ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಪನ್ನಗಳ ಪ್ರಚಾರಕ್ಕೆ ಬೆಂಬಲ | ಜವಾಬ್ದಾರಿಯಿಂದ ವರ್ತಿಸಿ: ಸುಪ್ರೀಂ ಕೋರ್ಟ್

ಜಾಹೀರಾತು: ಬೇಕು ಎಚ್ಚರ
Published 8 ಮೇ 2024, 0:30 IST
Last Updated 8 ಮೇ 2024, 0:30 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಹಕ ಬಳಕೆಯ ಉತ್ಪನ್ನಗಳಿಗೆ ತಮ್ಮ ಅನುಮೋದನೆ ನೀಡುವಾಗ ಜನಪ್ರಿಯ ವ್ಯಕ್ತಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಜಾಹೀರಾತು ನೀಡುವವರು ಹಾಗೂ ಉತ್ಪನ್ನಗಳಿಗೆ ತಮ್ಮ ಅನುಮೋದನೆ ನೀಡುವವರು ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ವಿಚಾರದಲ್ಲಿ ಸಮಾನ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದು ಅದು ತಿಳಿಸಿದೆ.

ತಪ್ಪುದಾರಿಗೆ ಎಳೆಯುವ ಜಾಹೀರಾತುಗಳಿಗೆ ಲಗಾಮು ಹಾಕಲು ಮುಂದಾಗಿರುವ ಕೋರ್ಟ್, ಯಾವುದೇ ಜಾಹೀರಾತು ನೀಡುವ ಮೊದಲು ಕೇಬಲ್ ಟಿ.ವಿ. ನೆಟ್‌ವರ್ಕ್‌ ನಿಯಮ
ಗಳು–1994ಕ್ಕೆ ಅನುಗುಣವಾಗಿ, ಜಾಹೀರಾತುದಾರರಿಂದ ಸ್ವಯಂ ಘೋಷಣೆಯೊಂದನ್ನು ಪಡೆದುಕೊಳ್ಳ
ಬೇಕು ಎಂದು ಸೂಚಿಸಿದೆ. ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇದ್ದ ವಿಭಾಗೀಯ ಪೀಠವು ಈ ಸೂಚನೆ ನೀಡಿದೆ.

ಕೇಬಲ್ ಸೇವೆಗಳ ಮೂಲಕ ಪ್ರಸಾರವಾಗುವ ಜಾಹೀರಾತುಗಳು ಕಾನೂನುಗಳಿಗೆ ಅನುಗುಣವಾಗಿ ರೂಪುಗೊಳ್ಳಬೇಕು, ಆ ಜಾಹೀರಾತುಗಳು ನೈತಿಕತೆಗೆ, ಸಭ್ಯತೆಗೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಇರಬಾರದು ಎಂದು 1994ರ ನಿಯಮಗಳು ಹೇಳುತ್ತವೆ.

‘ಉತ್ಪನ್ನವೊಂದು ಜನಪ್ರಿಯತೆ ಪಡೆಯುವಲ್ಲಿ ಜನಪ್ರಿಯ ವ್ಯಕ್ತಿಗಳು ನೀಡುವ ಅನುಮೋದನೆಯು ಬಹಳ ದೊಡ್ಡ ಪರಿಣಾಮ ಬೀರುತ್ತದೆ. ಅವರು ಜಾಹೀರಾತಿನಲ್ಲಿ ಯಾವುದೇ ಉತ್ಪನ್ನವನ್ನು ಅನುಮೋದಿಸುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದು ಪೀಠವು ಹೇಳಿದೆ.

ಆಯುಷ್ ಸಚಿವಾಲಯವು 2023ರ ಆಗಸ್ಟ್‌ 29ರಂದು ರವಾನಿಸಿದ ಪತ್ರದಲ್ಲಿ, ಪರವಾನಗಿ ನೀಡುವ ಪ್ರಾಧಿಕಾರಗಳು ‘ಔಷಧಗಳು ಹಾಗೂ ಸೌಂದರ್ಯವರ್ಧಕಗಳ ನಿಯಮಗಳ’ ಅಡಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದ್ದನ್ನು ಪೀಠವು ಪ್ರಶ್ನಿಸಿತು. ಈ ಪತ್ರವನ್ನು ಸಚಿವಾಲಯವು ತಕ್ಷಣವೇ ಹಿಂಪಡೆಯುವಂತೆ ಮಾಡಬೇಕು ಎಂದು ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರಿಗೆ ಸೂಚಿಸಿತು.

‘ಗ್ರಾಹಕನೇ ರಾಜ ಎಂದು ನಾವು ಹೇಳುತ್ತೇವೆ. ಆದರೆ, ಗ್ರಾಹಕನು ದೂರುದಾರ ಮಾತ್ರ ಆಗಿದ್ದರೆ, ತನ್ನ ದೂರಿನ ಬಗ್ಗೆ ಏನಾಗುತ್ತಿದೆ ಎಂಬುದು ಆತನಿಗೆ ತಿಳಿಯದೇ ಹೋದರೆ ಹೇಗೆ’ ಎಂದು ಪೀಠವು ‍ಪ್ರಶ್ನಿಸಿತು.

ಪತಂಜಲಿ ಆಯುರ್ವೇದ್ ಲಿಮಿಟೆಡ್‌ ಹಾಗೂ ದಿವ್ಯ ಫಾರ್ಮಸಿ ಕಂಪನಿಗೆ ಸೇರಿದ 14 ಉತ್ಪನ್ನಗಳಿಗೆ
ನೀಡಿದ್ದ ತಯಾರಿಕಾ ಪರವಾನಗಿ ರದ್ದುಪಡಿಸಲಾಗಿದೆ ಎಂದು ಉತ್ತರಾಖಂಡದ ‍ಪರವಾನಗಿ ಪ್ರಾಧಿಕಾರವು ಈ ಹಿಂದೆ ಕೋರ್ಟ್‌ಗೆ ಮಾಹಿತಿ ನೀಡಿತ್ತು.

ಮಂಗಳವಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದ ಪತಂಜಲಿ ಕಂಪನಿಯ ಪರ ವಕೀಲರನ್ನು ಪೀಠವು, ‘ಈ ಉತ್ಪನ್ನಗಳ ಜಾಹೀರಾತನ್ನು ಹಿಂಪಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿತು. ಈ ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತುಗಳು ಈಗಲೂ ಇಂಟರ್‌ನೆಟ್‌ನಲ್ಲಿ ಸಿಗುತ್ತಿವೆ ಎಂದು ಹೇಳಿತು.

‘ಮುಂದಿನ ವಿಚಾರಣೆಗೆ ಮೊದಲು ನಾವು ಈ ವಿಚಾರವಾಗಿ ಒಂದು ಕ್ರಿಯಾಯೋಜನೆ ಸಿದ್ಧಪಡಿಸಿ
ಕೊಂಡು ಬರುತ್ತೇವೆ’ ಎಂದು ವಕೀಲರು ಉತ್ತರಿಸಿದರು. ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಲಾಗಿದೆ.

ಕೋರ್ಟ್‌ ಹೇಳಿದ್ದು...

*ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ಬಗ್ಗೆ ಗ್ರಾಹಕರಿಗೆ ದೂರು ಸಲ್ಲಿಸಲು ಅನುವಾಗುವಂತೆ ಸಂಬಂಧಪಟ್ಟ ಸಚಿವಾಲಯಗಳು ನಿರ್ದಿಷ್ಟ ನಿಯಮ ರೂಪಿಸಬೇಕು. ದೂರುಗಳಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು.

*ಜಾಹೀರಾತುದಾರರು ನೀಡುವ ಸ್ವಯಂ–ಘೋಷಣೆಯನ್ನು ‘ಬ್ರಾಡ್‌ಕಾಸ್ಟ್ ಸೇವಾ’ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು.

*ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ, ಮಾಹಿತಿ ಮತ್ತು ‌ಪ್ರಸಾರ ಸಚಿವಾಲಯವು ನಾಲ್ಕು ವಾರಗಳಲ್ಲಿ ಪೋರ್ಟಲ್ ಆರಂಭಿಸಬೇಕು. ಜಾಹೀರಾತುದಾರರು ಯಾವುದೇ ಜಾಹೀರಾತು ನೀಡುವ ಮುನ್ನ ಸ್ವಯಂ–ಘೋಷಣೆ ಸಲ್ಲಿಸಬೇಕು.

*ಸ್ವಯಂ–ಘೋಷಣೆ ಸಲ್ಲಿಸಿರುವುದಕ್ಕೆ ಆಧಾರವನ್ನು ಜಾಹೀರಾತುದಾರರು ಪ್ರಕಾಶನ ಸಂಸ್ಥೆಗೆ ಅಥವಾ ಪ್ರಸಾರ ಕಂಪನಿಗೆ ಸಿಗುವಂತೆ ಮಾಡಬೇಕು.

*ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರವು 2018ರ ನಂತರದಲ್ಲಿ ಆಹಾರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ಬಗ್ಗೆ ಸ್ವೀಕರಿಸಿದ ದೂರುಗಳ ವಿವರವನ್ನು ಕೇಂದ್ರ ಆರೋಗ್ಯ ಸಚಿವಾಲಯವು ಒದಗಿಸಬೇಕು. ದೂರುಗಳ ಬಗ್ಗೆ ಕೈಗೊಂಡ ಕ್ರಮದ ಬಗ್ಗೆಯೂ ವಿವರ ನೀಡಬೇಕು.

*ಜಾಹೀರಾತು ಎಂಬುದು ಹಣದ ಪಾವತಿ ಆಗುವ ವಾಣಿಜ್ಯ ಚಟುವಟಿಕೆ. ಇದಕ್ಕೂ ಪತ್ರಿಕಾ ಸ್ವಾತಂತ್ರ್ಯಕ್ಕೂ ಸಂಬಂಧ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT