ನವದೆಹಲಿ: ವ್ಯಕ್ತಿಯ ಮನಸ್ಸು, ವರ್ತನೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ 'ಅಲ್ಪ್ರಜೋಲಂ' (Alprazolam) ರಾಸಾಯನಿಕ ತಯಾರಿಸಿ, ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಹರ್ಬಲ್ ಹೆಲ್ತ್‌ಕೇರ್ ಕಂಪನಿಯ ಸಿಇಒ ಸೇರಿದಂತೆ ಆರು ಮಂದಿಯನ್ನು ದೆಹಲಿ–ಎನ್‌ಸಿಆರ್‌ನಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಹರಿಯಾಣದ ಹಿಸಾರ್‌ನಲ್ಲಿರುವ, 'ಬಯೋಕೇಸ್ ಫುಡ್ಸ್ ಅಂಡ್ ಎಕ್ಸ್‌ಟ್ರಾಕ್ಟ್ಸ್ ಪ್ರೈವೇಟ್ ಲಿಮಿಟೆಡ್' ಘಟಕದಲ್ಲಿ ಈ ರಾಸಾಯನಿಕವನ್ನು ಅಕ್ರಮವಾಗಿ ತಯಾರಿಸಲಾಗುತ್ತಿತ್ತು. ಬಂಧಿತ ಹಾಗೂ ಈ ಘಟಕದ ಮಾಲೀಕ ಡಾ. ನವೀನ್ ಅಗರವಾಲ್ 'ಇಂಡಿಯನ್ ಅಚೀವರ್ಸ್' ಹಾಗೂ 'ಸಿಇಒ ಆಫ್ ದಿ ಇಯರ್' ಪ್ರಶಸ್ತಿಗಳನ್ನು ಕಳೆದ ವರ್ಷ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಔಷಧ ಕಂಪನಿ 'ಶಕ್ತಿ ಎಂಟರ್‌ಪ್ರೈಸಸ್ ಲಿಮಿಟೆಡ್' ಮಾಲೀಕ ಆನಂದ್ ಕುಮಾರ್ ಅಲಿಯಾಸ್ ಸೋನು ಎಂಬಾತನನ್ನೂ ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಅಮಿತ್ ಗೋಯಲ್ ತಿಳಿಸಿದ್ದಾರೆ.
ದೀಪಕ್ ಕುಮಾರ್, ರಾಜೇಂದ್ರ ಕುಮಾರ್ ಮಿಶ್ರಾ, ರಾಮ್ ಆಶಿಷ್ ಮೌರ್ಯ ಮತ್ತು ಮುಕೇಶ್ ಕುಮಾರ್ ಇತರ ಬಂಧಿತರು. ಇವರೆಲ್ಲ ರಾಸಾಯನಿಕ ಸರಬರಾಜು ಮಾಡುತ್ತಿದ್ದರು ಎಂದು ಡಿಸಿಪಿ ವಿವರಿಸಿದ್ದಾರೆ.
Nutriley Pvt. Ltd ಕಂಪನಿಯನ್ನೂ ಹೊಂದಿರುವ ನವೀನ್ ಅಗರವಾಲ್, 2023ರಲ್ಲಿ 'ಇಂಡಿಯನ್ ಅಚೀವರ್ಸ್' ಅವಾರ್ಡ್ ಪಡೆದಿದ್ದರು.
ರಾಜೇಂದರ್ ಪ್ರಸಾದ್ ಮಿಶ್ರಾ ಅಲಿಯಾಸ್ ಆರ್.ಪಿ. ಎಂಬಾತನನ್ನು ದೆಹಲಿಯ ಬ್ರಿಜ್‌ಪುರಿಯಲ್ಲಿ ಇದೇ ವರ್ಷ ಮಾರ್ಚ್ 23ರಂದು ಬಂಧಿಸಿದ್ದ ಪೊಲೀಸರು, 'ಅಲ್ಪ್ರಜೋಲಂ' ಮಾರಾಟ ಜಾಲವನ್ನು ಭೇದಿಸಿದ್ದರು. ಆತನಿಂದ ಸುಮಾರು 18 ಕೆ.ಜಿ.ಯಷ್ಟು ಅಲ್ಪ್ರಜೋಲಂ ಪೌಡರ್ ವಶಕ್ಕೆ ವಡೆದಿದ್ದರು.