ನವದೆಹಲಿ: ಮಂಕಿಪಾಕ್ಸ್ ಪ್ರಸರಣವಿರುವ ದೇಶಕ್ಕೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಇದು ‘ಪ್ರತ್ಯೇಕ ಪ್ರಕರಣ’ವಾಗಿದ್ದು, ಸಾರ್ವಜನಿಕರಿಗೆ ತಕ್ಷಣದ ಅಪಾಯವಿಲ್ಲ ಎಂದು ಸಚಿವಾಲಯ ಹೇಳಿದೆ.
ಮಂಕಿಪಾಕ್ಸ್ ದೃಢಪಟ್ಟಿರುವ 26 ವರ್ಷದ ವ್ಯಕ್ತಿ ಹರಿಯಾಣದ ಹಿಸಾರ್‌ನ ನಿವಾಸಿಯಾಗಿದ್ದು, ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಯೋಗಾಲಯದ ಪರೀಕ್ಷೆಯು ರೋಗಿಯಲ್ಲಿ ಪಶ್ಚಿಮ ಆಫ್ರಿಕಾದ ‘ಕ್ಲಾಡ್–2 ಪಾಕ್ಸ್’ ವೈರಸ್ ಇರುವುದನ್ನು ದೃಢಪಡಿಸಿದೆ.
2022ರ ಜುಲೈನಿಂದ ಭಾರತದಲ್ಲಿ ವರದಿಯಾಗಿರುವ 30 ಪ್ರಕರಣಗಳ ರೀತಿಯಲ್ಲಿ ಇದು ಪ್ರತ್ಯೇಕ
ಪ್ರಕರಣವಾಗಿದೆ. ವಿಶ್ವ ಆರೋಗ್ಯ ಸಂಘಟನೆಯು ಮಂಕಿಪಾಕ್ಸ್ ಕ್ಲಾಡ್–1ಗೆ ಸಂಬಂಧಿಸಿದಂತೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ ಎಂದು ಸಚಿವಾಲಯ ಹೇಳಿದೆ.