳ್ಳತನಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಚಾಲಕರಿಂದ ಹಣ ಸುಲಿಗೆ ಮಾಡಿದ್ದಾರೆ ಎಂಬ ಆರೋಪಗಳೂ ಇವೆ.

ಕೆಲ ಕಾಲ ಗಣಿಗಾರಿಕೆ ಖಾತೆಯನ್ನು ಹೊಂದಿದ್ದ ಅಖಿಲೇಶ್‌ ಅವರು 2013ರ ಫೆಬ್ರುವರಿ 17ರಂದು ಇ–ಟೆಂಡರ್‌ ಪ್ರಕ್ರಿಯೆಯನ್ನು ಉಲ್ಲಂಘಿಸಿ 13 ಯೋಜನೆಗಳಿಗೆ ಅನುಮತಿ ನೀಡಿದ್ದಾರೆ ಎಂಬುದು ಸಿಬಿಐನ ಆರೋಪ. ಮುಖ್ಯಮಂತ್ರಿ ಅನುಮೋದನೆ ಬಳಿಕ ಹಮೀರ್‌ಪುರದ ಜಿಲ್ಲಾಧಿಕಾರಿ ಬಿ. ಚಂದ್ರಕಲಾ ಅವರು ಗುತ್ತಿಗೆಯನ್ನು ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

2012–16ರ ಅವಧಿಯಲ್ಲಿ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಸಂಬಂಧ 2019ರಲ್ಲಿ ಸಿಬಿಐ ಐಎಎಸ್‌ ಅಧಿಕಾರಿ ಬಿ. ಚಂದ್ರಕಲಾ, ಸಮಾಜವಾದಿ ಪಕ್ಷದ ಶಾಸಕ ರಮೇಶ್‌ ಕುಮಾರ್‌ ಮಿಶ್ರ, ಸಂಜಯ್‌ ದೀಕ್ಷಿತ್‌ ಸೇರಿದಂತೆ 11 ಜನರಿಗೆ ಸೇರಿದ 14 ಸ್ಥಳಗಳ ಮೇಲೆ ಶೋಧ ನಡೆಸಿತ್ತು.

2012ರಿಂದ 2017ರವರೆಗೆ ಮುಖ್ಯಮಂತ್ರಿಯಾಗಿದ್ದ ಯಾದವ್‌ ಅವರು 2012–13ರ ಅವಧಿಯಲ್ಲಿ ಗಣಿಗಾರಿಕೆ ಖಾತೆಯನ್ನು ಹೊಂದಿದ್ದರು. 2013ರಲ್ಲಿ ಗಾಯತ್ರಿ ಪ್ರಜಾಪತಿ ಅವರು ಗಣಿಗಾರಿಕೆ ಸಚಿವರಾಗಿ ಅಧಿಕಾರಿ ವಹಿಸಿಕೊಂಡರು. ಆದರೆ ಅವರ ವಿರುದ್ಧ ಚಿತ್ರಕೂಟದ ಮಹಿಳೆಯೊಬ್ಬರು ಅತ್ಯಾಚಾರದ ದೂರು ನೀಡಿದ ಬಳಿಕ 2017ರಲ್ಲಿ ಅವರನ್ನು ಬಂಧಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT