ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಪ್ರೀಂ ಕೋರ್ಟ್‌ ಒಳಮೀಸಲಾತಿ ತೀರ್ಪು ವಿರೋಧಿಸಿದ ಎಲ್‌ಜೆಪಿ

Published 3 ಆಗಸ್ಟ್ 2024, 13:06 IST
Last Updated 3 ಆಗಸ್ಟ್ 2024, 13:06 IST
ಅಕ್ಷರ ಗಾತ್ರ

ಪಟ್ನಾ: ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ನೀಡುವ ಶೇ 15ರಷ್ಟು ಪ್ರಮಾಣದ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಕೇಂದ್ರ ಸಚಿವ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಶನಿವಾರ ವಿರೋಧಿಸಿದ್ದಾರೆ. ತೀರ್ಪನ್ನು ಮರುಪರಿಶೀಲಿಸುವಂತೆ ಪಕ್ಷವು ಸುಪ್ರೀಂ ಕೋರ್ಟ್‌ ಅನ್ನು ಕೋರಲಿದೆ ಎಂದಿದ್ದಾರೆ.

ತೀರ್ಪಿನ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಚಿರಾಗ್‌, ‘ಎಸ್‌ಸಿ ಕೋಟಾದಲ್ಲಿ ಕೆನೆಪದರ ಕಲ್ಪಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಶತ ಶತಮಾನಗಳಿಂದ ಅಸ್ಪೃಶ್ಯತೆಯನ್ನು ಅನುಭವಿಸಿಕೊಂಡು ಬಂದಿರುವವರ ಅಭ್ಯುದಯದ ಆಶಯದಿಂದ ಎಸ್‌ಸಿ ಸಮುದಾಯಕ್ಕೆ ಮೀಸಲಾತಿಯನ್ನು ನೀಡಲಾಗಿದೆ. ಒಳಮೀಸಲಾತಿ ನೀಡುವುದರಿಂದ ಈ ಆಶಯಕ್ಕೆ ಧಕ್ಕೆ ಆಗಲಿದೆ’ ಎಂದು ಚಿರಾಗ್‌ ಪ್ರತಿಕ್ರಿಯೆ ನೀಡಿದ್ದಾರೆ.

‘ಇಡೀ ತೀರ್ಪಿನಲ್ಲಿ ಎಲ್ಲಿಯೂ ಅಸ್ಪೃಶ್ಯತೆ ಎನ್ನುವ ಪದವನ್ನೇ ನ್ಯಾಯಾಲಯ ಉಲ್ಲೇಖಿಸಿಲ್ಲ. ಎಸ್‌ಸಿ ಸಮುದಾಯಕ್ಕೆ ಸೇರಿದ ಬಹುಪಾಲು ಮಂದಿಗೆ ಶಿಕ್ಷಣದ ಅವಕಾಶ ದಕ್ಕಿರಬಹುದು. ತುಸು ಮಟ್ಟಿಗೆ ಅನುಕೂಲಸ್ಥರೂ ಆಗಿರಬಹುದು. ಆದರೆ, ಇವರೂ ಅಸ್ಪೃಶ್ಯತೆಯನ್ನು ಅನುಭವಿಸುತ್ತಾರೆ. ಆದ್ದರಿಂದ, ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ನೀಡಿರುವ ಅಧಿಕಾರವನ್ನು ಸಮರ್ಥನೆ ಮಾಡಿಕೊಳ್ಳಲಾಗದು’ ಎಂದರು.

ಇದೇ ವೇಳೆ ಜೆಡಿಯು ಪಕ್ಷವು ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸಿದೆ. ‘ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಹಲವು ವರ್ಷಗಳ ಹಿಂದೆಯೇ ರಾಜ್ಯದಲ್ಲಿ ‘ಮಹಾದಲಿತ’ ಎನ್ನುವ ವರ್ಗವನ್ನು ರೂಪಿಸಿದ್ದರು. ಸುಪ್ರೀಂ ಕೋರ್ಟ್‌ನ ಈ ತೀರ್ಪು ನಿತೀಶ್‌ ಅವರ ಆ ನಿರ್ಧಾರಕ್ಕೆ ಮುದ್ರೆ ಒತ್ತಿದಂತಿದೆ’ ಎಂದು ಜೆಡಿಯು ಹೇಳಿಕೊಂಡಿದೆ. ಎನ್‌ಡಿಎ ಮೈತ್ರಿಕೂಟದ ಸದಸ್ಯ ಪಕ್ಷವಾದ ಜೆಡಿಯುದ ಈ ನಡೆ ಕುರಿತು ಚಿರಾಗ್‌ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT