ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳ ನೇಮಕ | ಸಮಸ್ಯೆ ಸೃಷ್ಟಿಸುತ್ತಿರುವ ಕೇಂದ್ರದ ನಡೆ: ಕೋರ್ಟ್ ಕಳವಳ

Published 7 ನವೆಂಬರ್ 2023, 23:30 IST
Last Updated 7 ನವೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಕೊಲಿಜಿಯಂ ಕಳುಹಿಸಿದ ಹೆಸರುಗಳ ಪೈಕಿ ಆಯ್ದ ಕೆಲವಕ್ಕೆ ಮಾತ್ರ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದು ಸಮಸ್ಯೆ ಸೃಷ್ಟಿಸುವಂಥದ್ದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

ಒಂದು ಹೈಕೋರ್ಟ್‌ನಿಂದ ಇನ್ನೊಂದು ಹೈಕೋರ್ಟ್‌ಗೆ ವರ್ಗಾವಣೆಗೆ ಶಿಫಾರಸು ಮಾಡಿದ್ದ ನ್ಯಾಯಮೂರ್ತಿಗಳ ಹೆಸರುಗಳು ಕೇಂದ್ರದ ಬಳಿ ಹಾಗೆಯೇ ಉಳಿದಿವೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರು ಇದ್ದ ನ್ಯಾಯಪೀಠವು ಹೇಳಿದೆ.

‘ಸರ್ಕಾರಕ್ಕೆ ರುಚಿಸದ ರೀತಿಯಲ್ಲಿ ಈ ನ್ಯಾಯಾಲಯ ಅಥವಾ ಕೊಲಿಜಿಯಂ ತೀರ್ಮಾನ ತೆಗೆದುಕೊಳ್ಳಬೇಕಾಗುವ ಸಂದರ್ಭವು ಸೃಷ್ಟಿ ಆಗುವುದಿಲ್ಲ ಎಂಬುದು ನಮ್ಮ ಆಶಯ’ ಎಂದು ಕೂಡ ಪೀಠವು ಹೇಳಿದೆ. ನ್ಯಾಯಮೂರ್ತಿಗಳ ನೇಮಕ ಹಾಗೂ ವರ್ಗಾವಣೆಗೆ ಸಂಬಂಧಿಸಿದ ಶಿಫಾರಸುಗಳ ವಿಚಾರದಲ್ಲಿ ಕೇಂದ್ರವು ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಕೆಲವು ಹೆಸರುಗಳಿಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುತ್ತಿವೆ ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು. ಆದರೆ ಕೆಲವರ ವಿಚಾರದಲ್ಲಿ ಮಾತ್ರ ತ್ವರಿತವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಸಮಸ್ಯೆಗಳನ್ನು ಸೃಷ್ಟಿಸಿದೆ. ಇಂತಹ ಕೆಲಸ ಮಾಡಬಾರದು ಎಂದು ಕೌಲ್ ಅವರು ಕಿವಿಮಾತು ಹೇಳಿದರು.

ಯಾವ ನ್ಯಾಯಮೂರ್ತಿ ಯಾವ ಹೈಕೋರ್ಟ್‌ನಲ್ಲಿ ಕೆಲಸ ಮಾಡಬೇಕು ಎಂಬುದನ್ನು ನ್ಯಾಯಾಂಗವೇ ತೀರ್ಮಾನಿಸಬೇಕು ಎಂದು ಕೂಡ ಪೀಠವು ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT