ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ದಿನಗೂಲಿ: ರಾಜ್ಯದಲ್ಲಿ ಕೇವಲ ₹7 ಹೆಚ್ಚಳ

Last Updated 27 ಮಾರ್ಚ್ 2023, 4:10 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ (2023–24) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ–ನರೇಗಾ) ಅಡಿಯಲ್ಲಿನ ಕಾರ್ಮಿಕರಿಗೆ ದಿನಗೂಲಿವನ್ನು ಹೆಚ್ಚಳ ಮಾಡಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕಕ್ಕೆ ಕೇವಲ ₹ 7 ಹೆಚ್ಚಳ ಮಾಡಲಾಗಿದೆ.

ರಾಜ್ಯದಲ್ಲಿ 2022–23ರಲ್ಲಿ ನರೇಗಾ ದಿನಗೂಲಿ ₹ 309 ನಿಗದಿಯಾಗಿತ್ತು. 2023–24ಕ್ಕೆ ಅದನ್ನು ₹ 316ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಶೇಕಡ 2.27ರಷ್ಟು ಮಾತ್ರ ಹೆಚ್ಚಳ ಮಾಡಲಾಗಿದೆ. ದಿನಗೂಲಿ ಕನಿಷ್ಠ ಪ್ರಮಾಣದಲ್ಲಿ ಹೆಚ್ಚಳ ವಾದ ಪಟ್ಟಿಯಲ್ಲಿ ಗೋವಾ (ಶೇ 2.22) ಇದ್ದರೆ, ಅದರ ನಂತರದ ಸ್ಥಾನದಲ್ಲೇ ಕರ್ನಾಟಕ ಇದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿ ವಾಲಯವು ಇದೇ 24ರಂದು ನರೇಗಾ ಯೋಜನೆಯಡಿಯಲ್ಲಿನ ಕೂಲಿಯ ದರವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ₹ 7ರಿಂದ ₹ 26ರ ತನಕ ವೇತನ ಹೆಚ್ಚಳವಾಗಿದೆ.

ರಾಜಸ್ಥಾನದಲ್ಲಿ ವೇತನ ಪ್ರಮಾಣ ಶೇ 10.39ರಷ್ಟು ಹೆಚ್ಚಳ ಮಾಡಲಾಗಿದೆ. ಇದು ದೇಶದಲ್ಲೇ ಗರಿಷ್ಠ. ಆದರೆ ರಾಜಸ್ಥಾನದಲ್ಲಿ ದಿನಗೂಲಿ ₹ 255 ರಷ್ಟೇ ಇದೆ. ಹರಿಯಾಣದಲ್ಲಿ ದೇಶದಲ್ಲೇ ಗರಿಷ್ಠ ಪ್ರಮಾಣದ ದಿನಗೂಲಿ ₹ 357 ಇದೆ.

ದೇಶದಲ್ಲೇ ಅತ್ಯಂತ ಕನಿಷ್ಠ ದಿನಗೂಲಿ ಇರುವ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಇವೆ. ಈ ಎರಡೂ ರಾಜ್ಯಗಳಲ್ಲಿ
₹ 221 ಮಾತ್ರ ಇದೆ. ಛತ್ತೀಸಗಢ ಮತ್ತು ಮಧ್ಯಪ್ರದೇಶದಲ್ಲಿ ಕಳೆದ ವರ್ಷ ₹ 204 ವೇತನವಿತ್ತು. ಈ ವರ್ಷ ಶೇ 17ರಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿದ್ದು ವೇತನದರವು ₹221 ಆಗಿದೆ.

ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ವೇತನ ದರವು ಕಳೆದ ವರ್ಷಕ್ಕಿಂತ ಶೇ 8ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಈ ರಾಜ್ಯಗಳಲ್ಲಿ ದಿನಕ್ಕೆ ₹ 210 ವೇತನವಿತ್ತು. ಇದೀಗ ₹ 228ಕ್ಕೆ ವೇತನ ಹೆಚ್ಚಳವಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ನರೇಗಾಕ್ಕೆ ತೆಗೆದಿರಿಸಿದ ಮೊತ್ತವನ್ನು ₹ 60 ಸಾವಿರ ಕೋಟಿಗೆ ಮಿತಿಗೊಳಿಸಲಾಗಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮೊತ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT