ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಷೇಪಾರ್ಹ ವಿಡಿಯೊ ಬಯಲು ವದಂತಿ: ಚಂಡೀಗಡ ವಿ.ವಿಯಲ್ಲಿ ಪ್ರತಿಭಟನೆ

Last Updated 18 ಸೆಪ್ಟೆಂಬರ್ 2022, 19:59 IST
ಅಕ್ಷರ ಗಾತ್ರ

ಚಂಡೀಗಡ:ಹಲವು ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೊಗಳನ್ನು ವಿದ್ಯಾರ್ಥಿನಿಯೊಬ್ಬರು ಚಿತ್ರೀಕರಿಸಿದ್ದಾರೆ ಎಂಬ ವದಂತಿಯ ಬಳಿಕ ಪಂಜಾಬ್‌ನ ಮೊಹಾಲಿಯ ಚಂಡೀಗಡವಿಶ್ವವಿದ್ಯಾಲಯವೊಂದರಲ್ಲಿ ಭಾರಿ ಪ್ರತಿಭಟನೆ ಶನಿವಾರ ರಾತ್ರಿ ನಡೆದಿದೆ. ಈ ಕುರಿತು ತನಿಖೆ ನಡೆಸಲು ಮುಖ್ಯಮಂತ್ರಿ ಭಗವಂತ ಮಾನ್‌ ಆದೇಶ ನೀಡಿದ್ದಾರೆ.

ಪ್ರಾಥಮಿಕ ತನಿಖೆಯ ಬಳಿಕ ಒಬ್ಬ ಆರೋಪಿ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಗೆಳೆಯ ಎಂದು ಹೇಳಲಾದ ಯುವಕನೊಬ್ಬನನ್ನು ಹಿಮಾಚಲ ಪ್ರದೇಶದಲ್ಲಿ ಬಂಧಿಸಲಾಗಿದೆ.

ಪಂಜಾಬ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಗುರ್‌ಪ್ರೀತ್‌ ಕೌರ್‌ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಒಬ್ಬ ವಿದ್ಯಾರ್ಥಿನಿಯು ತನ್ನ ವಿಡಿಯೊವನ್ನು ಯುವಕನೊಬ್ಬನ ಜೊತೆ ಹಂಚಿಕೊಂಡಂತೆ ಕಾಣಿಸುತ್ತಿದೆ. ಇತರ ಯಾವುದೇ ವಿದ್ಯಾರ್ಥಿನಿಯ ಆಕ್ಷೇಪಾರ್ಹವಾದ ವಿಡಿಯೊ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಹಾಸ್ಟೆಲ್‌ನಲ್ಲಿ ಇರುವ ಹಲವು ವಿದ್ಯಾರ್ಥಿನಿಯರ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ ಎಂಬುದು ಸುಳ್ಳು ಮತ್ತು ಆಧಾರರಹಿತ. ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದೂ ಸುಳ್ಳು ಎಂದು ವಿಶ್ವವಿದ್ಯಾಲಯ ಹೇಳಿದೆ.

ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಭಾನುವಾರ ಸಂಜೆಯೂ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತವು ಘಟನೆಯನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.

ಬಂಧಿಸಲಾಗಿರುವ ವಿದ್ಯಾರ್ಥಿನಿಯ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮೊಹಾಲಿಯ ಎಸ್‌‍ಪಿ ವಿವೇಕ್‌ ಶೀಲ್‌ ಸೋನಿ ಹೇಳಿದ್ದಾರೆ.

ಹಾಸ್ಟೆಲ್‌ನಲ್ಲಿ 4,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ.

ರಾಜಕೀಯ ಪಕ್ಷಗಳ ಆಘಾತ:ರಾಜಕೀಯ ‍ಪಕ್ಷಗಳು, ಕೇಂದ್ರ ಮತ್ತು ರಾಜ್ಯ ಮಹಿಳಾ ಆಯೋಗಗಳು ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿವೆ. ‘ಚಂಡೀಗಡ ವಿಶ್ವವಿದ್ಯಾಲಯದಲ್ಲಿ ಆಗಿರುವುದು ದುರದೃಷ್ಟಕರ. ಹೆಣ್ಣು ಮಕ್ಕಳು ನಮ್ಮ ಗೌರವ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ’ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಹೇಳಿದ್ದಾರೆ.

ಪಂಜಾಬ್‌ ಮಹಿಳಾ ಆಯೋಗದ ಅಧ್ಯಕ್ಷೆ ಮನೀಷಾ ಗುಲಾಟಿ ಅವರು ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಪಂಜಾಬ್‌ ಪೊಲೀಸ್‌ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ತಕ್ಷಣವೇ ಎಫ್ಐಆರ್ ದಾಖಲಿಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌, ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌, ಶಿರೋಮಣಿ ಅಕಾಲಿದಳ ನಾಯಕಿ ಹರ್‌ಸಿಮ್ರತ್ ಕೌರ್‌ ಬಾದಲ್‌ ಮತ್ತು ಇತರರು ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ಆಗ್ರಹಿಸಿದ್ದಾರೆ.

ಘಟನೆಯ ಸ್ಪಷ್ಟ ಚಿತ್ರಣ ಇಲ್ಲ

ಹಾಸ್ಟೆಲ್‌ನಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ಆರೋಪಿ ವಿದ್ಯಾರ್ಥಿನಿಯು ಹಾಸ್ಟೆಲ್‌ನ ಶೌಚಾಲಯದಲ್ಲಿ ಮೊಬೈಲ್‌ ಬಳಸಿ ಫೋಟೊ ತೆಗೆಯುವುದನ್ನು ಮೂರ್ನಾಲ್ಕು ವಿದ್ಯಾರ್ಥಿನಿಯರು ಗಮನಿಸಿದ್ದಾರೆ. ಆರೋಪಿಯು ಶೌಚಾಲಯದ ಬಾಗಿಲಿನ ಕೆಳಗಿನಿಂದ ಚಿತ್ರೀಕರಿಸಿದ್ದಾರೆ ಎಂದು ಈ ಮೂರ್ನಾಲ್ಕು ವಿದ್ಯಾರ್ಥಿನಿಯರು ಭಾವಿಸಿದ್ದಾರೆ. ಬಳಿಕ, ಅವರು ಹಾಸ್ಟೆಲ್‌ ವಾರ್ಡನ್‌ಗೆ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಗುರ್‌ಪ್ರೀತ್‌ ಹೇಳಿದ್ದಾರೆ.

‘ವಿದ್ಯಾರ್ಥಿನಿಯರ ಕಳವಳವನ್ನು ಪರಿಹರಿಸಲಾಗಿದೆ. ಇತರ ವಿದ್ಯಾರ್ಥಿನಿಯರ ವಿಡಿಯೊಗಳು ಆರೋಪಿಯ ಮೊಬೈಲ್‌ನಲ್ಲಿ ಇವೆಯೇ ಎಂಬುದು ಅವರ ಕಳವಳವಾಗಿತ್ತು. ಆದರೆ, ಬೇರೆ ವಿದ್ಯಾರ್ಥಿನಿಯರ ವಿಡಿಯೊ ಆರೋಪಿಯ ಮೊಬೈಲ್‌ನಲ್ಲಿ ಸಿಕ್ಕಿಲ್ಲ’ ಎಂದು ಗುರ್‌ಪ್ರೀತ್‌ ತಿಳಿಸಿದ್ದಾರೆ.

ವಿದ್ಯಾರ್ಥಿನಿಯರು ಆರೋಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೊ ಬಗ್ಗೆ ಸತ್ಯ ಹೇಳುವಂತೆ ವಿದ್ಯಾರ್ಥಿನಿಯರು ಆರೋಪಿಯ ಮೇಲೆ ಒತ್ತಡ ಹೇರಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊದಲ್ಲಿ ಇದೆ.

ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಘಾತಗೊಂಡಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.

‘ವಿಡಿಯೊ ಚಿತ್ರೀಕರಣ ಮಾಡಿದ್ದು ಏಕೆ? ನಿನ್ನನ್ನು ಅಮಾನತು ಮಾಡುತ್ತೇನೆ’ ಎಂದು ಹಾಸ್ಟೆಲ್‌ನ ವಾರ್ಡನ್‌ ಹೇಳಿದ್ದಾರೆ ಎನ್ನಲಾದ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT