ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆಕ್ಷೇಪದ ನಡುವೆಯೂ ಚೀನಾದ ಕಣ್ಗಾವಲು ಹಡಗು ಶ್ರೀಲಂಕಾದ ಬಂದರಲ್ಲಿ ಲಂಗರು

Last Updated 16 ಆಗಸ್ಟ್ 2022, 4:56 IST
ಅಕ್ಷರ ಗಾತ್ರ

ಹಂಬಂಟೋಟಾ: ಚೀನಾದ ಕಣ್ಗಾವಲು ಹಡಗು ‘ಯುವಾನ್ ವಾಂಗ್ 5’ ಶ್ರೀಲಂಕಾದ ಹಂಬಂಟೋಟಾದಲ್ಲಿರುವ ಚೀನಾ ನಿರ್ಮಿತ ಬಂದರಿಗೆ ಬಂದು ಲಂಗರು ಹಾಕಿದೆ.

ಚೀನಾದ ಈ ಹಡಗು ಲಂಗರು ಹಾಕಲು ಅವಕಾಶ ನೀಡಿರುವುದಕ್ಕೆ ಭಾರತವು ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ಆಕ್ಷೇಪವನ್ನು ಉಪೇಕ್ಷಿಸಿರುವ ಶ್ರೀಲಂಕಾ ಕಣ್ಗಾವಲು ಹಡಗಿಗೆ ಅನುಮತಿ ನೀಡಿದೆ.

ಏಷ್ಯಾ-ಯುರೋಪ್ ಮುಖ್ಯ ಹಡಗು ಮಾರ್ಗದ ಬಳಿಯಿರುವ ಹಂಬಂಟೋಟಾ ಬಂದರನ್ನು ಚೀನಾ ತನ್ನ ಮಿಲಿಟರಿ ನೆಲೆಯಾಗಿ ಪರಿವರ್ತಿಸಿಕೊಳ್ಳಲಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ.

ಚೀನಾದ ‘ಯುವಾನ್‌ ವಾಂಗ್‌ 5’ ನೌಕೆಯು ಹೊಸ ಪೀಳಿಕೆಯ ಬಾಹ್ಯಾಕಾಶ ವಿಚಕ್ಷಣ ಹಡಗುಗಳಲ್ಲಿ ಒಂದು ಎಂದು ವಿದೇಶಿ ಭದ್ರತಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದು ಉಪಗ್ರಹ, ರಾಕೆಟ್ ಮತ್ತು ಖಂಡಾಂತರ ಕ್ಷಿಪಣಿ ಉಡಾವಣೆಗಳ ಮೇಲೆ ಕಣ್ಣಿಡಲಿದೆ ಎಂದು ಹೇಳಿದ್ದಾರೆ.

‘ಯುವಾನ್ ವಾಂಗ್’ ಸರಣಿಯ ಹಡಗುಗಳನ್ನು ಚೀನಾ ಸೇನೆ – ‘ಪೀಪಕ್ಸ್‌ ಲಿಬರೇಷನ್‌ ಆರ್ಮಿ’ಯ (ಪಿಎಲ್‌ಎ) ‘ಕಾರ್ಯತಂತ್ರ ನೆರವು ಪಡೆ’ ನಿರ್ವಹಿಸುತ್ತದೆ ಎಂದು ಅಮೆರಿಕ ಹೇಳಿದೆ.

ಭಾರತ ಮತ್ತು ಅಮೆರಿಕ ಎತ್ತಿರುವ ಭದ್ರತಾ ಆತಂಕದ ಹೊರತಾಗಿಯೂ ‘ಯುವಾನ್ ವಾಂಗ್ 5’ ಹಂಬಂಟೋಟಾದಲ್ಲಿ ಲಂಗರು ಹಾಕಲು ಶ್ರೀಲಂಕಾ ಕಳೆದ ಶನಿವಾರ ಅನುಮತಿ ನೀಡಿತ್ತು.

ಹಡಗನ್ನು ಅಲ್ಲಿಂದ ಕಳುಹಿಸುವಂತೆ ಶ್ರೀಲಂಕಾದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳನ್ನು ಭಾರತ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT