ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ ಅಕ್ರಮ | ಸಿಬಿಐ ತನಿಖೆ ಚುರುಕು: ಪಟ್ನಾ, ಗೋಧ್ರಾಕ್ಕೆ ಅಧಿಕಾರಿಗಳ ಭೇಟಿ

Published 24 ಜೂನ್ 2024, 16:09 IST
Last Updated 24 ಜೂನ್ 2024, 16:09 IST
ಅಕ್ಷರ ಗಾತ್ರ

ನವದೆಹಲಿ/ಪಟ್ನಾ/ಗೋಧ್ರಾ: ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಾತಿಗಾಗಿ ಮೇ 5ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದೆ.

ತನಿಖೆಯ ಭಾಗವಾಗಿ ಸಿಬಿಐ ತಂಡಗಳು ಬಿಹಾರದ ಪಟ್ನಾ, ಗುಜರಾತ್‌ನ ಗೋಧ್ರಾಗೆ ಭೇಟಿ ನೀಡಿ ಸ್ಥಳೀಯ ಪೊಲೀಸರಿಂದ ಮಾಹಿತಿ ಕಲೆಹಾಕಿವೆ. 

ದೆಹಲಿಯ ಸಿಬಿಐ ಅಧಿಕಾರಿಗಳ ತಂಡವೊಂದು ಪಟ್ನಾದಲ್ಲಿರುವ ಬಿಹಾರ ಪೊಲೀಸ್‌ ಇಲಾಖೆಯು ಆರ್ಥಿಕ ಅಪರಾಧಗಳ ಘಟಕದ (ಇಒಯು) ಕಚೇರಿಗೆ ಭೇಟಿ ನೀಡಿ ಸ್ಥಳೀಯ ತನಿಖಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ.  

ಪ್ರಕರಣವನ್ನು ಸಿಬಿಐಗೆ ವಹಿಸುವವರೆಗೂ ಬಿಹಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಇಒಯು ತನಿಖೆ ನಡೆಸಿದ್ದು, 18 ಮಂದಿಯನ್ನು ಇದುವರೆಗೆ ಬಂಧಿಸಿದೆ.

‘ಸಿಬಿಐ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಆರ್ಥಿಕ ಅಪರಾಧಗಳ ಘಟಕದ ಅಧಿಕಾರಿಗಳಿಂದ ಪಡೆಯುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

‘ತನಿಖೆಯ ಸಂದರ್ಭದಲ್ಲಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಪಟ್ನಾದ ಮನೆಯೊಂದರಿಂದ ವಶಕ್ಕೆ ಪಡೆದಿರುವ ಅರ್ಧ ಸುಟ್ಟ ಪ್ರಶ್ನೆಪತ್ರಿಕೆ, ಬಂಧಿತರ ಮೊಬೈಲ್‌ ಫೋನ್‌ಗಳು, ಸಿಮ್‌ ಕಾರ್ಡ್‌ಗಳು, ಲ್ಯಾಪ್‌ಟಾಪ್‌ಗಳು, ಮುಂದಿನ ದಿನಾಂಕಗಳಿಗೆ ಸಹಿ ಹಾಕಿದ ಚೆಕ್‌ಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನೀಡಿರುವ ಮಾದರಿ ಪ್ರಶ್ನೆ ಪತ್ರಿಕೆಗಳು ಇದರಲ್ಲಿ ಸೇರಿವೆ’ ಎಂದು ಇಒಯುದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

‘ಬಂಧಿತರೆಲ್ಲರೂ ಪಟ್ನಾದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆಗಾಗಿ ಸಿಬಿಐ ತಂಡ ಆರೋಪಿಗಳನ್ನು ದೆಹಲಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಅದಕ್ಕಾಗಿ ಇಲ್ಲಿನ ನ್ಯಾಯಾಲಯದಿಂದ ಟ್ರಾನ್ಸಿಟ್‌ ರಿಮಾಂಡ್‌ ಪಡೆಯುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದ್ದಾರೆ. 

‘ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಹಲವು ಎಫ್‌ಐಆರ್‌ಗಳನ್ನು ದಾಖಲಿಸಬಹುದು. ಪ್ರಕರಣದ ಪ್ರಮುಖ ಆರೋಪಿ, ದನಾಪುರ ಪುರಸಭೆಯ ಕಿರಿಯ ಎಂಜಿನಿಯರ್‌ ಸಿಕಂದರ್‌ ಪ್ರಸಾದ್‌ ಯುದುವೇಂದು ಸೇರಿದಂತೆ ಆರೋಪಿಗಳಾಗಿರುವ ಸರ್ಕಾರಿ ನೌಕರರ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ (ಡಿಎ) ಮಾಡಿರುವ ಪ್ರಕರಣ ದಾಖಲಿಸುವ ಸಾಧ್ಯತೆಯೂ ಇದೆ’ ಎಂದು ಅವರು ವಿವರಿಸಿದ್ದಾರೆ.  

ಗೋಧ್ರಾದಲ್ಲಿ ಸಿಬಿಐ ತಂಡ: ಇತ್ತ, ಗುಜರಾತ್‌ನ ಪಂಚಮಹಲ್‌ ಜಿಲ್ಲೆಯ ಗೋಧ್ರಾ ನಗರಕ್ಕೆ ಸೋಮವಾರ ತಲುಪಿರುವ ಸಿಬಿಐ ಅಧಿಕಾರಿಗಳ ತಂಡ ಸ್ಥಳೀಯ ಪೊಲೀಸರಿಂದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿದೆ. 

27 ಅಭ್ಯರ್ಥಿಗಳಿಂದ ತಲಾ ₹10 ಲಕ್ಷ ಪಡೆದು, ನೀಟ್‌ನಲ್ಲಿ ತೇರ್ಗಡೆಯಾಗಲು ಅವರಿಗೆ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಗೋಧ್ರಾ ಪೊಲೀಸರು ಮೇ 8ರಂದು ಪ್ರಕರಣ ದಾಖಲಿಸಿದ್ದರು. ಶಾಲೆಯೊಂದರ ಪ್ರಾಂಶುಪಾಲ, ಶಿಕ್ಷಕ ಸೇರಿದಂತೆ ಐವರನ್ನು ಬಂಧಿಸಿದ್ದರು. 

‘ಸಿಬಿಐ ಅಧಿಕಾರಿಗಳ ತಂಡವು ಗೋಧ್ರಾ ತಲುಪಿದ್ದು, ಸ್ಥಳೀಯ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿದೆ. ಪ್ರಕರಣದ ತನಿಖೆಯಲ್ಲಿ ಸಿಬಿಐ ಅಧಿಕಾರಿಗಳಿಗೆ ನೇಕಾದ ಎಲ್ಲ ನೆರವನ್ನೂ ನಾವು ನೀಡಲಿದ್ದೇವೆ’ ಎಂದು ಪಂಚಮಹಲ್‌ನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಿಮಾಂಶು ಸೋಲಂಕಿ ಹೇಳಿದ್ದಾರೆ. 

ಐದು ಹೊಸ ಪ್ರಕರಣಗಳು: ಈ ಮಧ್ಯೆ, ಬಿಹಾರ, ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ದಾಖಲಾಗಿರುವ ಹೊಸ ಐದು ಪ್ರಕರಣಗಳ ತನಿಖೆಯನ್ನು ಸಿಬಿಐ ಸೋಮವಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

‘ಗುಜರಾತ್‌ ಮತ್ತು ಬಿಹಾರದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಅದು ಮರು ದಾಖಲು ಮಾಡಿಕೊಂಡಿದ್ದರೆ, ರಾಜಸ್ಥಾನದಲ್ಲಿ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಮಹಾರಾಷ್ಟ್ರದ ಲಾತೂರ್‌ನಲ್ಲಿ ವರದಿಯಾದ ಇನ್ನೊಂದು ಪ್ರಕರಣವನ್ನೂ ಸಿಬಿಐ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.  

‘ಬಿಹಾರದ ಪ್ರಕರಣಗಳನ್ನು ಬಿಟ್ಟು, ಉಳಿದ ನಾಲ್ಕು ಪ್ರತ್ಯೇಕ ಪ್ರಕರಣಗಳು ಎನ್ನಲಾಗಿದ್ದು, ನಕಲಿ ಅಭ್ಯರ್ಥಿ ಹಾಜರು, ಸ್ಥಳೀಯ ಅಧಿಕಾರಿಗಳು, ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಮತ್ತು ಅಭ್ಯರ್ಥಿಗಳು ಮಾಡಿರುವ ವಂಚನೆಗೆ ಸಂಬಂಧಿಸಿದ್ದಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.  

ಸಿಬಿಐ ಈಗಾಗಲೇ ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಭಾನುವಾರ ಒಂದು ಎಫ್‌ಐಆರ್‌ ದಾಖಲಿಸಿದೆ. ಹೊಸ ಐದು ಪ್ರಕರಣಗಳೂ ಸೇರಿದಂತೆ ಒಟ್ಟು ಆರು ಪ್ರಕರಣಗಳ ತನಿಖೆಯನ್ನು ಅದು ನಡೆಸುತ್ತಿದೆ. 

ನೀಟ್‌–ಯುಜಿ ಅಕ್ರಮ ಯುಜಿಸಿ ನೆಟ್‌ ರದ್ದು ಮಾಡಿರುವುದರ ವಿರುದ್ಧ ಸೋಮವಾರ ನವದೆಹಲಿಯಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಪಿಟಿಐ ಚಿತ್ರ
ನೀಟ್‌–ಯುಜಿ ಅಕ್ರಮ ಯುಜಿಸಿ ನೆಟ್‌ ರದ್ದು ಮಾಡಿರುವುದರ ವಿರುದ್ಧ ಸೋಮವಾರ ನವದೆಹಲಿಯಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಪಿಟಿಐ ಚಿತ್ರ
ನೀಟ್‌ ರದ್ದು ಮಾಡಿ ಹಿಂದಿನ ವ್ಯವಸ್ಥೆಯನ್ನೇ ಮರುಸ್ಥಾಪಿಸಬೇಕು. ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ

‘ಜೋಶಿ ವಿರುದ್ಧ ಕ್ರಮ ಕೈಗೊಳ್ಳದ ಕೇಂದ್ರ’ ‌

ನವದೆಹಲಿ (ಪಿಟಿಐ): ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಅಧ್ಯಕ್ಷ ಪಿ.ಕೆ.ಜೋಶಿ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್‌ ‘ಜೋಶಿ ಅವರು ದೇಶದಾದ್ಯಂತ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಕುಲಪತಿ ನಿರ್ದೇಶಕರ ನೇಮಕಾತಿಗಾಗಿ ಸಂದರ್ಶನ ಮಾಡುತ್ತಿದ್ದಾರೆ’ ಎಂದು ದೂರಿದೆ.  ‘ಅಕ್ರಮಗಳ ಕಾರಣಕ್ಕೆ ಎನ್‌ಟಿಎ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಿದ್ದರೂ ಅದರ ಅಧ್ಯಕ್ಷ ಪಿ.ಕೆ.ಜೋಶಿ ಅವರು ಕಳೆದ ವಾರ ವರ್ಧಾದ ಮಹಾತ್ಮ ಗಾಂಧಿ ವಿವಿಯ ಕುಲಪತಿ ಹುದ್ದೆಗೆ ಸಂದರ್ಶನ ನಡೆಸಿದ್ದಾರೆ. ಸೋಮವಾರ ಶಿಮ್ಲಾದ ಪ್ರತಿಷ್ಠಿತ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡಿಯ ನಿರ್ದೇಶಕರ ಸ್ಥಾನಕ್ಕೆ ಅಭ್ಯರ್ಥಿಗಳ ಸಂದರ್ಶನ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಪವನ್‌ ಖೇರಾ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.  ‘ಹಲವು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವಾಗ ಎನ್‌ಟಿಎ ಅಥವಾ ಪಿ.ಕೆ.ಜೋಶಿ ಅವರು ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಭಾಗವಾಗಲು ಅವಕಾಶ ನೀಡಬಹುದೇ’ ಎಂದೂ ಅವರು ಪ್ರಶ್ನಿಸಿದ್ದಾರೆ. 

ಪ್ರಧಾನಿ ಮಾತನಾಡಬೇಕಿತ್ತು: ಒಮರ್‌

ಶ್ರೀನಗರ (ಪಿಟಿಐ): ಲೋಕಸಭಾ ಅಧಿವೇಶನದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವುದರ ಬದಲು ನೀಟ್‌ ವಿವಾದದ ಬಗ್ಗೆ ಮಾತನಾಡಬೇಕಿತ್ತು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್‌ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.  ‘ವಿರೋಧ ಪಕ್ಷಗಳನ್ನು ಹಳಿಯುವ ಹಕ್ಕು ಪ್ರಧಾನಿಯವರಿಗೆ ಇದೆ. ಇತ್ತೀಚೆಗಿನ ಚುನಾವಣೆಯ ಬಳಿಕ ಬಿಜೆಪಿ ನಮ್ರತೆಯಿಂದ ಮಾತನಾಡುತ್ತದೆ ಎಂಬುದನ್ನು ನಾವು ನಿರೀಕ್ಷಿಸುವುದಿಲ್ಲ. ಆದರೆ ನೀಟ್ ಹಗರಣದ ವಿಚಾರವೇ ಹೆಚ್ಚು ಪ್ರಾಮುಖ್ಯವಾಗಿರುವ ಯುವಕ ಯುವತಿಯರಿಗಾಗಿ ಪ್ರಧಾನಿ ಕೆಲವು ಮಾತುಗಳನ್ನು ಹೇಳಿದ್ದರೆ ಹೆಚ್ಚು ಸಮಂಜಸವಾಗುತ್ತಿತ್ತು’ ಎಂದು ಅವರು ‘ಎಕ್ಸ್‌’ನಲ್ಲಿ ಬರೆದಿದ್ದಾರೆ.  ‘ಪರೀಕ್ಷಾ ಪೇ ಚರ್ಚೆ ಎಂಬುದು ಒಂದು ದಿನದ ಕಾರ್ಯಕ್ರಮವಲ್ಲ. ಅದು ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಕಳವಳಗಳಿಗೆ ಸಂಬಂಧಿಸಿದ ದೀರ್ಘಾವಧಿಯ ಬದ್ಧತೆಯಾಗಿದೆ’ ಎಂದು ಒಮರ್‌ ಹೇಳಿದ್ದಾರೆ. 

ಪ್ರತಿಭಟನೆ: 24ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಶಕ್ಕೆ

ನವದೆಹಲಿ (ಪಿಟಿಐ): ನೀಟ್‌ ಯುಜಿಯಲ್ಲಿ ಅಕ್ರಮ ಯುಜಿಸಿ ನೆಟ್‌ ರದ್ದು ಮಾಡಿರುವುದರ ವಿರುದ್ಧ ಸೋಮವಾರ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ಸಂಸತ್ತಿನತ್ತ ಹೆಜ್ಜೆ ಹಾಕಿದ ಎನ್‌ಎಸ್‌ಯುಐ ಕಾರ್ಯಕರ್ತರು ಸೇರಿದಂತೆ 24ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದರು.  ಕಾಂಗ್ರೆಸ್‌ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟವು (ಎನ್‌ಎಸ್‌ಯುಐ) 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭದ ಸಂದರ್ಭದಲ್ಲಿ ಸಂಸತ್ತಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.  ಜಂತರ್‌ ಮಂತರ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಕಾರರು ಸಂಸತ್ತಿನತ್ತ ತೆರಳಲು ಯತ್ನಿಸಿದರು. ವಿದ್ಯಾರ್ಥಿಗಳನ್ನು ತಡೆಯುವುದಕ್ಕಾಗಿ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದರು. ಭದ್ರತೆಗಾಗಿ ಅರೆ ಸೇನಾ ಪಡೆಗಳನ್ನೂ ನಿಯೋಜಿಸಲಾಗಿತ್ತು.  ಪ್ರತಿಭಟನಕಾರರಲ್ಲಿ ಕೆಲವರು ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದರು. ಇನ್ನೂ ಕೆಲವರು ಬ್ಯಾರಿಕೇಡ್‌ ಮೇಲೆ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ಅವರನ್ನು ವಶಕ್ಕೆ ಪಡೆದ ಪೊಲೀಸರು ವಿವಿಧ ಠಾಣೆಗಳಿಗೆ ಕರೆದೊಯ್ದರು. 

‘ನೀಟ್‌ ಭ್ರಷ್ಟಾಚಾರಕ್ಕೂ ಚುನಾವಣೆಗೂ ನಂಟು’

ನವದೆಹಲಿ (ಪಿಟಿಐ): ನೀಟ್‌ ಭ್ರಷ್ಟಾಚಾರಕ್ಕೂ ಇತ್ತೀಚೆಗೆ ನಡೆದಿರುವ ಚುನಾವಣೆಗೂ ಸಂಬಂಧವಿದೆ ಎಂದು ಆರೋಪಿಸಿರುವ ಆರ್‌ಜೆಡಿ ಸಂಸದ ಮನೋಜ್‌ ಝಾ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರಿಗೂ ಜೆಡಿಯು ಬಿಜೆಪಿ ಮುಖಂಡರಿಗೂ ನಂಟಿದೆ ಎಂದೂ ದೂರಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಝಾ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರಲ್ಲದೆ ಶಿಕ್ಷಣ ಸಚಿವ ಧರ್ಮೇಂದ್ರ ‍ಪ್ರಧಾನ್‌ ಅವರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನಿಯಮ ಜಾರಿ ಮಾಡಿದ ಕೇಂದ್ರ

ನವದೆಹಲಿ (ಪಿಟಿಐ): ಇತ್ತೀಚೆಗೆ ಜಾರಿಗೆ ಬಂದಿದ್ದ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಕಾನೂನಿನ ಅಡಿಯಲ್ಲಿ ಬರುವ ನಿಯಮಗಳನ್ನು ಜಾರಿಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ರಾಷ್ಟ್ರೀಯ ನೇಮ ಕಾತಿ ಸಂಸ್ಥೆಯು (ಎನ್‌ಆರ್‌ಎ) ಕಂಪ್ಯೂಟರ್‌ ಆಧಾರಿತ ಪರೀಕ್ಷೆಗಳಿಗೆ ನಿಯಮಗಳು, ಮಾನದಂಡಗಳನ್ನು ರೂಪಿಸುವುದನ್ನು ಕಡ್ಡಾಯ ಗೊಳಿಸಿದೆ.

ವಿವಿಧ ಸರ್ಕಾರಿ ಸಂಸ್ಥೆಗಳು ನಡೆಸುವ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗುವುದನ್ನು ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು ರೂಪಿಸಿದ್ದ ರಾಷ್ಟ್ರೀಯ ಮಟ್ಟದ ಮೊದಲ ಕಾನೂನು ಆದ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ–2024’ ಕಾರ್ಯಾಚರಣೆಗೆ ಬಂದ ಕೆಲವೇ ದಿನಗಳಲ್ಲಿ ನಿಯಮಗಳನ್ನು ನಿಗದಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಮಸೂದೆಯನ್ನು ರಾಜ್ಯಸಭೆಯು ಫೆಬ್ರುವರಿ 9ರಂದು ಮತ್ತು ಲೋಕಸಭೆಯು ಫೆಬ್ರುವರಿ 6ರಂದು ಅಂಗೀಕರಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಫೆ.12ರಂದು ಮಸೂದೆಗೆ ಅಂಕಿತ ಹಾಕಿದ್ದರು.

ನೀಟ್‌–ಪಿಜಿ ಪ್ರಕ್ರಿಯೆ ಪರಿಶೀಲನೆ: ಈ ಮಧ್ಯೆ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ವೈಜ್ಞಾನಿಕ ವಿಜ್ಞಾನ ಸಂಸ್ಥೆಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಉನ್ನತ ಅಧಿಕಾರಿಗಳು ನೀಟ್‌ ಪಿಜಿ ಪ್ರಕ್ರಿಯೆಯನ್ನು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT